1996ರ ಚಾರ್ಖಿ ದಾದ್ರಿ ವಿಮಾನ ದುರಂತವನ್ನು ನೆನೆದ ಮೋಹನ್ ಭಾಗವತ್
- ಚಾರ್ಖಿ ದಾದ್ರಿ ವಿಮಾನ ದುರಂತ ನೆನೆದ ಮೋಹನ್ ಭಾಗವತ್
- 1996ರ ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದ 349 ಮಂದಿ
- ಆರ್‌ಎಸ್‌ಎಸ್ ಪರಿಹಾರ ಕಾರ್ಯದಲ್ಲಿ ನೆರವಾಗಿತ್ತು ಎಂದ ಭಾಗವತ್
Mohan Bhagwat on 1996 plane crash: 1996ರಲ್ಲಿ ಹರಿಯಾಣದ ಚಾರ್ಖಿ ದಾದ್ರಿ ಬಳಿ ಸಂಭವಿಸಿದ್ದ ಭೀಕರ ವಿಮಾನ ದುರಂತವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಮುಖ್ಯಸ್ಥ ಮೋಹನ್ ಭಾಗವತ್ ನೆನಪಿಸಿಕೊಂಡಿದ್ದಾರೆ. ನ್ಯೂಯಾರ್ಕ್‌ನಲ್ಲಿ ನಡೆದ ‘ಒನ್ ವರ್ಲ್ಡ್ ಒನ್ ಹ್ಯುಮ್ಯಾನಿಟಿ’ ಕಾರ್ಯಕ್ರಮದಲ್ಲಿ ದುರಂತದ ಬಳಿಕ ಆರ್‌ಎಸ್‌ಎಸ್ ಸ್ವಯಂಸೇವಕರ ಪರಿಹಾರ ಕಾರ್ಯದ ಬಗ್ಗೆ ಹೇಳಿದ್ದಾರೆ.
1996ರ ನವೆಂಬರ್ 12ರಂದು ಚಾರ್ಖಿ ದಾದ್ರಿ ಬಳಿ ಸೌದಿ ಅರೇಬಿಯನ್ ಏರ್‌ಲೈನ್ಸ್‌ನ ಬೋಯಿಂಗ್ 747 ಹಾಗೂ ಕಝಾಕಿಸ್ತಾನ್ ಏರ್‌ಲೈನ್ಸ್‌ನ ಇಲ್ಯುಷಿನ್ Il-76 ವಿಮಾನಗಳು ಆಕಾಶದಲ್ಲೇ ಪರಸ್ಪರ ಡಿಕ್ಕಿ ಹೊಡೆದಿದ್ದವು. ಈ ಭೀಕರ ಅಪಘಾತದಲ್ಲಿ ಎರಡೂ ವಿಮಾನಗಳಲ್ಲಿದ್ದ ಒಟ್ಟು 349 ಮಂದಿ ಅಸುನೀಗಿದ್ದರು. ಘಟನೆಯಲ್ಲಿ ಯಾರೊಬ್ಬರೂ ಬದುಕುಳಿದಿರಲಿಲ್ಲ.
ಮುಸ್ಲಿಮರೆಂದು ನಾವು ಯೋಚಿಸಲೇ ಇಲ್ಲ
ಇನ್ನು, ಈ ದುರಂತದ ಬಳಿಕ RSS ಸ್ವಯಂಸೇವಕರು ರಕ್ಷಣಾ ಕಾರ್ಯಗಳಲ್ಲಿ ನೆರವಾಗಿದ್ದರು ಎಂದು ಭಾಗವತ್ ಹೇಳಿದ್ದಾರೆ. ದುರಂತದಲ್ಲಿ ಮೃತಪಟ್ಟವರಲ್ಲಿ ಬಹುತೇಕ ಮಂದಿ ಮುಸ್ಲಿಮರಾಗಿದ್ದರು ಎಂದು ನೆನಪಿಸಿಕೊಂಡ ಅವರು, ‘ಆ ಸಮಯದಲ್ಲಿ ಇವರು ಮುಸ್ಲಿಮರು ಎಂದು ನಾವು ಯೋಚಿಸಲೇ ಇಲ್ಲ’ ಎಂದು ಹೇಳಿದ್ದಾರೆ.
ರಾಜಕೀಯ ಲಾಭಕ್ಕಾಗಿ
ಸೇವೆ
ಮಾಡುತ್ತಿಲ್ಲ
ಆರ್‌ಎಸ್‌ಎಸ್ ಜನ ಸೇವೆಯನ್ನು ರಾಜಕೀಯ ಲಾಭಕ್ಕಾಗಿ ಮಾಡುತ್ತಿಲ್ಲ ಎನ್ನುವುದಕ್ಕೆ ಇಂತಹ ಘಟನೆಗಳೇ ಸಾಕ್ಷಿ ಎಂದು ಭಾಗವತ್ ಹೇಳಿದ್ದಾರೆ. ಅಲ್ಲದೆ, ಸಂಸ್ಥೆ ಇಂತಹ ಸೇವಾ ಕಾರ್ಯಗಳನ್ನು ಪ್ರಚಾರ ಮಾಡಿಕೊಳ್ಳುವುದಿಲ್ಲ. ಏಕೆಂದರೆ ಯಾವುದೇ ಪ್ರತಿಫಲದ ನಿರೀಕ್ಷೆಯಿಲ್ಲದೆ ಸೇವೆ ಮಾಡತ್ತೇವೆ ಎಂದು ಅವರು ತಿಳಿಸಿದ್ದಾರೆ.
ಏನಾಗಿತ್ತು ಚಾರ್ಖಿ ದಾದ್ರಿ ವಿಮಾನ ದುರಂತದಲ್ಲಿ?
1996ರ ನವೆಂಬರ್ 12ರಂದು ಹರಿಯಾಣದ ಚಾರ್ಖಿ ದಾದ್ರಿ ಗ್ರಾಮದ ಬಳಿ ಭೀಕರ ವಿಮಾನ ದುರಂತ ಸಂಭವಿಸಿತ್ತು. ಜೆಡ್ಡಾದಿಂದ ದೆಹಲಿಗೆ ಬರುತ್ತಿದ್ದ ಸೌದಿ ಅರೇಬಿಯನ್ ಏರ್‌ಲೈನ್ಸ್ ವಿಮಾನ ಹಾಗೂ ದೆಹಲಿಯಿಂದ ಕಝಾಕಿಸ್ತಾನದ ಚಿಮ್ಕೆಂಟ್‌ಗೆ ತೆರಳುತ್ತಿದ್ದ ಕಝಾಕಿಸ್ತಾನ್ ಏರ್‌ಲೈನ್ಸ್ ವಿಮಾನ ಗಾಳಿಯಲ್ಲೇ ಮುಖಾಮುಖಿ ಡಿಕ್ಕಿಯಾಗಿದ್ದವು. ಡಿಕ್ಕಿಯ ರಭಸಕ್ಕೆ ಎರಡೂ ವಿಮಾನಗಳಲ್ಲಿದ್ದ 349 ಮಂದಿ ಮೃತಪಟ್ಟಿದ್ದರು.
ಸಂವಹನದ ಗೊಂದಲವೇ ಪ್ರಮುಖ ಕಾರಣ?
ತನಿಖೆಯ ಪ್ರಕಾರ, ದುರಂತಕ್ಕೆ ಸಂವಹನದ ಗೊಂದವೇ ಪ್ರಮುಖ ಕಾರಣವಾಗಿತ್ತು. ಕಝಾಕಿಸ್ತಾನ್ ಏರ್‌ಲೈನ್ಸ್ ಸಿಬ್ಬಂದಿಗೆ ಇಂಗ್ಲಿಷ್‌ನಲ್ಲಿ ಸೀಮಿತ ಪರಿಣತಿ ಇದ್ದುದರಿಂದ ಏರ್ ಟ್ರಾಫಿಕ್ ಕಂಟ್ರೋಲ್ ಸೂಚನೆಗಳನ್ನು ಅರ್ಥಮಾಡಿಕೊಳ್ಳುವಲ್ಲಿ ವ್ಯತ್ಯಾಸವಾಗಿತ್ತು.
ಇನ್ನು, ನಿಗದಿತ ಎತ್ತರದಲ್ಲಿ ಹಾರಬೇಕಿದ್ದ ಕಝಾಕ್ ವಿಮಾನವು ಸೂಚನೆಗಿಂತ ಕೆಳಕ್ಕೆ ಇಳಿಯಿತು. ಇದೇ ವೇಳೆ ಸೌದಿ ವಿಮಾನವೂ ಅದೇ ವಾಯು ಪ್ರದೇಶದಲ್ಲಿತ್ತು. ಪರಿಣಾಮ, ಎರಡೂ ವಿಮಾನಗಳು ಒಂದೇ ಹಾದಿಗೆ ಬಂದು ಗಾಳಿಯಲ್ಲೇ ಮುಖಾಮುಖಿ ಡಿಕ್ಕಿ ಹೊಡೆದವು,(ಏಜೆನ್ಸೀಸ್).