ವಾಷಿಂಗ್ಟನ್: ಅಮೆರಿಕದ ಉನ್ನತ ಭದ್ರತಾ ವಲಯದಲ್ಲಿ ಇತ್ತೀಚೆಗೆ ನಡೆದ ವಿಚಿತ್ರ ಘಟನೆಯೊಂದು ಜಾಗತಿಕ ಮಟ್ಟದಲ್ಲಿ ಭಾರೀ ಕುತೂಹಲ ಹಾಗೂ ಚರ್ಚೆಗೆ ಗ್ರಾಸವಾಗಿದೆ. ಅಮೆರಿಕ ಸರ್ಕಾರ ಇತ್ತೀಚೆಗೆ ಬಿಡುಗಡೆ ಮಾಡಿರುವ ರಹಸ್ಯ ಯುಎಫ್ಒ ( UFO ) ಕಡತಗಳಲ್ಲಿ ಈ ರೋಚಕ ಮಾಹಿತಿ ಹೊರಬಂದಿದ್ದು, ಪಶ್ಚಿಮ ಅಮೆರಿಕದ ಅತಿ ಸುರಕ್ಷಿತ ಪ್ರದೇಶದ ಮೇಲೆ ಆಕಾಶದಲ್ಲಿ ಹಾರಾಡುತ್ತಿದ್ದ ನಿಗೂಢ ಕಪ್ಪು ಬಣ್ಣದ ತ್ರಿಕೋನಾಕಾರದ ವಸ್ತುವೊಂದನ್ನು ಇಬ್ಬರು ಹಿರಿಯ ಮಿಲಿಟರಿ ವೀಕ್ಷಕರು ಕಣ್ಣಾರೆ ಕಂಡಿದ್ದಾರೆ. ಯಾವುದೇ ಸಾಂಪ್ರದಾಯಿಕ ಮಿಲಿಟರಿ ವಿಮಾನಗಳ ಲಕ್ಷಣಗಳನ್ನು ಹೊಂದಿರದ ಈ ಅಜ್ಞಾತ ವಸ್ತು ( Mysterious object ), ಕ್ಷಣಮಾತ್ರದಲ್ಲಿ ಯಾವುದೇ ಸುಳಿವಿಲ್ಲದೆ ನಿಗೂಢವಾಗಿ ಕಣ್ಮರೆಯಾಗಿರುವುದು ರಕ್ಷಣಾ ಇಲಾಖೆಯನ್ನು ಬೆಚ್ಚಿಬೀಳಿಸಿದೆ.
ಮಿಲಿಟರಿ ವೀಕ್ಷಕರು ರಕ್ಷಣಾ ಇಲಾಖೆಗೆ ಸಲ್ಲಿಸಿರುವ ಅಧಿಕೃತ ವರದಿಯ ಪ್ರಕಾರ, ಈ ನಿಗೂಢ ವಸ್ತುವು ಸುಮಾರು 9 ರಿಂದ 15 ಅಡಿ ಅಗಲವಿರುವ ಡೆಲ್ಟಾ ವಿಂಗ್ ಡ್ರೋನ್ ಅನ್ನು ಹೋಲುತ್ತಿತ್ತು. ಪಶ್ಚಿಮಕ್ಕೆ ಸುಮಾರು 3.2 ಮೈಲು ದೂರದಲ್ಲಿದ್ದ ಪರ್ವತ ಶ್ರೇಣಿಯ ಮೇಲೆ ಲಂಬವಾಗಿ ಮೇಲಕ್ಕೇರಿದ ಈ ವಸ್ತುವು, ಪರ್ವತದಿಂದ ಸುಮಾರು 200 ಅಡಿ ಎತ್ತರವನ್ನು ತಲುಪಿದ ತಕ್ಷಣವೇ ಗಂಟೆಗೆ ಬರೋಬ್ಬರಿ 1,800 ಮೈಲುಗಳ ಅತಿಭೀಕರ ವೇಗದಲ್ಲಿ ಮುಂದಕ್ಕೆ ಹಾರಿದೆ. ಬಳಿಕ ಆಗ್ನೇಯ ದಿಕ್ಕಿಗೆ ಚಲಿಸಿದ ಈ ವಸ್ತುವು ಕೆಲವೇ ಸೆಕೆಂಡುಗಳಲ್ಲಿ ಸಂಪೂರ್ಣವಾಗಿ ಕಣ್ಮರೆಯಾಗಿದೆ ಎಂದು ವೀಕ್ಷಕರು ವಿವರಿಸಿದ್ದಾರೆ.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟಂಪ್ ಅವರು ಯುಎಫ್ಒ (UFO) ಕುರಿತಾದ ರಹಸ್ಯ ದಾಖಲೆಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸುವುದಾಗಿ ಘೋಷಿಸಿದ ಹಿನ್ನೆಲೆಯಲ್ಲಿ, ರಕ್ಷಣಾ ಇಲಾಖೆಯಾದ ಪೆಂಟಗಾನ್ ಕಳೆದ ಮೇ ತಿಂಗಳಿನಿಂದ ನೂರಾರು ಕಡತಗಳನ್ನು ಬಿಡುಗಡೆ ಮಾಡಿದೆ.
ಮಿಲಿಟರಿ ಸಿಬ್ಬಂದಿ ಸೆರೆಹಿಡಿದಿರುವ ವಿಡಿಯೋ ತುಣುಕುಗಳು ಮತ್ತು ಕಣ್ಣಾರೆ ಕಂಡವರ ವಿವರಗಳನ್ನು ಸರ್ಕಾರವು ಹೊರಹಾಕಿದ್ದರೂ ಸಹ, ಈ ನಿಗೂಢ ಹಾರುವ ವಸ್ತುಗಳು (UFO) ಅಸಲಿಗೆ ಏನು ಎಂಬುದು ಇಂದಿಗೂ ನಿಗೂಢವಾಗಿಯೇ ಉಳಿದಿದೆ. ಇವು ಅನ್ಯಗ್ರಹ ಜೀವಿಗಳ (Aliens) ವಾಹನಗಳೆಂಬ ಕಥೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದರೂ, ಜಾಗತಿಕ ಅಧಿಕಾರಿಗಳು ಮತ್ತು ತಜ್ಞರು ಇದನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ.
ಈ ಯುಎಫ್ಒಗಳು ಶತ್ರು ರಾಷ್ಟ್ರಗಳು ರಕ್ಷಣಾ ವ್ಯವಸ್ಥೆಗಳ ಮೇಲೆ ಕಣ್ಣಿಡಲು ಬಳಸುತ್ತಿರುವ ಮಾನವ ನಿರ್ಮಿತ ಡ್ರೋನ್ಗಳಾಗಿರಬಹುದು ಅಥವಾ ಬೇರೆ ಯಾವುದೋ ತಂತ್ರಜ್ಞಾನವಾಗಿರಬಹುದು ಎಂದು ಅಮೆರಿಕ ತೀವ್ರವಾಗಿ ಶಂಕಿಸಿದೆ. ಪೆಂಟಗಾನ್ ಕೂಡ ಈ ನಿಗೂಢ ವಸ್ತುಗಳ ಮೂಲಕ್ಕೂ ಬಾಹ್ಯಾಕಾಶದ ಅನ್ಯಗ್ರಹ ಜೀವಿಗಳಿಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದೆ.
ಏನೇ ಆಗಲಿ, ಮಿಲಿಟರಿ ರಡಾರ್ಗಳಿಗೂ ಸಿಗದೆ ಕ್ಷಣಾರ್ಧದಲ್ಲಿ ಮಾಯವಾಗುವ ಈ ವಿಚಿತ್ರ ಹಾರುವ ವಸ್ತುಗಳ ರಹಸ್ಯವು ವಿಶ್ವದಾದ್ಯಂತ ತೀವ್ರ ಆತಂಕ ಹಾಗೂ ರೋಮಾಂಚನವನ್ನು ಸೃಷ್ಟಿಸಿದೆ, (ಏಜೆನ್ಸೀಸ್).