ಇರಾನ್‌ನಲ್ಲಿ ಮೊಜ್ತಬಾ ಅಟ್ಟಹಾಸ ಶುರು! ಶಾಂತಿ ಮಾತುಕತೆಗೂ ಮುನ್ನವೇ ಇಸ್ರೇಲ್ ಸಂಸತ್ತಿನಲ್ಲಿ ಲೀಕ್ ಆಯ್ತು ಆ ಭೀಕರ ವರದಿ!
ಟೆಲ್ಅವಿವ್: ಪರಿಚಿತ ದೆವ್ವಕ್ಕಿಂತ ಅಪರಿಚಿತ ದೆವ್ವವೇ ವಾಸಿ ಎಂಬ ಮಾತು ಈಗ ಇಸ್ರೇಲ್(Israeli parliament) ಮತ್ತು ಅಮೆರಿಕದ ಪಾಲಿಗೆ ಅಕ್ಷರಶಃ ನಿಜವಾಗಿದೆ. ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಮತ್ತು ಸರ್ಕಾರವನ್ನು ಮಿಲಿಟರಿ ಶಕ್ತಿಯ ಮೂಲಕ ಕಿತ್ತೊಗೆದ ಇಸ್ರೇಲ್, ಈಗ ಅದಕ್ಕಿಂತಲೂ ನೂರು ಪಟ್ಟು ಅಪಾಯಕಾರಿ ಸಮಸ್ಯೆಯನ್ನು ಮೈಮೇಲೆ ಎಳೆದುಕೊಂಡಿದೆ. ಇರಾನ್‌ನ ಹೊಸ ಆಡಳಿತವು ಹಿಂದಿನ ಸರ್ಕಾರಕ್ಕಿಂತಲೂ ಅತ್ಯಂತ ಉಗ್ರ ಮತ್ತು ಅತಿರೇಕದ ಸ್ವಭಾವ ಹೊಂದಿದೆ ಎಂದು ಇಸ್ರೇಲ್ ರಕ್ಷಣಾ ಪಡೆ (IDF) ತನ್ನ ಸಂಸತ್ತಾದ ನೆಸೆಟ್ಗೆ ಎಚ್ಚರಿಕೆ ನೀಡಿದೆ.
ಐಆರ್‌ಜಿಸಿ ಕಮಾಂಡರ್‌ಗಳ ಕೈಗೆ ಇರಾನ್ ಅಧಿಕಾರ!
ಇಸ್ರೇಲ್‌ನ ಗುಪ್ತಚರ ವರದಿಯ ಪ್ರಕಾರ, ಇರಾನ್‌ನ ಪ್ರಸ್ತುತ ನಾಯಕತ್ವವು ಸಂಪೂರ್ಣವಾಗಿ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಕಮಾಂಡರ್‌ಗಳ ಕೈಯಲ್ಲಿದೆ. ಇವರು ಹಿಂದಿನ ರಾಜಕೀಯ ನಾಯಕರಿಗಿಂತಲೂ ಹೆಚ್ಚು ಕಟ್ಟುನಿಟ್ಟಾದ ಸೈದ್ಧಾಂತಿಕ ಹಿನ್ನೆಲೆ ಹೊಂದಿದ್ದಾರೆ ಮತ್ತು ಇಸ್ರೇಲ್ ಅನ್ನು ಸರ್ವನಾಶ ಮಾಡುವ ಸಂಕಲ್ಪ ಹೊಂದಿದ್ದಾರೆ. ಅಯತೊಲ್ಲಾ ಖಮೇನಿಯ ಮಗ ಮೊಜ್ತಬಾ ಖಮೇನಿ ಹೊಸ ಸುಪ್ರೀಂ ಲೀಡರ್ ಆಗಿ ಅಧಿಕಾರ ವಹಿಸಿಕೊಂಡಿದ್ದು, ಇವರು ಅಧಿಕಾರಕ್ಕೆ ಬಂದ ಕೂಡಲೇ ಇರಾನ್ ಈ ಯುದ್ಧದಿಂದ ಮತ್ತಷ್ಟು ಬಲಶಾಲಿಯಾಗಿ ಹೊರಹೊಮ್ಮಿದೆ ಎಂದು ಗುಡುಗಿದ್ದಾರೆ.
40 ದಿನಗಳ ಯುದ್ಧದ ಭೀಕರ ಲೆಕ್ಕಾಚಾರ
ಕಳೆದ 40 ದಿನಗಳಿಂದ ನಡೆಯುತ್ತಿರುವ ಈ ಮಹಾಸಮರದಲ್ಲಿ ಇಸ್ರೇಲ್ ವಾಯುಪಡೆ ಇರಾನ್ ಒಳಗೆ 1,000ಕ್ಕೂ ಹೆಚ್ಚು ದಾಳಿಗಳನ್ನು ನಡೆಸಿದೆ. ಒಟ್ಟಾರೆಯಾಗಿ 8,500 ಹಾರಾಟಗಳನ್ನು ನಡೆಸಿರುವ ಇಸ್ರೇಲ್, ಇರಾನ್‌ನ 4,000 ಗುರಿಗಳನ್ನು ಧ್ವಂಸಗೊಳಿಸಿದೆ. ಆದರೆ, ಇಷ್ಟೆಲ್ಲಾ ವಿನಾಶದ ನಂತರವೂ ಇಸ್ರೇಲ್‌ಗೆ ಗೆಲುವು ಸಿಕ್ಕಿಲ್ಲ, ಬದಲಿಗೆ ಹೆಚ್ಚು ಅಪಾಯಕಾರಿ ಶತ್ರು ಸೃಷ್ಟಿಯಾಗಿದ್ದಾನೆ. ಅತ್ತ ಅಮೆರಿಕ ಕೂಡ ಈ ಯುದ್ಧದಲ್ಲಿ ಕೋಟ್ಯಂತರ ಡಾಲರ್ ಮೌಲ್ಯದ ಮಿಲಿಟರಿ ಆಸ್ತಿಯನ್ನು ಕಳೆದುಕೊಂಡಿದೆ.
ಶಾಂತಿ ಮಾತುಕತೆಗೆ ತಣ್ಣೀರು..?
ಶನಿವಾರ ಪಾಕಿಸ್ತಾನದಲ್ಲಿ ಅಮೆರಿಕ ಮತ್ತು ಇರಾನ್ ನಡುವೆ ಶಾಂತಿ ಮಾತುಕತೆ ನಡೆಯಬೇಕಿದೆ. ಅಮೆರಿಕದ ಪರವಾಗಿ ಉಪಾಧ್ಯಕ್ಷ ಜೆಡಿ ವ್ಯಾನ್ಸ್, ಜ್ಯಾರೆಡ್ ಕುಶ್ನರ್ ಭಾಗವಹಿಸುತ್ತಿದ್ದರೆ, ಇರಾನ್ ಪರವಾಗಿ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಘೇರ್ ಖಾಲಿಬಾಫ್ ನೇತೃತ್ವ ವಹಿಸುವ ಸಾಧ್ಯತೆಯಿದೆ. ಆದರೆ, ಇರಾನ್‌ನ ಹೊಸ ಹಾರ್ಡ್‌ಲೈನರ್ ಸರ್ಕಾರವು ಮಾತುಕತೆಯಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವ ಲಕ್ಷಣ ಕಾಣುತ್ತಿಲ್ಲ. ಇಸ್ರೇಲ್‌ನ ಭದ್ರತಾ ಸಮಿತಿಯ ಅಧ್ಯಕ್ಷ ಬೋವಾಜ್ ಬಿಸ್ಮತ್ ಹೇಳುವಂತೆ, ಇದು ಕೇವಲ ವಿರಾಮವಷ್ಟೇ, ಮುಂದಿನ ದಿನಗಳಲ್ಲಿ ಯುದ್ಧ ಮತ್ತೆ ತಾರಕಕ್ಕೇರಬಹುದು ಎಂದು ಹೇಳಿದ್ದಾರೆ.
ಜಗತ್ತಿಗೆ ಎದುರಾದ ಇಂಧನ ಗಂಡಾಂತರ
ಈ 40 ದಿನಗಳ ಯುದ್ಧವು ಕೇವಲ ಇಸ್ರೇಲ್-ಇರಾನ್‌ಗೆ ಮಾತ್ರವಲ್ಲ, ಇಡೀ ಜಗತ್ತಿಗೆ ತಲೆನೋವಾಗಿ ಪರಿಣಮಿಸಿದೆ. ಪೆಟ್ರೋಕೆಮಿಕಲ್ ಮತ್ತು ಇಂಧನ ಪೂರೈಕೆಯಲ್ಲಿ ಭಾರಿ ವ್ಯತ್ಯಯ ಉಂಟಾಗಿದ್ದು, ಜಾಗತಿಕ ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಯಾಗಿದೆ. ಒಂದು ವೇಳೆ ಇರಾನ್‌ನ ಹೊಸ ಕಟುವಾದ ಆಡಳಿತವು ತನ್ನ ಪಟ್ಟು ಸಡಿಲಿಸದಿದ್ದರೆ, ವಿಶ್ವವು ಮತ್ತೊಂದು ಭೀಕರ ಆರ್ಥಿಕ ಬಿಕ್ಕಟ್ಟಿಗೆ ಸಾಕ್ಷಿಯಾಗಬೇಕಾಗುತ್ತದೆ,(ಏಜೆನ್ಸೀಸ್).