ಕ್ರೌನ್ ಪ್ರಿನ್ಸ್ ಹಾಕೋನ್ ಮತ್ತು ಮೆಟ್ಟೆ-ಮಾರಿಟ್  
ವಿದೇಶ

ಎಪ್​ಸ್ಟೀನ್ ಫೈಲ್​ನಲ್ಲಿ ನಾರ್ವೆ ರಾಜಮನೆತನದ ಕ್ರೌನ್ ಫ್ರಿನ್ಸೆಸ್ ಮೆಟ್ಟೆ-ಮಾರಿಟ್ ​ಹೆಸರು ಉಲ್ಲೇಖ; ಕ್ಷಮೆ ಕೇಳಿದ ರಾಜಕುಮಾರಿ | Crown Princess

ನಾರ್ವೆ: ವಿಶ್ವದಾದ್ಯಂತ ಭಾರಿ ತಲ್ಲಣಕ್ಕೆ ಕಾರಣವಾಗಿರುವ ಎಪ್ಸ್ಟೀನ್ ಫೈಲ್ಸ್‌ನಲ್ಲಿ ನಾರ್ವೆ ರಾಜಮನೆತನದ ಕ್ರೌನ್​ ಪ್ರಿನ್ಸೆಸ್ ಮೆಟ್ಟೆ-ಮಾರಿಟ್ ಹೆಸರು ಸಾವಿರಕ್ಕೂ ಹೆಚ್ಚು ಬಾರಿ ಉಲ್ಲೇಖವಾಗಿರುವುದು ಬಹಿರಂಗವಾಗಿದ್ದು, ಈ ಬಗ್ಗೆ ಕ್ರೌನ್​ ಪ್ರಿನ್ಸೆಸ್ ಎಪ್​ಸ್ಟೀನ್ ವ್ಯಕ್ತಿತ್ಬದ ಬಗ್ಗೆ ತಿಳಿಯದೇ ಅವರ​ ಜೊತೆ ಸಂಪರ್ಕದಲ್ಲಿದ್ದರ ಬಹಿರಂಗವಾಗಿ ಕ್ಷಮೆ ಕೇಳಿದ್ದಾರೆ.
ಇತ್ತೀಚಿಗೆ ಶುಕ್ರವಾರ(ಜ. 30) ಅಮೆರಿಕಾ ನ್ಯಾಯಾಂಗ ಇಲಾಖೆ ಬಿಡುಗಡೆ ಮಾಡಿದ ಎಪ್​ಸ್ಟೀನ್ ಫೈಲ್​ನ ಹೊಸ ದಾಖಲೆಗಳಲ್ಲಿ ಸಾವಿರಕ್ಕೂ ಹೆಚ್ಚು ಬಾರಿ ನ್ ಪ್ರಿನ್ಸೆಸ್ ಮೆಟ್ಟೆ-ಮಾರಿಟ್ ಹೆಸರು ಕಾಣಿಸಿಕೊಂಡಿದೆ. ಇದೆಲ್ಲವೂ 2011 ರಿಂದ 2014ರ ನಡುವಿನ ಇಮೇಲ್ ಪತ್ರ ವ್ಯವಹಾರ, ಸಂದರ್ಶನದ ಸಂಭಾಷಣೆಗಳನ್ನು ಒಳಗೊಂಡಿವೆ.
2013ರಲ್ಲಿ ನಾರ್ವೆ ರಾಜಮನೆತನದವರು ಫ್ಲೋರಿಡಾದ ಪಾಮ್ ಬೀಚ್‌ನಲ್ಲಿರುವ ಎಪ್ಸ್ಟೀನ್ ಮನೆಯಲ್ಲಿ ನಾಲ್ಕು ದಿನಗಳನ್ನು ಕಳೆದಿದ್ದರು ಎಂದು ಇಮೇಲ್​ಗಳು ಬಹಿರಂಗಪಡಿಸಿವೆ. ಆದರೆ ಆ ಸಮಯದಲ್ಲಿ ಎಪ್ಸ್ಟೀನ್ ಅಲ್ಲಿ ಇರಲಿಲ್ಲ ಎನ್ನಲಾಗಿದೆ.
2012ರ ಒಂದು ಇಮೇಲ್​ನಲ್ಲಿ ಕ್ರೌನ್​ ಪ್ರಿನ್ಸೆಸ್​, ಎಪ್​ಸ್ಟೀನ್​ಗೆ ನೀವು ತುಂಬಾ ಒಳ್ಳೆಯವರು ಎಂದು ಹೇಳಿದ್ದರೆ, ಇನ್ನೊಂದರಲ್ಲಿ ಆಕರ್ಷಕವಾಗಿದ್ದೀರಿ ಎಂದಿದ್ದಾರೆ. ಅದೇ ರೀತಿ ಎಪ್​ಸ್ಟೀನ್ ವೈಫ್ ಹಂಟಿಂಗ್ ಬಗ್ಗೆ ಮಾತನಾಡಿದಾಗ ಸ್ಕ್ಯಾಂಡಿನೇವಿಯನ್ ಮಹಿಳೆಯರನ್ನು ಸಂಪರ್ಕಿಸಲು ಸಲಹೆ ನೀಡಿದ್ದಾರೆ. ಇನ್ನೂ ರಾಯಲ್ ಜೀವನದ ಬೇಸರ, ಅನುಚಿತ ಸಂಬಂಧಗಳು, ಸಾಹಿತ್ಯ (ವ್ಲಾಡಿಮಿರ್ ನಬೊಕಾವ್) ಮತ್ತು ಇತರ ವೈಯಕ್ತಿಕ ವಿಷಯಗಳನ್ನು ಚರ್ಚಿಸಿದ್ದಾರೆ ಎನ್ನಲಾಗಿದೆ.
ಇನ್ನೊಂದು ಬಹುಮುಖ್ಯವಾದ ಇಮೇಲ್ ಅಂದರೆ, ಮೆಟ್ಟೆ-ಮರಿಟ್ ಅವರು ತಮ್ಮ ಮಗನ ಬಗ್ಗೆ ಎಪ್ಸ್ಟೀನ್ ಅವರೊಂದಿಗೆ ಚರ್ಚಿಸಿರುವುದು. ಅಂದಿನ ತಮ್ಮ 15 ವರ್ಷದ ಮಗನ ಸರ್ಪಬೋರ್ಡ್​ಗೆ ಇಬ್ಬರು ಮಹಿಳೆಯರ ಬೆತ್ತಲೆ ಚಿತ್ರವನ್ನು ತಾಯಿಯಾದ ನಾನೇ ಸೂಚಿಸುವುದು ಅನುಚಿತವೇ? ಕೇಳಿದ್ದರು. ಅದಕ್ಕೆ ಎಪ್​ಸ್ಟೀನ್, ಅದನ್ನು ಅವರೇ ನಿರ್ಧರಿಸಲಿ, ತಾಯಿ ಅದರಲ್ಲಿ ತಲೆಹಾಕಬಾರದು ಎಂದಿದ್ದಾರೆ.
ಇನ್ನೂ ಶುಕ್ರವಾರ ಬಿಡುಗಡೆಯಾದ ಫೈಲ್​ಗಳ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಿನ್ಸ್ ಮೆಟ್ಟೆ-ಮಾರಿಟ್, ಎಪ್‌ಸ್ಟೀನ್ ಜೊತೆ ಯಾವುದೇ ಸಂಪರ್ಕ ಹೊಂದಿದ್ದಕ್ಕೆ ಆಳವಾಗಿ ವಿಷಾದಿಸುತ್ತೇನೆ. ಎಪ್‌ಸ್ಟೀನ್ ತನ್ನ ಕೃತ್ಯಗಳಿಗೆ ಜವಾಬ್ದಾರನಾಗಿದ್ದಾನೆ. ನಾನು ಅವನ ಹಿನ್ನೆಲೆಯನ್ನು ಸರಿಯಾಗಿ ಪರಿಶೀಲಿಸದೇ ಇರುವುದಕ್ಕೆ ಮತ್ತು ಅವನ ವ್ಯಕ್ತಿತ್ವವನ್ನು ಬೇಗ ಅರ್ಥಮಾಡಿಕೊಳ್ಳದೇ ಇರುವುದಕ್ಕೆ ಜವಾಬ್ದಾರಿಯನ್ನು ಒಪ್ಪಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ (ಏಜೆನ್ಸೀಸ್).