Japan mall collapse after 7.1-magnitude earthquake: 
ವಿದೇಶ

ಜಪಾನ್‌ನಲ್ಲಿ 7.1 ತೀವ್ರತೆಯ ಭೀಕರ ಭೂಕಂಪ: ಮಾಲ್ ಕಟ್ಟಡ ಕುಸಿದು ಹಲವರ ಸಾವು, ಮುಂದುವರೆದ ರಕ್ಷಣಾ ಕಾರ್ಯಾಚರಣೆ..Japan Earthquake

ಪ್ರಮುಖ ಮುಖ್ಯಾಂಶಗಳು

  • ದಕ್ಷಿಣ ಜಪಾನ್‌ನ ಕ್ಯುಶು ದ್ವೀಪದಲ್ಲಿ 7.1 ತೀವ್ರತೆಯ ಪ್ರಬಲ ಭೂಕಂಪ,ಮಾಲ್​, ಕಟ್ಟಡ, ರಸ್ತೆ ಕುಸಿತ
  • Aeon Mall ಕಟ್ಟಡ ಕುಸಿದು ಹಲವರು ಸಾವು, ರಕ್ಷಣಾ ಕಾರ್ಯಾಚರಣೆ ಮುಂದುವರಿಕೆ
  • ಪರಿಸ್ಥಿತಿ ಪರಿಶೀಲನೆ ಹಾಗೂ ರಕ್ಷಣಾ ಕಾರ್ಯಾಚರಣೆಗೆ ಪ್ರಧಾನಿ ಸನೇ ತಕೈಚಿ ನೇತೃತ್ವದಲ್ಲಿ ಟಾಸ್ಕ್​ ಫೋರ್ಸ್​ ರಚನೆ
  • ಬ್ರಿಡ್ಜ್, ರಸ್ತೆಗಳು ಜಖಂಗೊಂಡಿದ್ದು, ಸುಮಾರು 45,000ಕ್ಕೂ ಹೆಚ್ಚು ಮನೆಗಳಲ್ಲಿ ವಿದ್ಯುತ್ ಸಂಪರ್ಕ ಕಡಿತ
ಟೋಕಿಯೋ: ದಕ್ಷಿಣ ಜಪಾನ್‌ನ(Japan) ಪ್ರಮುಖ ದ್ವೀಪವಾದ ಕ್ಯುಶುವಿನ ಕುಮಾಮೊಟೊ ಪ್ರದೇಶದಲ್ಲಿ ಮಂಗಳವಾರ (ಜು.28)ರಂದು ಸಂಭವಿಸಿದ 7.1 ತೀವ್ರತೆಯ (7.1-magnitude earthquake)ಭೂಕಂಪನದಿಂದಾಗಿ ರಸ್ತೆಗಳು, ಕಟ್ಟಡಗಳು, ಮನೆಗಳು, ಅಯೋನ್ ಶಾಪಿಂಗ್ ಮಾಲ್‌ ಕುಸಿದು ಬಿದ್ದಿದ್ದು, ಆಸ್ತಿ-ಪಾಸ್ತಿ ನಾಶ ಹಾಗೂ ಸಾವು-ನೋವು ಸಂಭವಿಸಿದೆ.

ಮಾಲ್​ ಕುಸಿತ, ಸಾವು

ಕುಮಾಮೊಟೊ ಜಿಲ್ಲೆಯ ಕಾಶಿಮಾ ಪಟ್ಟಣದಲ್ಲಿರುವ Aeon Mall ಶಾಪಿಂಗ್​ ಕಾಂಪ್ಲೆಕ್ಸ್​​ನ ಎರಡನೇ ಮಹಡಿ ಕುಸಿದು ಬಿದ್ದ ಪರಿಣಾಮ ಹಲವರು ಅವಶೇಶಗಳಡಿ ಸಿಲುಕಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಮಾಲ್ ಕಟ್ಟಡದ ಒಳಗೆ ಅನೇಕ ಜನರು ಸಿಲುಕಿಕೊಂಡಿದ್ದು, ರಕ್ಷಣಾ ಸಿಬ್ಬಂದಿ ತುರ್ತು ಕಾರ್ಯಾಚರಣೆ ಕೈಗೊಂಡಿದ್ದಾರೆ. ಮೃತಪಟ್ಟವರ ಸಂಖ್ಯೆ ಎಷ್ಟಿದೆ ಎನ್ನುವ ಮಾಹಿತಿ ಇನ್ನೂ ಹೊರಬಿದ್ದಿಲ್ಲ. ಮಾಲ್​ ಕುಸಿದ ಪರಿಯ ವಿಡಿಯೋಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದ್ದು, ಒಂದೊಂದು ದೃಶ್ಯಗಳು ಎದೆ ಝಲ್​ ಎನಿಸುವಂತಿದೆ.
ಕಟ್ಟಡ ಕುಸಿಯುತ್ತಲೇ ಅಲ್ಲಿದ್ದ ಜನರು ಕಿರುಚಾಡುತ್ತಾ ಓಡುತ್ತಿರುವುದು,ವಿದ್ಯುತ್​ ಸ್ಥಗಿತಗೊಳ್ಳುತ್ತಿದ್ದಂತೆ ಚೀರಾಡುವ ಮಕ್ಕಳು ಅವಗಳನ್ನು ಸಮಾಧಾನಿಸುವ ಪೋಷಕರ ದೃಶ್ಯ ಮನಕಲಕುವಂತೆ ಮಾಡುತ್ತದೆ.

ಜನಜೀವನ ಅಸ್ತವ್ಯಸ್ತ

ಭೂಕಂಪನದಿಂದಾಗಿ ಕುಮಾಮೊಟೊ ವಲಯದಲ್ಲಿ ವಿದ್ಯುತ್​ ಸಂಪರ್ಕ ಸ್ಥಗಿತಗೊಂಡಿದ್ದು, 45 ಸಾವಿರಕ್ಕೂ ಹೆಚ್ಚು ಮನೆಗಳು ಕತ್ತಲಲ್ಲಿ ಇರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಏಕಾಏಕಿ ನಡೆದ ಘಟನೆಯಿಂದಾಗಿ ಜನರು ಅಘಾತಕ್ಕೆ ಒಳಗಾಗುವಂತಾಯಿತು. ಏಕಾಏಕಿ ಸಂಭವಿಸಿದ ಭೂಕಂಪನದಿಂದಾಗಿ ವಿದ್ಯುತ್​ ಕಡಿತಗೊಂಡು ಬುಲೆಟ್ ಟ್ರೈನ್​ಗಳು ನಿಂತಲ್ಲೇ ನಿಂತವು, ಪ್ರಯಾಣಿಕರು ಬೋಗಿಗಳಲ್ಲಿಯೇ ಸಿಲುಕಿಕೊಂಡಿರುವ ದೃಶ್ಯಗಳು ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿವೆ.

ಜಪಾನ್ ಪ್ರಧಾನಿ ಕೈಗೊಂಡ ಕ್ರಮವೇನು?

ಭೂ ಕಂಪನದಿಂದಾದ ಸಾವು-ನೋವು, ಆಸ್ತಿ-ಪಾಸ್ತಿ ನಾಶದ ಬಗ್ಗೆ ವಿವರಣೆ ನೀಡಲು ಹಾಗೂ ತುರ್ತು ರಕ್ಷಣಾ ಕಾರ್ಯಾಚರಣೆಯನ್ನು ಸಂಘಟಿಸಲು ಸರ್ಕಾರದಿಂದ ವಿಶೇಷ ಕಾರ್ಯಪಡೆ ರಚಿಸಲಾಗಿದೆ. ಅನೇಕ ಭಾಗದಲ್ಲಿ ಬೆಂಕಿ ಅವಘಡ ಸಂಭವಿಸಿದೆ, ಸೇತುವೆ ಮತ್ತು ರಸ್ತೆ ಕುಸಿದು ಸಾಕಷ್ಟು ಹಾನಿಯಾಗಿದೆ. ಸಾರ್ವಜನಿಕರು ಈ ವಿಚಾರಗಳ ಬಗ್ಗೆ ಎಚ್ಚರಿಕೆವಹಿಸಿ ಸುರಕ್ಷತೆ ಕಾಯ್ದುಕೊಳ್ಳಬೇಕು ಎಂದು ಎಕ್ಸ್​ನಲ್ಲಿ ಜಪಾನ್ ಪ್ರಧಾನಿ ಸನೇ ತಕೈಚಿ ಮಾಹಿತಿ ಹಂಚಿಕೊಂಡಿದ್ದಾರೆ.

ಸುನಾಮಿ ಎಚ್ಚರಿಕೆ ವಾಪಸ್

ಮಧ್ಯಾಹ್ನ 7.1 ತೀವ್ರತೆಯ ಪ್ರಬಲ ಭೂಕಂಪನ ಸಂಭವಿಸಿದ್ದ ಕಾರಣ ಜಪಾನ್​ನ ಹವಾಮಾನ ಇಲಾಖೆ ದಕ್ಷಿಣ ಭಾಗದ ಕರಾವಳಿ ಪ್ರದೇಶಕ್ಕೆ ಸುನಾಮಿ ಎಚ್ಚರಿಕೆ ಕೊಟ್ಟಿದೆ. ಈ ಹಿನ್ನೆಲೆ ಕರಾವಳಿ ತೀರದಲ್ಲಿ ವಾಸ ಮಾಡುತ್ತಿರುವ ಜನರು ಸುರಕ್ಷತಾ ಸ್ಥಳಕ್ಕೆ ಸ್ಥಳಾಂತರಗೊಳ್ಳಬೇಕು. ಅಧಿಕಾರಿಗಳ ಕ್ರಮವನ್ನು ಅನುಸರಿಸಬೇಕು ಎಂದು ಮನವಿ ಮಾಡಿಕೊಂಡಿತ್ತು. ಆದರೆ, ಭೂಕಂಪವು ಕರಾವಳಿಯ ಒಳಗಿನ ಭೂಭಾಗದಲ್ಲಿ ಸಂಭವಿಸಿದ್ದರಿಂದ ಕಡಲಮಟ್ಟದಲ್ಲಿ ಯಾವುದೇ ವ್ಯತ್ಯಾಸ ಕಂಡುಬರದ ಹಿನ್ನೆಲೆ, ಭೂಕಂಪಿಸಿದ ಎರಡು ಗಂಟೆಗಳ ಒಳಗಾಗಿ ಸುನಾಮಿ ಎಚ್ಚರಿಕೆಯನ್ನು ವಾಪಸ್​ ಪಡೆದುಕೊಂಡಿದೆ.
ಪ್ರದೇಶದ ಅಣು ವಿದ್ಯುತ್ ಸ್ಥಾವರಗಳಲ್ಲಿ ಯಾವುದೇ ತಾಂತ್ರಿಕ ಅಡಚಣೆಗಳು ಕಂಡುಬಂದಿಲ್ಲ. . ಕಂಪನದ ಆಘಾತದಿಂದ ಬುಲೆಟ್ ರೈಲು ಸೇರಿದಂತೆ ರೈಲು ಸೇವೆಗಳನ್ನು ಮುನ್ನೆಚ್ಚರಿಕೆಯಾಗಿ ಸ್ಥಗಿತಗೊಳಿಸಲಾಗಿದೆ ಎಂದು ಶಾಸನಬದ್ಧ ಪರಮಾಣು ನಿಯಂತ್ರಣ ಪ್ರಾಧಿಕಾರ ಪ್ರಕಟಣೆ ಹೊರಡಿಸಿದೆ

ಕಳೆದ 15 ವರ್ಷದಲ್ಲಿ ಜಪಾನ್​ನಲ್ಲಿ ಸಂಭವಿಸಿದ ಭೂಕಂಪ, ಸಾವು ನೋವು

  • 2011 ಮಾರ್ಚ್​11ರಂದು ಈಶಾನ್ಯ ಜಪಾನ್​ನಲ್ಲಿ 9.0 ತೀವ್ರತೆ ಭೂಕಂಪ ಸಂಭವಿಸಿದ ಪರಿಣಾಮ20 ಸಾವಿರ ಜನರು ಸಾವನ್ನಪ್ಪಿದ್ದರು.
  • 2016 ಏಪ್ರಿಲ್ 16ರಂದು ಕುಮಾಮೊಟೊದಲ್ಲಿ 7.3 ತೀವ್ರತೆಯ ಭೂಕಂಪ ಸಂಭವಿಸಿದ ಪರಿಣಾಮ 270ಕ್ಕೂ ಹೆಚ್ಚು ಜನರು ಮೃತಪಟ್ಟರು. ಭೂಕುಸಿತ ಸಂಭವಿಸಿತ್ತು.
  • 2018 ಜೂನ್ 18ರಂದು ಜಪಾನ್​ನ ಎರಡನೇ ದೊಡ್ಡ ನಗರವಾದ ಒಸಾಕದಲ್ಲಿ ಭೂಕಂಪ ಸಂಭವಿಸಿ ನಾಲ್ವರು ಮೃತಪಟ್ಟಿದ್ದರು. ನೂರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.
  • 2018 ಸೆಪ್ಟೆಂಬರ್ 6ರಂದು ಜಪಾನ್‌ನ ಉತ್ತರ ದ್ವೀಪವಾದ ಹೊಕ್ಕೈಡೋ 6.7 ತೀವ್ರತೆಯ ಭೂಕಂಬ ಸಂಭವಿಸಿ 40 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು.
  • 2021 ಫೆಬ್ರವರಿ 13ರರಂದು ಫುಕುಶಿಮಾ ಕರಾವಳಿಯಲ್ಲಿ 7.4 ತೀವ್ರತೆಯ ಭೂಕಂಪ ಸಂಭವಿಸಿದ ಪರಣಾಮ 200ಕ್ಕೂ ಹೆಚ್ಚು ಜನರು ಅಸುನೀಗಿದ್ದರು. ಹಲವರು ಗಾಯಗೊಂಡಿದ್ದರು.
  • 2024 ಜನವರಿ 1ರಂದು ಮಧ್ಯ ಜಪಾನ್‌ನ ಪಶ್ಚಿಮ ಕರಾವಳಿಯಲ್ಲಿರುವ ದೂರದ ನೋಟೊ ಪರ್ಯಾಯ ದ್ವೀಪದಲ್ಲಿ 7.6 ತೀವ್ರತೆಯ ಭೂಕಂಪ ಸಂಭವಿಸಿದ ಪರಿಣಾಮ 300ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು.
  • 2024 ಆಗಸ್ಟ್ 8ರಂದು ದಕ್ಷಿಣದ ಮಿಯಾಜಾಕಿಯಲ್ಲಿ 7.1 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿತ್ತು. ಆದರೆ ಯಾವುದೇ ಸಾವು-ನೋವು ಸಂಭವಿಸಿದ ಬಗ್ಗೆ ಮಾಹಿತಿ ಇಲ್ಲ, (ಏಜೆನ್ಸೀಸ್).