Mojtaba Khamenei  
ವಿದೇಶ

ಮೊಜ್ತಬಾ ಖಮೇನಿ ಬದುಕಿರಬಹುದು, ಆದ್ರೆ.... ಇರಾನ್ ಸುಪ್ರೀಂ ಲೀಡರ್ ಬಗ್ಗೆ ಟ್ರಂಪ್ ಹೊಸ ಬಾಂಬ್! | Mojtaba Khamenei

ವಾಷಿಂಗ್ಟನ್: ಇರಾನ್‌ನ ನೂತನ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ(Mojtaba Khamenei) ಅವರ ಆರೋಗ್ಯದ ಕುರಿತು ಜಗತ್ತಿನಾದ್ಯಂತ ಹರಡಿರುವ ವದಂತಿಗಳಿಗೆ ಈಗ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆ ಹೊಸ ಟ್ವಿಸ್ಟ್ ನೀಡಿದೆ. 
ಹೌದು,"ಮೊಜ್ತಬಾ ಖಮೇನಿ ಯಾವುದೋ ಒಂದು ರೂಪದಲ್ಲಿ ಇನ್ನೂ ಬದುಕಿರಬಹುದು, ಆದರೆ ಅವರು ತೀವ್ರವಾಗಿ ಜರ್ಜರಿತರಾಗಿದ್ದಾರೆ" ಎಂದು ಟ್ರಂಪ್ ಹೇಳುವ ಮೂಲಕ ಇರಾನ್ ನಾಯಕನ ಸ್ಥಿತಿ ಚಿಂತಾಜನಕವಾಗಿದೆ ಎಂಬ ವರದಿಗಳಿಗೆ ಪುಷ್ಠಿ ನೀಡಿದ್ದಾರೆ.
ಫಾಕ್ಸ್ ನ್ಯೂಸ್ ರೇಡಿಯೋ ಕಾರ್ಯಕ್ರಮದಲ್ಲಿ ಮಾತನಾಡಿದ ಡೊನಾಲ್ಡ್ ಟ್ರಂಪ್, ಫೆಬ್ರವರಿ 28 ರಂದು ನಡೆದ ಅಮೆರಿಕ-ಇಸ್ರೇಲ್ ಜಂಟಿ ವೈಮಾನಿಕ ದಾಳಿಯಲ್ಲಿ ಮೊಜ್ತಬಾ ಅವರು ಬದುಕುಳಿದಿರುವ ಸಾಧ್ಯತೆ ಇದೆ ಎಂದಿದ್ದಾರೆ. "ಅವರು ಬಹುಶಃ ಬದುಕಿದ್ದಾರೆಂದೇ ನಾನು ಭಾವಿಸುತ್ತೇನೆ. ಆದರೆ ಅವರು ಯಾವುದೋ ಒಂದು ರೂಪದಲ್ಲಿ (In some form) ಬದುಕಿರಬಹುದು. ದಾಳಿಯಲ್ಲಿ ಅವರು ತೀವ್ರವಾಗಿ ಹಾನಿಗೊಳಗಾಗಿದ್ದಾರೆ (Damaged)," ಎಂದು ಟ್ರಂಪ್ ಮಾರ್ಮಿಕವಾಗಿ ನುಡಿದಿದ್ದಾರೆ.
ಅವರ ತಂದೆ ಅಯತೊಲ್ಲಾ ಅಲಿ ಖಮೇನಿ ಹತರಾದ ಅದೇ ದಾಳಿಯಲ್ಲಿ ಮೊಜ್ತಬಾ ಕೂಡ ತೀವ್ರವಾಗಿ ಗಾಯಗೊಂಡಿದ್ದು, ಅವರು ಕೋಮಾಗೆ ಜಾರಿದ್ದಾರೆ ಎಂಬ ವರದಿಗಳ ಬೆನ್ನಲ್ಲೇ ಟ್ರಂಪ್ ಈ ಹೇಳಿಕೆ ನೀಡಿದ್ದಾರೆ.

ಸಂದೇಹ ಮೂಡಿಸಿದ ಸಾರ್ವಜನಿಕ ಅನುಪಸ್ಥಿತಿ

56 ವರ್ಷದ ಮೊಜ್ತಬಾ ಖಮೇನಿ ಅವರು ಅಧಿಕಾರ ವಹಿಸಿಕೊಂಡ ನಂತರ ಇದುವರೆಗೆ ಒಮ್ಮೆಯೂ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ದಾಳಿಯಲ್ಲಿ ಅವರು ಒಂದು ಕಾಲನ್ನು ಕಳೆದುಕೊಂಡಿದ್ದಾರೆ ಮತ್ತು ಅವರ ಕುಟುಂಬದ ಸದಸ್ಯರು ಕೂಡ ಹತರಾಗಿದ್ದಾರೆ ಎಂಬ 'ದಿ ಸನ್' ವರದಿಯು ಅವರ ಅನುಪಸ್ಥಿತಿಗೆ ಪುಷ್ಠಿ ನೀಡಿದೆ.  ಅವರು ತೆಹ್ರಾನ್‌ನ ಆಸ್ಪತ್ರೆಯಲ್ಲಿ ಕಟ್ಟುನಿಟ್ಟಿನ ಭದ್ರತೆಯ ನಡುವೆ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ವದಂತಿಗಳು ಬಲವಾಗಿವೆ.
ಟ್ರಂಪ್ ಅವರ ಈ ಇತ್ತೀಚಿನ ಹೇಳಿಕೆಯು ಇರಾನ್ ನಾಯಕತ್ವದ ಸುತ್ತಲಿನ ನಿಗೂಢತೆಯನ್ನು ಮತ್ತಷ್ಟು ಹೆಚ್ಚಿಸಿದೆ. ಮೊಜ್ತಬಾ ನಿಜವಾಗಿಯೂ ಸಕ್ರಿಯವಾಗಿ ಆಡಳಿತ ನಡೆಸುತ್ತಿದ್ದಾರೆಯೇ ಅಥವಾ ಅವರ ಹೆಸರಿನಲ್ಲಿ ಸೇನಾ ಪಡೆಗಳು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದವೆಯೇ ಎಂಬುದು ಮುಂದಿನ ದಿನಗಳಲ್ಲಿ ಸ್ಪಷ್ಟವಾಗಬೇಕಿದೆ,(ಏಜೆನ್ಸೀಸ್).