ಮೀನು ಹಿಡಿಯಲು ಹೋಗಿ ನೀರೊಳಗಿನ ಗುಹೆಯಲ್ಲಿ ಸಿಲುಕಿದ ಯುವಕ 2 ವಾರಗಳ ಬಳಿಕ ಬದುಕಿ ಬಂದಿದ್ದೇ ರೋಚಕ! Underwater Cave
- ಮೆಕ್ಸಿಕೋದ ನೀರಿನ ಗುಂಡಿಯಲ್ಲಿ ನಾಪತ್ತೆಯಾಗಿದ್ದ ಮೀನುಗಾರ ಹದಿನೈದು ದಿನಗಳ ಬಳಿಕ ಜೀವಂತವಾಗಿ ಪಾರು
- ಬೃಹತ್ ಮೀನೊಂದನ್ನು ಹಿಡಿಯಲು ಹೋಗಿ ದಾರಿ ತಪ್ಪಿದ ಎರಾಸ್ಟೊ ಕ್ರಿಸಾಂಟೊ ವಾಲ್ಡೆಸ್ ಗುಹೆಯಲ್ಲಿ ಸಿಲುಕಿಕೊಂಡಿದ್ದರು
- ಮುಳುಗುತಜ್ಞರ ತಂಡವು ನಡೆಸಿದ ಸುದೀರ್ಘ ಕಾರ್ಯಾಚರಣೆಯ ನಂತರ ಯಶಸ್ವಿಯಾಗಿ ರಕ್ಷಣೆ
- ಕೇವಲ ನೀರನ್ನು ಕುಡಿಯುತ್ತಾ ಪ್ರಾರ್ಥನೆ ಮಾಡುತ್ತಾ ಸಮಯದ ಅರಿವಿಲ್ಲದೆ ಅವರು ಗುಹೆಯೊಳಗೆ ಬದುಕುಳಿದಿದ್ದರು
Underwater Cave :ಮೆಕ್ಸಿಕೋದ ಸಿನೋಟ್ ಎಂಬ ನೈಸರ್ಗಿಕ ನೀರಿನ ಗುಂಡಿಯಲ್ಲಿ ತನ್ನ ತಂದೆಯೊಂದಿಗೆ ಮೀನುಗಾರಿಕೆಗೆ ತೆರಳಿದ್ದ ಯುವಕನೊಬ್ಬ, ನೀರಿನೊಳಗಿನ ಗುಹೆಯಲ್ಲಿ ಬರೋಬ್ಬರಿ ಎರಡು ವಾರಗಳಿಗೂ ಹೆಚ್ಚು ಕಾಲ ಅಂದರೆ 15 ದಿನಗಳ ಕಾಲ ಸಿಲುಕಿ ಪವಾಡವೆಂಬಂತೆ ಬದುಕಿ ಬಂದಿದ್ದಾರೆ.
ಮೆಕ್ಸಿಕೋದ ಸ್ಯಾನ್ ಫ್ರಾನ್ಸಿಸ್ಕೋ ಲಾ ಪಾಜ್‌ನಲ್ಲಿ ಜುಲೈ 23ರಂದು 31 ವರ್ಷದ ಎರಾಸ್ಟೊ ಕ್ರಿಸಾಂಟೊ ವಾಲ್ಡೆಸ್ ಎಂಬಾತ ತಮ್ಮ ತಂದೆಯೊಂದಿಗೆ ಮೀನುಗಾರಿಕೆಗೆ ತೆರಳಿದ್ದ. ಈ ವೇಳೆ ಎರಾಸ್ಟೊ ಬೃಹತ್ ಮೀನೊಂದನ್ನು ಹಿಡಿಯಲು ಅಟ್ಟಿಸಿಕೊಂಡು ಹೋದಾಗ ನೀರಿನೊಳಗೆ ದಾರಿ ತಪ್ಪಿ ಅಪಾಯಕಾರಿ ಗುಹೆಯಲ್ಲಿ ಸಿಲುಕಿಕೊಂಡರು. ಆರಂಭದಲ್ಲಿ ಅವರ ತಂದೆ ಹುಡುಕಾಡಿದರೂ ಪತ್ತೆಯಾಗದ ಕಾರಣ ಜುಲೈ 26ರಂದು ಅಧಿಕೃತವಾಗಿ ನಾಪತ್ತೆಯಾಗಿದ್ದಾರೆ ಎಂದು ದೂರು ದಾಖಲಿಸಲಾಯಿತು.
ನಾಪತ್ತೆಯಾದ ಆರು ದಿನಗಳ ಬಳಿಕ ಪರಿಶೋಧಕರು ನೀರಿನ ಅಡಿಯಲ್ಲಿ ಸುಮಾರು 65 ಮೀಟರ್ ಆಳದಲ್ಲಿ ಎರಾಸ್ಟೊ ಅವರ ಹಾರ್ಪೂನ್ (ಮೀನು ಹಿಡಿಯುವ ಆಯುಧ) ಅನ್ನು ಪತ್ತೆ ಮಾಡಿದರು. ಇದರ ಬೆನ್ನಲ್ಲೇ ಮೆಕ್ಸಿಕೋ, ಜರ್ಮನಿ, ಅಮೆರಿಕ ಹಾಗೂ ಡೊಮಿನಿಕನ್ ರಿಪಬ್ಲಿಕ್ ದೇಶಗಳ ಪರಿಣಿತ ಮುಳುಗುತಜ್ಞರ ಸಹಾಯದಿಂದ ಮೆಕ್ಸಿಕನ್ ನೌಕಾಪಡೆಯು ವಿಶಾಲವಾದ ಶೋಧನಾ ಕಾರ್ಯಾಚರಣೆ ನಡೆಸಿತು.
ಅಮೆರಿಕದ ಅನುಭವಿ ಗುಹಾ ಮುಳುಗುತಜ್ಞ ಹ್ಯಾರಿ ಗಸ್ಟ್ ಅವರು ಶೋಧನೆಯ ವೇಳೆ ಸುಮಾರು 100 ಮೀಟರ್ ಒಳಭಾಗದಲ್ಲಿ ಎರಾಸ್ಟೊ ಬಳಸಿದ್ದ ಹೆಚ್ಚುವರಿ ಏರ್ ಟ್ಯಾಂಕ್ ಅನ್ನು ಪತ್ತೆ ಹಚ್ಚಿದರು. ಮೊದಲಿಗೆ ಮೃತದೇಹವನ್ನು ಹುಡುಕುವ ಮಿಷನ್ ಎಂದುಕೊಂಡಿದ್ದ ರಕ್ಷಕರಿಗೆ, ಒಂದು ಅಚ್ಚರಿ ಕಾದಿತ್ತು. ಅದೇನೆಂದರೆ, ಆ ದೊಡ್ಡ ಒಣ ಗುಹೆಯೊಳಗೆ ಎರಾಸ್ಟೊ ಜೀವಂತವಾಗಿರುವುದು ಪತ್ತೆಯಾಯಿತು.
ಮುಳುಗುತಜ್ಞ ಹ್ಯಾರಿ ಗಸ್ಟ್ ಅವರು ಗುಹೆಯೊಳಗೆ ಜೋರಾಗಿ ಕೂಗಿ ಕೇಳಿದಾಗ, ಒಳಗೆ ಸಿಲುಕಿದ್ದ ಎರಾಸ್ಟೊ "ಹೌದು!" ಎಂದು ಧ್ವನಿ ನೀಡಿ ಪ್ರತಿಕ್ರಿಯೆ ನೀಡಿದರು. ತಕ್ಷಣವೇ ಇತರ ರಕ್ಷಕರೊಂದಿಗೆ ವಾಪಸ್ ಬಂದ ಗಸ್ಟ್ ಅವರು, ಎರಾಸ್ಟೊಗೆ ಉಸಿರಾಡಲು ಆಮ್ಲಜನಕದ ಉಪಕರಣವನ್ನು ನೀಡಿ ಧೈರ್ಯ ತುಂಬಿದರು. ನಂತರ ಕತ್ತಲೆ ಹಾಗೂ ಅತ್ಯಂತ ಕಿರಿದಾದ ಕಲ್ಲುಗಳ ನಡುವೆ 100 ಮೀಟರ್ ದೂರದವರೆಗೆ ಸುರಕ್ಷಿತವಾಗಿ ಈಜಿಸಿಕೊಂಡು ಬಂದು ಅವರನ್ನು ಮೇಲ್ಮೈಗೆ ಕರೆತರಲಾಯಿತು.
ಸುಮಾರು 15 ದಿನಗಳ ಕಾಲ ಆಹಾರವಿಲ್ಲದೆ ಕೇವಲ ಒಣ ಗುಹೆಯೊಳಗೆ ಹರಿಯುತ್ತಿದ್ದ ನೀರಿನ ಆಸರೆಯಿಂದ ಮಾತ್ರ ಎರಾಸ್ಟೊ ಬದುಕುಳಿದಿದ್ದಾರೆ. ಸಮಯದ ಪ್ರಜ್ಞೆಯಿಲ್ಲದೆ ಕೇವಲ ಮೂರು ದಿನಗಳಷ್ಟೇ ಕಳೆದಿದೆ ಎಂದು ನಂಬಿದ್ದ ಅವರು, ನಿದ್ರೆ ಮಾಡುತ್ತಾ ಮತ್ತು ಪ್ರಾರ್ಥನೆ ಮಾಡುತ್ತಾ ಕಾಲ ಕಳೆದಿದ್ದಾಗಿ ತಿಳಿಸಿದರು.
ಅಂತಿಮವಾಗಿ ತೀವ್ರ ನಿರ್ಜಲೀಕರಣ ಹಾಗೂ ಅಪೌಷ್ಟಿಕತೆಯಿಂದ ಬಳಲುತ್ತಿದ್ದ ಎರಾಸ್ಟೊ ಅವರನ್ನು ಸ್ಟ್ರೆಚರ್ ಮೂಲಕ ಹೊರತಂದು ಆಂಬುಲೆನ್ಸ್‌ನಲ್ಲಿ ಉಕ್ಸ್‌ಪನಾಪಾದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ತಮ್ಮನ್ನು ಬದುಕಿಸಿದ ದೇವರಿಗೆ ಕೃತಜ್ಞತೆ ಸಲ್ಲಿಸಿರುವ ಎರಾಸ್ಟೊ, ಇದು ನಂಬಲಾಗದ ಪವಾಡ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ, (ಏಜೆನ್ಸೀಸ್).