ಕ್ರಿಕೆಟ್​ ಮಾತ್ರವಲ್ಲ ಪಾಕ್​ನಲ್ಲಿ ಯಾವುದೂ ಸರಿಯಲ್ಲ ಅನ್ನೋದಕ್ಕೆ ಇದಕ್ಕಿಂತ ಇನ್ನೊಂದು ಸಾಕ್ಷಿ ಬೇಕಿಲ್ಲ! | Pakistan PM  
ವಿದೇಶ

ಕ್ರಿಕೆಟ್​ ಮಾತ್ರವಲ್ಲ ಪಾಕ್​ನಲ್ಲಿ ಯಾವುದೂ ಸರಿಯಲ್ಲ ಅನ್ನೋದಕ್ಕೆ ಇದಕ್ಕಿಂತ ಇನ್ನೊಂದು ಸಾಕ್ಷಿ ಬೇಕಿಲ್ಲ! | Pakistan PM

ಪ್ರಧಾನಿ ಶೆಹಬಾಜ್ ಷರೀಫ್ ಭಾಗವಹಿಸಿದ್ದ ಸಭೆಯೊಂದರಲ್ಲಿ ಮಾತನಾಡಿದ ನಖ್ವಿ, ಕಳೆದ ಒಂದು ತಿಂಗಳಿನಿಂದ ಕೆಲವರು ಕಚೇರಿಗೆ ಬಂದಿಲ್ಲ ಎಂದು ವ್ಯಂಗ್ಯವಾಡಿದರು. ಇದೇ ಈಗ ವಿವಾದವನ್ನು ಸೃಷ್ಟಿಸಿದೆ.

Pakistan PM: ಏಷ್ಯನ್​ ಗೇಮ್ಸ್ ಕ್ರೀಡಾಕೂಟದಲ್ಲಿ ಸೋತು ಸುಣ್ಣವಾದ ಪಾಕಿಸ್ತಾನ ಕ್ರಿಕೆಟ್​ ತಂಡಕ್ಕೆ ಭಾರಿ ಮುಖಭಂಗ ಆಗಿರುವುದು ಎಲ್ಲರಿಗೂ ಗೊತ್ತೇ ಇದೆ. ತಂಡದ ನಾಯಕ ಮತ್ತು ಆಟಗಾರರಿಗೆ ಹಿಗ್ಗಾಮುಗ್ಗಾ ಜಾಡಿಸಿರುವ ಪಾಕಿಸ್ತಾನ ಕ್ರಿಕೆಟ್​ ಮಂಡಳಿ, ಕ್ಯಾಪ್ಟನ್​ ಬದಲಾವಣೆಯನ್ನೂ ಮಾಡಿಬಿಟ್ಟಿದೆ. ಇಡೀ ಜಗತ್ತಿನ ಮುಂದೆ ತೀವ್ರ ಮುಜುಗರಕ್ಕೆ ಸಿಲುಕಿರುವ ಪಾಕ್​ ಪರಿಸ್ಥಿತಿ ಈಗ ಇನ್ನೂ ಹದಗೆಟ್ಟಿದೆ ಎಂಬುದಕ್ಕೆ ರಾಜಕೀಯ ಕೋಲಾಹಲವೇ ಕಾರಣ.

ಪ್ರಧಾನಿ ಎದುರೇ ಓಪನ್​ ಟಾಕ್​

ಪಾಕಿಸ್ತಾನ ಪ್ರಧಾನಿಯ ವಿರುದ್ಧವೇ ಮೊಹ್ಸಿನ್ ನಖ್ವಿ ಆಡಿರುವ ಮಾತುಗಳು ಸದ್ಯ ಭಾರೀ ಸಂಚಲನ ಮೂಡಿಸಿದ್ದು, ರಾಷ್ಟ್ರ ರಾಜಕಾರಣದಲ್ಲಿ ವ್ಯಾಪಕ ಚರ್ಚೆಗೂ ಗ್ರಾಸವಾಗಿದೆ. ಪ್ರಧಾನಿ ಶೆಹಬಾಜ್ ಷರೀಫ್ ಭಾಗವಹಿಸಿದ್ದ ಸಭೆಯೊಂದರಲ್ಲಿ ಮಾತನಾಡಿದ ನಖ್ವಿ, ಕಳೆದ ಒಂದು ತಿಂಗಳಿನಿಂದ ಕೆಲವರು ಕಚೇರಿಗೆ ಬಂದಿಲ್ಲ ಎಂದು ವ್ಯಂಗ್ಯವಾಡಿದರು. ಇದೇ ಈಗ ವಿವಾದವನ್ನು ಸೃಷ್ಟಿಸಿದೆ.

ಕೆಲವರು ತಿಂಗಳಾದ್ರೂ ಕಚೇರಿಗೆ...

ಮಂಗಳವಾರ ಇಸ್ಲಾಮಾಬಾದ್‌ನಲ್ಲಿ ನಡೆದ ಕಾಶ್ಮೀರ ಚೌಕ್ ಅಂಡರ್‌ಪಾಸ್‌ನ ಶಂಕುಸ್ಥಾಪನಾ ಸಮಾರಂಭದಲ್ಲಿ ಮಾತನಾಡಿದ ನಖ್ವಿ, ನಮ್ಮ ಚುನಾಯಿತ ಪ್ರತಿನಿಧಿಗಳು ಜನರಿಗಾಗಿ ತಮ್ಮ ಸಮಯವನ್ನು ಹೇಗೆ ಬಳಸುತ್ತಿದ್ದಾರೆ ಎಂಬುದನ್ನು ಗಮನಿಸಬೇಕು. ನಾವೆಲ್ಲರೂ ಜನರಿಗೆ ಹೊಣೆಗಾರರಾಗಿದ್ದೇವೆ. ಜನರಿಂದ ಆಯ್ಕೆಯಾದ ಪ್ರತಿನಿಧಿಯು ಪ್ರತಿ ನಿಮಿಷವನ್ನೂ ಜನರಿಗಾಗಿ ಮೀಸಲಿಡುತ್ತಿದ್ದಾರೆಯೇ ಅಥವಾ ಸುಮ್ಮನೆ ರಾಜಕೀಯದಲ್ಲಿ ತಮ್ಮ ಸಮಯವನ್ನು ವ್ಯರ್ಥ ಮಾಡುತ್ತಿದ್ದಾರಾ? ಎಂಬುದನ್ನು ಗಮನಿಸಬೇಕು ಎಂದರು.

ಮಾತು ಮುಂದುವರಿಸಿದ ನಖ್ವಿ, "ಒಂದೆಡೆ, ಒಂದು ತಿಂಗಳಿನಿಂದ ಕಚೇರಿಗೆ ಬಾರದಿರುವ ಮತ್ತು ಒಂದೇ ಒಂದು ಸಭೆಗೂ ಹಾಜರಾಗದ ಚುನಾಯಿತ ಪ್ರತಿನಿಧಿಯಿದ್ದಾರೆ. ಇನ್ನೊಂದೆಡೆ, ಒಂದು ಗಂಟೆಯೂ ವಿರಾಮ ತೆಗೆದುಕೊಳ್ಳದೆ ಜನರಿಗಾಗಿ ಕೆಲಸ ಮಾಡುವ ವ್ಯಕ್ತಿಗಳೂ ಇದ್ದಾರೆ" ಎಂದು ಹೇಳಿದರು. ಇಲ್ಲಿ, ನಖ್ವಿ ಯಾರು ಆ ನಾಯಕ ಎಂದು ಹೆಸರೇಳದೆ ಪ್ರಸ್ತಾಪಿಸಿದ್ದು, ಪ್ರಧಾನಿಯವರ ಸಮ್ಮುಖದಲ್ಲೇ ಇಂತಹ ಹೇಳಿಕೆಗಳನ್ನು ನೀಡಿದ್ದು ರಾಜಕೀಯ ತಿರುವನ್ನು ಪಡೆದುಕೊಂಡಿದೆ.

ಇತ್ತೀಚೆಗಷ್ಟೇ ಶೆಹಬಾಜ್ ಷರೀಫ್, ಅಮೆರಿಕ ಮತ್ತು ಬ್ರಿಟನ್ ಪ್ರವಾಸವನ್ನು ಮುಗಿಸಿ ಪಾಕಿಸ್ತಾನಕ್ಕೆ ಮರಳಿದ್ದರು. ನಖ್ವಿ ಅವರು ಶೆಹಬಾಜ್ ಷರೀಫ್ ಅವರನ್ನು ಉದ್ದೇಶಿಸಿಯೇ ಈ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಅನೇಕರು ಕೆರಳಿದ್ದಾರೆ. ಅಂದಹಾಗೆ, ನಖ್ವಿ ಅವರು ಪಾಕಿಸ್ತಾನದ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಅವರ ಆಪ್ತ ಸಹಾಯಕರಾಗಿದ್ದಾರೆ. ಇದರೊಟ್ಟಿಗೆ ಪ್ರಸ್ತುತ ಪಾಕಿಸ್ತಾನದ ಗೃಹ ಸಚಿವರಾಗಿದ್ದು, ಪಾಕಿಸ್ತಾನ ಕ್ರಿಕೆಟ್ ಮಂಡಳಿಯ (ಪಿಸಿಬಿ) ಅಧ್ಯಕ್ಷರೂ ಆಗಿದ್ದಾರೆ,(ಏಜೆನ್ಸೀಸ್).