ಪ್ಯಾರಾಚ್ಯೂಟ್ ಮೂಲಕ ಭೂಮಿಗೆ ಹಾರಿದ ಗಗನಯಾತ್ರಿಗಳು
ವಾಷಿಂಗ್ಟನ್: ಸುಮಾರು 50 ವರ್ಷಗಳ ಬಳಿಕ ಮತ್ತೆ ಮಾನವ ಚಂದಿರನ ಸನಿಹಕ್ಕೆ ಹೋಗಿ ಬಂದ ಕ್ಷಣಕ್ಕೆ ಸಾಕ್ಷಿಯಾಗಿದ್ದು, ನಾಸಾದ ಐತಿಹಾಸಿಕ ಅರ್ಟೆಮಿಸ್-II (Artemis II) ಮಿಷನ್‌ನ ನಾಲ್ವರು ಗಗನಯಾತ್ರಿಗಳು ಶನಿವಾರ(ಏ. 11) ಮುಂಜಾನೆ ಪೆಸಿಫಿಕ್ ಮಹಾಸಾಗರದಲ್ಲಿ ಯಶಸ್ವಿಯಾಗಿ ಇಳಿಯುವ (Splashdown) ಮೂಲಕ ತಮ್ಮ 10 ದಿನಗಳ ರೋಚಕ ಚಂದ್ರಯಾನವನ್ನು ಯಶಸ್ವಿಗೊಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ನಾಸಾ, ಚಂದ್ರಯಾನಕ್ಕೆ ತೆರಳಿದ್ದ ಗಗನಯಾತ್ರಿಗಳಾದ ರೀಡ್ ವೈಸ್‌ಮನ್(ಕಮಾಂಡರ್), ವಿಕ್ಟರ್ ಗ್ಲೋವರ್(ಪೈಲಟ್), ಕ್ರಿಸ್ಟಿನಾ ಕೋಚ್ ಹಾಗೂ ಜೆರೆಮಿ ಹ್ಯಾನ್ಸೆನ್ ಸುರಕ್ಷಿತವಾಗಿ ಹಿಂದಿರುಗಿದ್ದಾರೆ. ಹಿಂದಿರುಗುವ ಪ್ರಯಾಣದಲ್ಲಿ 25,000 ಮೈಲುಗಳ ವೇಗದಲ್ಲಿ ಭೂಮಿಯ ವಾತಾವರಣವನ್ನು ಪ್ರವೇಶಿಸಿದ ಗಗನಯಾತ್ರಿಗಳು 20 ಮೈಲುಗಳ ವೇಗದಲ್ಲಿ ಪ್ಯಾರಾಚೂಟ್‌ಗಳ ಸಹಾಯದಿಂದ ಸಮುದ್ರದಲ್ಲಿ ಇಳಿಯುವ ಮೂಲಕ ಇತಿಹಾಸ ನಿರ್ಮಿಸಿದರು ಎಂದು ನಾಸಾ ತಿಳಿಸಿದೆ.
ಆರ್ಟೆಮಿಸ್-2 ಮಿಷನ್ ಅನ್ನು ಏಪ್ರಿಲ್ 1ರಂದು ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡಲಾಯಿತು. ಸುಮಾರು 50 ವರ್ಷಗಳ ನಂತರ ಮಾನವರು ಬಾಹ್ಯಾಕಾಶದಲ್ಲಿ ದೀರ್ಘ ದೂರ ಪ್ರಯಾಣಿಸಿದ್ದರಿಂದ ಈ ಪ್ರವಾಸವು ಪ್ರಪಂಚದಾದ್ಯಂತದ ಎಲ್ಲರ ಗಮನ ಸೆಳೆಯಿತು.
ಈ ಕಾರ್ಯಾಚರಣೆಯ ಮೂಲಕ ಗಗನಯಾತ್ರಿಗಳು 2,48,655 ಮೈಲುಗಳಷ್ಟು ದೂರ ಪ್ರಯಾಣಿಸಿ ಹೊಸ ದಾಖಲೆಯನ್ನು ಸೃಷ್ಟಿಸಿದ್ದು, ನಾಸಾದ ಅಪೊಲೊ-13 ಮಿಷನ್ ಈ ಹಿಂದೆ ಸ್ಥಾಪಿಸಿದ್ದ ದಾಖಲೆಯನ್ನು ಈ ಗಗನಯಾತ್ರಿಗಳು ಮೀರಿಸಿದ್ದಾರೆ. ಚಂದ್ರನ ದೂರದ ಭಾಗಕ್ಕೆ ಹೋದ ಗಗನಯಾತ್ರಿಗಳು ಭೂಮಿ ಮತ್ತು ಚಂದ್ರನ ನಡುವಿನ ಗುರುತ್ವಾಕರ್ಷಣೆ ಮತ್ತು ಇತರ ಅಂಶಗಳನ್ನು ಪರೀಕ್ಷಿಸಿದರು. ಭವಿಷ್ಯದಲ್ಲಿ ಮತ್ತೆ ಚಂದ್ರನಿಗೆ ಮನುಷ್ಯರನ್ನು ಕಳುಹಿಸುವತ್ತ ಈ ಮಿಷನ್ ಒಂದು ಪ್ರಮುಖ ಹೆಜ್ಜೆಯಾಗಿದೆ ಎನ್ನಲಾಗಿದೆ (ಏಜೆನ್ಸೀಸ್).