Bomb Blast  
ವಿದೇಶ

ಮಸೀದಿಯಲ್ಲಿ ಬಾಂಬ್​ ಸ್ಫೋಟ: 5 ಜನ ಮರಣ; ಆತ್ಮಾಹುತಿ ದಾಳಿಯ ಶಂಕೆ | Bomb Blast

ಪ್ರಮುಖ ಮುಖ್ಯಾಂಶಗಳು

  • ನೈಜೀರಿಯಾದ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟ
  • ಐದು ಜನ ಸಾವು, 35 ಜನಕ್ಕೆ ಗಾಯ
  • ಆತ್ಮಾಹುತಿ ದಾಳಿಯ ಅನುಮಾನ
ನೈಜೀರಿಯಾ: ಬುಧವಾರ (ಡಿ.24) ತಡರಾತ್ರಿ ಈಶಾನ್ಯ ನೈಜೀರಿಯಾದ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟ (Bomb Blast ) ಗೊಂಡು ಐದು ಜನರು ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. ದಾಳಿಯಲ್ಲಿ ಸುಮಾರು 35 ಜನರು ಗಾಯಗೊಂಡಿದ್ದು ಇದು ಆತ್ಮಹತ್ಯಾ ದಾಳಿಯಾಗಿರಬಹುದು ಎಂದು ಹೇಳಲಾಗುತ್ತಿದೆ.
ಈ ಘಟನೆ ಆತ್ಮಹತ್ಯಾ ಬಾಂಬ್ ದಾಳಿಯಾಗಿರಬಹುದು ಎಂದು ಪ್ರಾಥಮಿಕ ತನಿಖೆಗಳು ಸೂಚಿಸಿವೆ. ಶಂಕಿತ ದಾಳಿಕೋರನ ಬಟ್ಟೆಯ ತುಂಡುಗಳು ಮತ್ತು ದಾಖಲಿಸಲಾದ ಸಾಕ್ಷಿಗಳ ಹೇಳಿಕೆಗಳ ಆಧಾರದ ಮೇಲೆ, ನಿಖರವಾದ ಕಾರಣವನ್ನು ತಿಳಿಯಲು ತನಿಖೆ ನಡೆಯುತ್ತಿವೆ ಎಂದು ಬೊರ್ನೊ ರಾಜ್ಯ ಪೊಲೀಸ್ ಕಮಾಂಡ್‌ನ ವಕ್ತಾರ ನಹುಮ್ ದಾಸೊ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸದ್ಯಕ್ಕೆ ದಾಳಿಯ ಹೊಣೆಯನ್ನು ಯಾವುದೇ ಗುಂಪು ಹೊತ್ತುಕೊಂಡಿಲ್ಲ, ಆದರೆ, ಈ ಮೊದಲು ಇಂತಹದ್ದೇ ಆತ್ಮಹತ್ಯಾ ದಾಳಿಗಳನ್ನು ನಿರಂತರವಾಗಿ ಮಾಡುತ್ತಿದ್ದ ಇಸ್ಲಾಮಿಕ್ ಉಗ್ರಗಾಮಿ ಗುಂಪು ಬೊಕೊ ಹರಾಮ್‌ ಈ ಘಟನೆಯ ಹಿಂದೆ ಇರಬಹುದು ಎಂದು ಹೇಳಲಾಗುತ್ತಿದೆ.
2009 ರಿಂದ ನೈಜೀರಿಯಾದಲ್ಲಿ ಬೊಕೊ ಹರಾಮ್, ಅದರ ವಿಭಜಿತ ಗುಂಪಾದ ಇಸ್ಲಾಮಿಕ್ ಸ್ಟೇಟ್ ಪಶ್ಚಿಮ ಆಫ್ರಿಕಾ ಪ್ರಾಂತ್ಯ ಸೇರಿದಂತೆ ಹಲವಾರು ಸಶಸ್ತ್ರ ಗುಂಪುಗಳೊಂದಿಗೆ ಹೋರಾಡುತ್ತಿದೆ. ಈ ಸಂಘರ್ಷದಿಂದಾಗಿ ಸಾವಿರಾರು ಜನರು ಪ್ರಾಣವನ್ನು ಕಳೆದುಕೊಂಡು, ಲಕ್ಷಾಂತರ ಜನರು ತಮ್ಮ ಮನೆಗಳಿಂದ ಸ್ಥಳಾಂತರಗೊಂಡಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಆತ್ಮಹತ್ಯಾ ಬಾಂಬರ್‌ಗಳ ಬಳಕೆ ಕಡಿಮೆಯಾಗಿದೆ, ಆದರೆ ಬೊಕೊ ಹರಾಮ್ ಇನ್ನೂ ಅಂತಹ ದಾಳಿಗಳನ್ನು ನಡೆಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ವಿಶ್ಲೇಷಕರು ಹೇಳುತ್ತಾರೆ,(ಏಜನ್ಸೀಸ್).