(ಚಿತ್ರ X) 
ವಿದೇಶ

ಜ್ಞಾನಿಗಳಿಗೂ ಶಾಕ್ ಕೊಟ್ಟ ನಾಸಾ ಜೂನೋ: ಐಒ ಉಪಗ್ರಹದ ಅಂತರಂಗದ ಉಷ್ಣತೆ ಕಂಡು ವಿಜ್ಞಾನಿಗಳೇ ವಿಸ್ಮಯ! Juno Space craft

Juno Spacecraft: ಸೌರಮಂಡಲದ ಅತ್ಯಂತ ಹೆಚ್ಚು ಜ್ವಾಲಾಮುಖಿ ಸಕ್ರಿಯತೆಯನ್ನು ಹೊಂದಿರುವ ಗುರುವಿನ ಉಪಗ್ರಹ 'ಐಒ' (Io) ಕುರಿತು ನಾಸಾದ 'ಜೂನೋ'  ಬಾಹ್ಯಾಕಾಶ ನೌಕೆಯು ಅತ್ಯಂತ ಅಪರೂಪದ ಹಾಗೂ ಪ್ರಮುಖ ಮಾಹಿತಿಯನ್ನು ಹೊರಹಾಕಿದೆ. 'ಜರ್ನಲ್ ಆಫ್ ಜಿಯೋಫಿಸಿಕ್ಸ್ ರಿಸರ್ಚ್: ಪ್ಲಾನೆಟ್ಸ್ ಪತ್ರಿಕೆಯಲ್ಲಿ ಪ್ರಕಟವಾದ ಹೊಸ ಸಂಶೋಧನಾ ವರದಿಯ ಪ್ರಕಾರ, ಐಒ ಉಪಗ್ರಹದ ಕಾವೇರಿದ ಮೇಲ್ಮೈ ಮತ್ತು ಅದರ ಒಳಪದರದ ತಾಪಮಾನದ ಕುರಿತು ಅಭೂತಪೂರ್ವ ಆಲ್ಟ್ರಾ-ಹೈ ರೆಸಲ್ಯೂಶನ್ ಥರ್ಮಲ್ ಚಿತ್ರಗಳು ಲಭ್ಯವಾಗಿವೆ.

ತ್ಯಾಜ್ಯವಲ್ಲ, ಗ್ರಹಗಳ ನಡುವಿನ ‘ಗುರುತ್ವದ ಕಸರತ್ತು’!

ಭೂಮಿಯ ಚಂದ್ರನಿಗಿಂತ ಸ್ವಲ್ಪ ದೊಡ್ಡದಾಗಿರುವ 'ಐಒ', ಬೃಹತ್ ಜುಪಿಟರ್ ಗ್ರಹ ಹಾಗೂ ಅದರ ನೆರೆಹೊರೆಯ ಉಪಗ್ರಹಗಳಾದ ಯುರೋಪಾ (Europa) ಮತ್ತು ಗ್ಯಾನಿಮೀಡ್ (Ganymede) ನಡುವಿನ ತೀವ್ರತರವಾದ ಗುರುತ್ವಾಕರ್ಷಣೆಯ ಸೆಳೆತಕ್ಕೆ ಸಿಲುಕಿದೆ. ಈ ನಿರಂತರ ಟಗ್ ಆಫ್ ವಾರ್’ ಅಥವಾ ಒತ್ತಡದಿಂದಾಗಿ ಐಒ ಉಪಗ್ರಹದ ಒಳಭಾಗದಲ್ಲಿ ಶಕ್ತಿಯುತ ಉಷ್ಣತೆ ಹಾಗೂ ಆಂತರಿಕ ಘರ್ಷಣೆ ಉಂಟಾಗುತ್ತದೆ. ಈ ತೀವ್ರ ಉಷ್ಣತೆಯೇ ಅಲ್ಲಿ ನೂರಾರು ಸಕ್ರಿಯ ಜ್ವಾಲಾಮುಖಿಗಳು ಹಾಗೂ ಲಾವಾರಸದ ಸರೋವರಗಳು ಸೃಷ್ಟಿಯಾಗಲು ಮೂಲ ಕಾರಣವಾಗಿದೆ.

ಮೇಲ್ಮೈ ಕೆಳಗಿನ ತಾಪಮಾನ ಶೋಧಿಸಿದ ‘ಜಿರಾಮ್’

ಜೂನೋ ನೌಕೆಯಲ್ಲಿರುವ 'ಜಿರಾಮ್' (JIRAM - Jovian Infrared Auroral Mapper) ಉಪಕರಣ ಮತ್ತು ಮೈಕ್ರೋವೇವ್ ರೇಡಿಯೋಮೀಟರ್ ಸಹಾಯದಿಂದ ವಿಜ್ಞಾನಿಗಳು ಐಒ ಮೇಲ್ಮೈ ಕೆಳಗಿನ ತಾಪಮಾನವನ್ನು ತಪಾಸಣೆ ಮಾಡಿದ್ದಾರೆ. ಈ ಕುರಿತು ಮಾತನಾಡಿದ ಜೂನೋ ಯೋಜನೆಯ ಸಂಶೋಧಕ ಸ್ಕಾಟ್ ಬೋಲ್ಟನ್, ಬಂಡೆಗಳಿಂದ ಕೂಡಿದ ಒಂದು ಉಪಗ್ರಹದ ಅಂತರಂಗದ ತಾಪಮಾನವನ್ನು ಮೈಕ್ರೋವೇವ್ ರೇಡಿಯೋಮೀಟರ್ ಮೂಲಕ ಗ್ರಹಿಸಿರುವುದು ಆಶ್ಚರ್ಯಕರ ವಿಷಯ. ಈ ತಂತ್ರಜ್ಞಾನವನ್ನು ಭೂಮಿಯ ಮೇಲಿನ ಜ್ವಾಲಾಮುಖಿಗಳ ಅಧ್ಯಯನಕ್ಕೂ ಬಳಸಿಕೊಳ್ಳಬಹುದು ಎಂದು ತಿಳಿಸಿದ್ದಾರೆ.

ಸಂಶೋಧನೆಯ ಮುಖ್ಯ ಮುಖ್ಯಾಂಶಗಳು

ಆಳದ ಬಿಸಿ: ಈ ದತ್ತಾಂಶವು ಉಪಗ್ರಹದ ಮೇಲ್ಮೈಯಿಂದ ಕೆಲವು ಮೀಟರ್‌ಗಳಷ್ಟು ಆಳದವರೆಗೆ ವೀಕ್ಷಿಸಲು ನೆರವಾಗಿದ್ದು, ಆಳಕ್ಕೆ ಹೋದಂತೆ ತಾಪಮಾನವು 20 ಡಿಗ್ರಿ ಸೆಲ್ಸಿಯಸ್‌ಗಿಂತಲೂ ಹೆಚ್ಚು ಏರಿಕೆಯಾಗುತ್ತಿರುವುದು ಕಂಡುಬಂದಿದೆ.
ಸಾಂದ್ರತೆ ಕಡಿಮೆ: ಐಒ ಮೇಲ್ಮೈನ ಮೇಲ್ಪದರವು ಘನ ಬಂಡೆಗಳಿಗಿಂತ ಕಡಿಮೆ ಸಾಂದ್ರತೆ ಹೊಂದಿದ್ದು, ಜ್ವಾಲಾಮುಖಿ ಬೂದಿ  ಅಥವಾ ಪ್ಯೂಮಿಸ್ ಕಲ್ಲುಗಳಂತಿದೆ.
ಉಷ್ಣ ಹೊರಸೂಸುವಿಕೆ: ಆಂತರಿಕ ಉಷ್ಣತೆಯು ಒಂದೋ ಕಠಿಣ ಮೇಲ್ಮೈ ಮೂಲಕ ನಿಧಾನವಾಗಿ ಹೊರಬರುತ್ತಿರಬೇಕು, ಇಲ್ಲವೇ ಶೇ. 10ರಷ್ಟು ಭಾಗವನ್ನು ಆವರಿಸಿರುವ ತೆಳುವಾದ ಲಾವಾ ಪದರ ಹಾಗೂ ಬಿಸಿ ಗಾಳಿಯ ರಂಧ್ರಗಳ ಮೂಲಕ ಹೊರಹೊಮ್ಮುತ್ತಿರಬೇಕು.

ವಿಶ್ವದ ಅಧ್ಯಯನಕ್ಕೆ ಹೊಸ ದಾರಿ

ನಾಸಾದ ಜೆಟ್ ಪ್ರೊಪಲ್ಷನ್ ಲ್ಯಾಬೊರೇಟರಿಯ ಪ್ರಮುಖ ಲೇಖಕಿ ಶಾನನ್ ಬ್ರೌನ್ ಅವರ ಪ್ರಕಾರ, ಸೌರಮಂಡಲದಲ್ಲಿ ಗುರುತ್ವಾಕರ್ಷಣೆಯ ಉಷ್ಣತೆ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಅರ್ಥೈಸಿಕೊಳ್ಳಲು 'ಐಒ' ಒಂದು ಉತ್ತಮ ಕಿಟಕಿ. ಇದು ಕೇವಲ ಜ್ವಾಲಾಮುಖಿ ಸೃಷ್ಟಿಸುವುದಷ್ಟೇ ಅಲ್ಲದೆ, ಯುರೋಪಾ ಮತ್ತು ಗ್ಯಾನಿಮೀಡ್‌ನಂತಹ ಗ್ರಹಗಳ ಮಂಜಿನ ಅಡಿಯ ಮಹಾಸಾಗರಗಳು ಹೆಪ್ಪುಗಟ್ಟದಂತೆ ಕಾಯ್ದುಕೊಳ್ಳಲು ನೆರವಾಗುತ್ತದೆ.
ಈ ಹೊಸ ಶೋಧನೆಯು ಬ್ರಹ್ಮಾಂಡದ ದೂರದ ಕಾಯಗಳಲ್ಲಿ ಜೀವಿಗಳ ಉಗಮಕ್ಕೆ ಬೇಕಾದ ತಾಪಮಾನ ಹೇಗೆ ಸೃಷ್ಟಿಯಾಗುತ್ತದೆ ಎಂಬುದನ್ನು ತಿಳಿಯಲು ವಿಜ್ಞಾನಿಗಳಿಗೆ ದೊಡ್ಡ ದಾರಿದೀಪವಾಗಿದೆ (ಏಜೆನ್ಸೀಸ್​).