ಬಹಾಮಾಸ್: ಕೆರೆಬಿಯನ್ ದೇಶದ ಬಹಾಮಾಸ್‌ನ ಗ್ರ್ಯಾಂಡ್ ಬಹಾಮಾ ದ್ವೀಪದಲ್ಲಿ ಇತ್ತೀಚೆಗೆ ಒಂದು ಹೃದಯ ವಿದ್ರಾವಕ ಘಟನೆ ನಡೆದಿದೆ.
ಹೌದು, ಕಾರ್ನಿವಲ್ ಸನ್‌ರೈಸ್ ಕ್ರೂಸ್ ಹಡಗು ಡಾಕ್‌ಗೆ ಜೋಡಿಸಲ್ಪಟ್ಟಿದ್ದ ಸಮಯದಲ್ಲಿ, 4 ವರ್ಷದ ಬಾಲಕಿಯೊಬ್ಬಳು ತಾಯಿಯಿಂದ ಸ್ವಲ್ಪ ದೂರ ಸರಿದು, ಹಡಗು ಮತ್ತು ಡಾಕ್ ನಡುವಿನ ಅಂತರದಲ್ಲಿ ನೀರಿಗೆ ಬಿದ್ದಳು. ಈ ಭಯಾನಕ ಸನ್ನಿವೇಶದಲ್ಲಿ ತಾಯಿ ಒಂದು ಕ್ಷಣವೂ ಯೋಚಿಸದೆ ಸಮುದ್ರಕ್ಕೆ ಧುಮುಕಿ ಮಗಳನ್ನು ಉಳಿಸಲು ಪ್ರಯತ್ನಿಸಿತ್ತಿರುವ ವಿಡಿಯೋ ವೈರಲ್ ಆಗಿದೆ.
ವೈರಲ್ ವೀಡಿಯೊದಲ್ಲಿ ಕಾಣಿಸುವಂತೆ, ಬಾಲಕಿ ನೀರಿನಲ್ಲಿ ಸಿಲುಕಿಕೊಂಡಾಗ ತಾಯಿ ತಕ್ಷಣ ಡಾಕ್‌ನಿಂದ ಜಿಗಿದು ಅವಳ ಬಳಿ ತಲುಪಿದಳು. ಹಡಗಿನ ಸಿಬ್ಬಂದಿ ಮತ್ತು ಸುರಕ್ಷತಾ ತಂಡ ತ್ವರಿತವಾಗಿ ಕಾರ್ಯಾಚರಣೆ ನಡೆಸಿ, ಲೈಫ್ ರಿಂಗ್ ಮತ್ತು ಏಣಿಗಳ ಸಹಾಯದಿಂದ ಮೊದಲು ಬಾಲಕಿಯನ್ನು ಸುರಕ್ಷಿತವಾಗಿ ಮೇಲಕ್ಕೆತ್ತಿದರು. ನಂತರ ತಾಯಿಯನ್ನು ರಕ್ಷಿಸಲಾಯಿತು. ರಕ್ಷಣೆಯ ನಂತರ ಸಿಬ್ಬಂದಿ ಬಾಲಕಿಯನ್ನು ಟವೆಲ್‌ನಲ್ಲಿ ಸುತ್ತಿ ಸಾಂತ್ವನ ನೀಡಿದರು. ತಾಯಿ ಮಗಳನ್ನು ಮರಳಿ ಪಡೆದು ಭಾವುಕಳಾಗಿ ಅಳುತ್ತಿರುವ ದೃಶ್ಯ ಹೃದಯಸ್ಪರ್ಶಿಯಾಗಿದೆ.
ಕಾರ್ನಿವಲ್ ಕ್ರೂಸ್ ಲೈನ್ ಪ್ರತಿನಿಧಿಯ ಹೇಳಿಕೆಯಂತೆ, "4 ವರ್ಷದ ಬಾಲಕಿ ತಾಯಿಯಿಂದ ಸ್ವಲ್ಪ ದೂರ ಸರಿದು ನೀರಿಗೆ ಬಿದ್ದಳು. ತಾಯಿ ತಕ್ಷಣ ಜಿಗಿದು ಅವಳ ಹಿಂದೆ ಹೋದಳು. ನಮ್ಮ ಸಿಬ್ಬಂದಿ ಇಬ್ಬರನ್ನೂ ಸುರಕ್ಷಿತವಾಗಿ ರಕ್ಷಿಸಿ, ವೈದ್ಯಕೀಯ ಪರೀಕ್ಷೆ ನಡೆಸಿದರು. ಇಬ್ಬರೂ ದೈಹಿಕವಾಗಿ ಆರೋಗ್ಯವಾಗಿದ್ದಾರೆ ಎಂದು ವರದಿ ಉಲ್ಲೇಖಿಸಿದ್ದಾರೆ.
"ಈ ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿ, ಲಕ್ಷಾಂತರ ಜನರು ವೀಕ್ಷಿಸಿದ್ದಾರೆ. ತಾಯಿಯ ಧೈರ್ಯವನ್ನು ಶ್ಲಾಘಿಸಿದ ಅನೇಕರು, "ಯಾವುದೇ ತಾಯಿ ತನ್ನ ಮಗುವಿಗಾಗಿ ಇಂತಹ ಸಾಹಸ ಮಾಡುತ್ತಾಳೆ" ಎಂದು ಕಾಮೆಂಟ್ ಮಾಡಿದ್ದಾರೆ. ತಾಯಿಯ ಮಮತೆಯು ಎಂತಹ ಅಡೆತಡೆಗಳನ್ನೂ ದಾಟುತ್ತದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ,(ಏಜೆನ್ಸೀಸ್).