- ಯಾರು ಈ ನರ್ಗಿಸ್ ಮೊಹಮ್ಮದಿ?
- ಪ್ರಸಿದ್ಧ ಇರಾನಿನ ಮಾನವ ಹಕ್ಕುಗಳ ಕಾರ್ಯಕರ್ತೆ ಆಗಿರುವ ಮೊಹಮ್ಮದಿಗೆ ಈಗ 53 ವರ್ಷ ವಯಸ್ಸು
- 7.5 ವರ್ಷಗಳ ಜೈಲುವಾಸ ವಿಧಿಸಿದ್ದೇಕೆ ಇರಾನ್ ಸರ್ಕಾರ?
ಟೆಹರಾನ್: ಸದ್ಯ ಇರಾನ್‌ನಲ್ಲಿ ಯಾವುದೂ ಸರಿಯಿಲ್ಲ ಎನ್ನುವುದಕ್ಕೆ ಕಳೆದ ಕೆಲವು ತಿಂಗಳುಗಳಿಂದ ನಡೆಯುತ್ತಿರುವ ಪ್ರತಿಭಟನೆಗಳು, ರಾಜಕೀಯ ಗೊಂದಲಗಳೇ ಜ್ವಲಂತ ಸಾಕ್ಷಿ. ಇರಾನ್‌ನಾದ್ಯಂತ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಸರ್ಕಾರದ ವಿರುದ್ಧದ ಭುಗಿಲೆದ್ದ ಹೋರಾಟಗಳು, ಸಾವಿರಾರು ಮಂದಿಯ ದುರಂತ ಅಂತ್ಯಕ್ಕೆ ಕಾರಣವಾಯಿತು. ಈ ಮಧ್ಯೆ, ಇರಾನ್ ಸರ್ಕಾರವು ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತೆ ನರ್ಗಿಸ್ ಮೊಹಮ್ಮದಿ ಅವರಿಗೆ 7.5 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ.
ನರ್ಗಿಸ್ ಮೊಹಮ್ಮದಿ ಅವರಿಗೆ ಇರಾನ್ ಏಳೂವರೆ ವರ್ಷಗಳ ಜೈಲು ಶಿಕ್ಷೆ ವಿಧಿಸಿದ್ದೇ ತಡ ಅವರ ಹೆಸರು ಮತ್ತೊಮ್ಮೆ ಸುದ್ದಿಗೆ ಬಂದಿದೆ. ಇರಾನ್ ಸರ್ಕಾರ ಮತ್ತು ನರ್ಗಿಸ್ ಮೊಹಮ್ಮದಿ ನಡುವಿನ ವಿವಾದ ನಿನ್ನೆ ಮೊನ್ನೆಯದ್ದಲ್ಲ! ಇದು ದಶಕಗಳಿಂದ ನಡೆಯುತ್ತಿದ್ದು, ಈ ಶಿಕ್ಷೆಯು ಇರಾನಿನ ಅಧಿಕಾರಿಗಳೊಂದಿಗಿನ ಅವರ ದಶಕಗಳ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಿದೆ ಎಂದು ನರ್ಗಿಸ್ ಪರ ವಕೀಲರು ತಿಳಿಸಿದ್ದಾರೆ.
ಅಷ್ಟಕ್ಕೂ ಯಾರು ಈ ನರ್ಗಿಸ್ ಮೊಹಮ್ಮದಿ?
53 ವರ್ಷದ ನರ್ಗಿಸ್ ಮೊಹಮ್ಮದಿ, ಪ್ರಮುಖ ಇರಾನಿನ ಮಾನವ ಹಕ್ಕುಗಳ ಕಾರ್ಯಕರ್ತೆ. ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತೆ, ಅವರು ಇರಾನ್‌ನಲ್ಲಿ ಮಹಿಳೆಯರ ಮೇಲಿನ ದಬ್ಬಾಳಿಕೆಯ ವಿರುದ್ಧ ಹೋರಾಟ ಮಾಡುವಲ್ಲಿ ತಮ್ಮದೇ ಹೆಸರು ಸ್ಥಾಪಿಸಿಕೊಂಡಿದ್ದಾರೆ. ಈ ಮೂಲಕ ರಾಜಕೀಯ ನಾಯಕರಿಗೆ ಬಿಸಿ ಮುಟ್ಟಿಸುತ್ತಿದ್ದರು. ಇದನ್ನೇ ಟಾರ್ಗೆಟ್ ಮಾಡಿಕೊಂಡ ಇರಾನಿನ ಅಧಿಕಾರಿಗಳು, ಅವರು ರಾಜ್ಯದ ವಿರುದ್ಧ ಪ್ರತಿಭಟನೆ ಹಾಗೂ ಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಈ ಆರೋಪಗಳನ್ನು ಖಂಡಿಸಿರುವ ನರ್ಗಿಸ್ ಅನುಯಾಯಿಗಳು, ಅವರು ಶಾಂತಿಯುತ ಚಟುವಟಿಕೆಗಳಿಗಾಗಿ ಇಂತಹ ಶಿಕ್ಷೆಗೆ ಒಳಗಾಗುತ್ತಿರುವುದು ಒಪ್ಪುವಂತದ್ದಲ್ಲ ಎಂದಿದ್ದಾರೆ.
ಜೈಲು ಶಿಕ್ಷೆ 44 ವರ್ಷಗಳಿಗೆ ಏರಿಕೆ!
ನರ್ಗಿಸ್ ಓರ್ವ ಇಂಜಿನಿಯರ್, ಬರಹಗಾರ್ತಿ ಮತ್ತು ಶಿರಿನ್ ಎಬಾಡಿ ಸ್ಥಾಪಿಸಿದ ಮಾನವ ಹಕ್ಕುಗಳ ರಕ್ಷಕ ಕೇಂದ್ರದ (DHRC) ಉಪಾಧ್ಯಕ್ಷೆ. ಅವರು ಕಳೆದ ದಶಕದಲ್ಲಿ ಬಹುಪಾಲು ಸಮಯವನ್ನು ಜೈಲಿನಲ್ಲೇ ಕಳೆದಿರುವ ನರ್ಗಿಸ್, ಈಗ ಬಂದಿರುವ ಹೊಸ ತೀರ್ಪಿನಿಂದ ಅವರ ಒಟ್ಟು ಜೈಲು ಶಿಕ್ಷೆ 44 ವರ್ಷಗಳಿಗೆ ಏರಿಕೆಯಾಗಿದೆ ಎಂದು ನರ್ಗಿಸ್ ಫೌಂಡೇಶನ್ ಮಾಹಿತಿ ಹಂಚಿಕೊಂಡಿದೆ. 2021ರ ಹೊತ್ತಿಗೆ, ಅವರು ರಾಷ್ಟ್ರೀಯ ಭದ್ರತಾ ಆರೋಪಗಳ ಮೇಲೆ 13 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿ, ಅನುಭವಿಸಿದ್ದಾರೆ.
13 ಬಾರಿ ಬಂಧನ, 5 ಸಲ ಕಠಿಣ ಶಿಕ್ಷೆ
ಇರಾನ್‌ನಲ್ಲಿ ಮಹಿಳೆಯರ ದಬ್ಬಾಳಿಕೆಯ ವಿರುದ್ಧ ಮತ್ತು ಮಾನವ ಹಕ್ಕುಗಳು ಮತ್ತು ಎಲ್ಲರಿಗೂ ಸ್ವಾತಂತ್ರ್ಯ ಲಭಿಸಬೇಕು ಎಂದು ಅವರು ನಡೆಸಿದ ಹೋರಾಟಕ್ಕಾಗಿ 2023ರಲ್ಲಿ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿಯನ್ನು ನೀಡಲಾಯಿತು. ನರ್ಗಿಸ್ ಟೆಹ್ರಾನ್‌ನಲ್ಲಿ ಜೈಲುವಾಸ ಅನುಭವಿಸುತ್ತಿದ್ದಾಗ, ಅವರ ಬದಲಿಗೆ ಅವರ ಮಕ್ಕಳೇ ಈ ಪ್ರಶಸ್ತಿಯನ್ನು ಸ್ವೀಕರಿಸಿದರು. ಇಲ್ಲಿಯವರೆಗೆ ನರ್ಗಿಸ್ ಮೊಹಮ್ಮದಿ ಅವರನ್ನು ಒಟ್ಟು 13 ಬಾರಿ ಬಂಧಿಸಲಾಗಿದ್ದು, ಐದು ಬಾರಿ ಕಠಿಣ ಶಿಕ್ಷೆ ವಿಧಿಸಲಾಗಿದೆ,(ಏಜೆನ್ಸೀಸ್).