ಇರಾನ್​ನ ಮುಂದಿನ ಸುಪ್ರೀಂ ಲೀಡರ್​ ಆಗಿ ಖಮೇನಿ ಪುತ್ರ ಮೊಜ್ತಬಾ ಹೊಸೇನಿ ಖಮೇನಿ ಆಯ್ಕೆ! Supreme Leader 
ವಿದೇಶ

ಇರಾನ್​ನ ಮುಂದಿನ ಸುಪ್ರೀಂ ಲೀಡರ್​ ಆಗಿ ಖಮೇನಿ ಪುತ್ರ ಮೊಜ್ತಬಾ ಹೊಸೇನಿ ಖಮೇನಿ ಆಯ್ಕೆ! Supreme Leader

ಪ್ರಮುಖ ಮುಖ್ಯಾಂಶಗಳು

  • ಇರಾನ್‌ನ ಮುಂದಿನ ಸರ್ವೋಚ್ಚ ನಾಯಕನಾಗಿ ಮೊಜ್ತಬಾ ಹೊಸೇನಿ ಖಮೇನಿ ಆಯ್ಕೆ
  • ಮೊಜ್ತಬಾ ಹೊಸೇನಿ ಖಮೇನಿ ಅವರು ಅಯತೊಲ್ಲಾ ಖಮೇನಿಯವರ ಪುತ್ರ
  • ಅಮೆರಿಕ ಮತ್ತು ಇಸ್ರೇಲ್​ ಜಂಟಿಯಾಗಿ ನಡೆಸಿದ ದಾಳಿಯಲ್ಲಿ ಅಯತೊಲ್ಲಾ ಖಮೇನಿ ಹತ್ಯೆ
ತೆಹ್ರಾನ್​ : ಅಯತೊಲ್ಲಾ ಖಮೇನಿಯವರ ಪುತ್ರ ಮೊಜ್ತಬಾ ಹೊಸೇನಿ ಖಮೇನಿ ಅವರನ್ನು ಇರಾನ್‌ನ ಮುಂದಿನ ಸರ್ವೋಚ್ಚ ನಾಯಕನಾಗಿ (  Supreme Leader ) ಆಯ್ಕೆ ಮಾಡಲಾಗಿದೆ ಎಂದು ಇಸ್ರೇಲಿ ಮಾಧ್ಯಮಗಳು ವರದಿ ಮಾಡಿವೆ.
ಅಮೆರಿಕ ಮತ್ತು ಇಸ್ರೇಲ್​ ಜಂಟಿಯಾಗಿ ನಡೆಸಿದ ದಾಳಿಯಲ್ಲಿ ಅಯತೊಲ್ಲಾ ಖಮೇನಿ ಹತ್ಯೆಯಾದ ಬಳಿಕ ಅವರ ಪುತ್ರ ಮೊಜ್ತಬಾ ಹೊಸೇನಿ ಅವರನ್ನು ಉನ್ನತ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ.
ಇರಾನಿನ ಸಂವಿಧಾನದ ಪ್ರಕಾರ, 88 ಹಿರಿಯ ಇಸ್ಲಾಮಿಕ್ ವಿದ್ವಾಂಸರನ್ನು ಒಳಗೊಂಡ ಪ್ರಬಲ ಪಾದ್ರಿ ಸಂಸ್ಥೆಯಾದ ತಜ್ಞರ ಸಭೆಯು ಮೊಜ್ತಬಾ ಹೊಸೇನಿ ಅವರನ್ನು ಅಯತೊಲ್ಲಾ ಖಮೇನಿಯ ಉತ್ತರಾಧಿಕಾರಿಯಾಗಿ ಆಯ್ಕೆ ಮಾಡಿದೆ ಎಂದು ವರದಿಗಳು ತಿಳಿಸಿವೆ.
ಅಂದಹಾಗೆ, ಇರಾನ್‌ನ ಸರ್ವೋಚ್ಚ ನಾಯಕ, ಇಸ್ಲಾಮಿಕ್ ಗಣರಾಜ್ಯದ ಅತ್ಯಂತ ಶಕ್ತಿಶಾಲಿ ವ್ಯಕ್ತಿ. ಸಶಸ್ತ್ರ ಪಡೆಗಳು, ಭದ್ರತಾ ಸೇವೆಗಳು ಮತ್ತು ಸರ್ಕಾರದ ಪ್ರಮುಖ ಸಂಸ್ಥೆಗಳನ್ನು ಸುಪ್ರೀಂ ಲೀಡರ್​ ನಿಯಂತ್ರಿಸುತ್ತಾರೆ. ಅಲ್ಲದೆ, ದೇಶದ ವಿದೇಶಿ ಮತ್ತು ದೇಶೀಯ ನೀತಿಗಳನ್ನು ರೂಪಿಸುತ್ತಾರೆ. 
86 ವರ್ಷ ವಯಸ್ಸಿನ ಖಮೇನಿ 1989 ರಿಂದ ಇರಾನ್‌ನ ಸರ್ವೋಚ್ಚ ನಾಯಕರಾಗಿದ್ದರು. ತಮ್ಮ ದೀರ್ಘ ಅಧಿಕಾರಾವಧಿಯಲ್ಲಿ, ಅನೇಕ ಬಿಕ್ಕಟ್ಟುಗಳು, ಯುದ್ಧಗಳು ಮತ್ತು ರಾಜಕೀಯ ಪ್ರಕ್ಷುಬ್ಧತೆಯನ್ನು ಎದುರಿಸಿದ್ದಾರೆ. ಪ್ರಸ್ತುತ, ಇಸ್ರೇಲ್ ಮತ್ತು ಯುಎಸ್, ಇರಾನ್‌ಗೆ ಪ್ರಮುಖ ಬೆದರಿಕೆ ಆಗಿದೆ. ಇಂತಹ ಪರಿಸ್ಥಿತಿಯಲ್ಲಿ, ಖಮೇನಿ ಸ್ಥಾನವನ್ನು ಯಾರು ತುಂಬುತ್ತಾರೆ ಎಂಬ ಕುತೂಹಲವಿತ್ತು. ಅಂತಿಮವಾಗಿ ಅವರ ಪುತ್ರನೇ ಆ ಸ್ಥಾನವನ್ನು ಅಲಂಕರಿಸಿದ್ದಾರೆಂದು ತಿಳಿದುಬಂದಿದೆ.

ಯಾರು ಈ ಮೊಜ್ತಬಾ ಹೊಸೇನಿ ಖಮೇನಿ?

ಮೊಜ್ತಬಾ ಹೊಸೇನಿ ಖಮೇನಿ ಇರಾನ್‌ನ ರಾಜಕೀಯ ಮತ್ತು ಧಾರ್ಮಿಕ ವ್ಯಕ್ತಿಯ. ಇವರು ಮಾಜಿ ಸುಪ್ರೀಂ ಲೀಡರ್ ಅಯತೊಲ್ಲಾ ಅಲಿ ಖಮೇನಿ ಅವರ ಎರಡನೇ ಹಿರಿಯ ಮಗನಾಗಿದ್ದಾರೆ. 1969ರಲ್ಲಿ ಮಷ್ಹದ್‌ನಲ್ಲಿ ಜನಿಸಿದ ಮೊಜ್ತಬಾ ಹೊಸೇನಿ, ಕ್ಲರಿಕ್ (ಧಾರ್ಮಿಕ ವಿದ್ವಾಂಸ) ಆಗಿದ್ದು, ತಂದೆಯವರ ಆಡಳಿತದ ಸಮಯದಲ್ಲಿ IRGC (ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್) ಮತ್ತು ಸುಪ್ರೀಂ ಲೀಡರ್ ಕಚೇರಿಯ ಪ್ರಮುಖ ಶಕ್ತಿಯಾಗಿ ಪ್ರಭಾವ ಬೀರುತ್ತಿದ್ದರು.

ಯುದ್ಧಕ್ಕೆ ಕಾರಣ ಏನು?

ಪ್ರಸ್ತುತ ಇರಾನ್-ಇಸ್ರೇಲ್ ನಡುವೆ ನಡೆಯುತ್ತಿರುವ ಯುದ್ಧಕ್ಕೆ ಮುಖ್ಯ ಕಾರಣ ಇರಾನ್‌ನ ನ್ಯೂಕ್ಲಿಯರ್ ಕಾರ್ಯಕ್ರಮ. ಅಲ್ಲದೆ, ಇರಾನ್​ನ ಬ್ಯಾಲಿಸ್ಟಿಕ್ ಮಿಸೈಲ್ ಸಾಮರ್ಥ್ಯವನ್ನು ಇಸ್ರೇಲ್ ಮತ್ತು ಅಮೆರಿಕ, ಇಸ್ರೇಲ್‌ಗೆ ಅಸ್ತಿತ್ವದ ಬೆದರಿಕೆ ಎಂದು ಪರಿಗಣಿಸಿದೆ. 2025ರ ಜೂನ್‌ನಲ್ಲಿ 12-ದಿನಗಳ ಕಾಲ ಯುದ್ಧ ನಡೆದಿತ್ತು. ಈ ಸಮಯದಲ್ಲೂ ಇಸ್ರೇಲ್ ಮತ್ತು ಅಮೆರಿಕ ಇರಾನ್‌ನ ನ್ಯೂಕ್ಲಿಯರ್ ತಾಣಗಳ ಮೇಲೆ ದಾಳಿ ಮಾಡಿದ್ದವು. ಇದೀಗ, ಇರಾನ್ ತನ್ನ ನ್ಯೂಕ್ಲಿಯರ್​ ಕಾರ್ಯಕ್ರಮವನ್ನು ಮತ್ತೆ ಆರಂಭಿಸುತ್ತಿದ್ದಂತೆ 2026, ಫೆಬ್ರವರಿ 28ರಂದು ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ದೊಡ್ಡ ಮಟ್ಟದ ದಾಳಿ ಆರಂಭಿಸಿದವು. ಈ ದಾಳಿಯ ಗುರಿ ಇರಾನ್‌ನ ನ್ಯೂಕ್ಲಿಯರ್/ಮಿಸೈಲ್ ಸಾಮರ್ಥ್ಯವನ್ನು ನಾಶಗೊಳಿಸುವುದು, ನೌಕಾಪಡೆಯನ್ನು ನಿಷ್ಕ್ರಿಯಗೊಳಿಸುವುದು ಮತ್ತು ಆಡಳಿತ ವ್ಯವಸ್ಥೆಯನ್ನ ಬದಲಾಯಿಸುವುದು. ಇದಕ್ಕೆ ಪ್ರತಿಯಾಗಿ ಇರಾನ್ ಮಿಸೈಲ್/ಡ್ರೋನ್ ದಾಳಿಗಳ ಮೂಲಕ ಪ್ರತೀಕಾರ ನಡೆಸುತ್ತಿದೆ, (ಏಜೆನ್ಸೀಸ್​).