ಮೋದಿ-ಟ್ರಂಪ್ ಮಾತುಕತೆ; ಹಾರ್ಮುಜ್ ಜಲಸಂಧಿ ಮತ್ತು ಜಾಗತಿಕ ತೈಲ ಬಿಕ್ಕಟ್ಟಿನ ಕುರಿತು ಗಂಭೀರ ಚರ್ಚೆ 
ವಿದೇಶ

ಮೋದಿ-ಟ್ರಂಪ್ ಮಾತುಕತೆ; ಹಾರ್ಮುಜ್ ಜಲಸಂಧಿ ಮತ್ತು ಜಾಗತಿಕ ತೈಲ ಬಿಕ್ಕಟ್ಟಿನ ಕುರಿತು ಗಂಭೀರ ಚರ್ಚೆ | Modi-Trump Talks

ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧವು ವಿನಾಶಕಾರಿ ರೂಪ ತಾಳುತ್ತಿರುವ ಬೆನ್ನಲ್ಲೇ, ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Modi-TrumpTalks) ಇಂದು ಮಹತ್ವದ ಮಾತುಕತೆ ನಡೆಸಿದ್ದಾರೆ. 
ಈ ಬಗ್ಗೆ ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಭಾರತದಲ್ಲಿನ ಅಮೆರಿಕ ರಾಯಭಾರಿ ಸೆರ್ಗಿಯೋ ಗೋರ್, ಜಾಗತಿಕ ಇಂಧನ ಭದ್ರತೆಯ ದೃಷ್ಟಿಯಿಂದ ಅತ್ಯಂತ ನಿರ್ಣಾಯಕವಾಗಿರುವ ಹಾರ್ಮುಜ್ ಜಲಸಂಧಿಯನ್ನು ಮುಕ್ತವಾಗಿಡುವ ಕುರಿತು ಉಭಯ ನಾಯಕರು ಸುದೀರ್ಘ ಚರ್ಚೆ ನಡೆಸಿದ್ದಾರೆ ಎಂದು ಅಧಿಕೃತವಾಗಿ ತಿಳಿಸಿದ್ದಾರೆ.

ಅಮೆರಿಕ ರಾಯಭಾರಿಯ ಅಧಿಕೃತ ಹೇಳಿಕೆ

ಮುಂದುವರೆದು ಮಾತನಾಡಿರುವ ಅಮೆರಿಕ ರಾಯಭಾರಿ ಸೆರ್ಗಿಯೋ ಗೋರ್, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗಷ್ಟೇ ಪ್ರಧಾನಿ ಮೋದಿ ಅವರೊಂದಿಗೆ ಮಾತನಾಡಿದ್ದಾರೆ. ಅವರು ಮಧ್ಯಪ್ರಾಚ್ಯದ ಪ್ರಸ್ತುತ ಪರಿಸ್ಥಿತಿ ಮತ್ತು ಹಾರ್ಮುಜ್ ಜಲಸಂಧಿಯನ್ನು ಮುಕ್ತವಾಗಿಡುವ ಮಹತ್ವದ ಬಗ್ಗೆ ಚರ್ಚಿಸಿದ್ದಾರೆ ಎಂದು ಹೇಳಿದ್ದಾರೆ.
ಜಾಗತಿಕ ತೈಲ ಪೂರೈಕೆಯ ಜೀವನಾಡಿ: ಹಾರ್ಮುಜ್ ಆತಂಕ
ವಿಶ್ವದ ಒಟ್ಟು ಕಚ್ಚಾ ತೈಲ ಸಾಗಣೆಯ ಸುಮಾರು ಶೇ.25 ರಷ್ಟು ಭಾಗವು ಹಾರ್ಮುಜ್ ಜಲಸಂಧಿಯ ಮೂಲಕವೇ ಸಾಗುತ್ತದೆ. ಪ್ರಸ್ತುತ ಯುದ್ಧದಿಂದಾಗಿ ಈ ಮಾರ್ಗವು ಅಸ್ತವ್ಯಸ್ತಗೊಂಡಿದ್ದು, ಭಾರತ ಸೇರಿದಂತೆ ಅನೇಕ ರಾಷ್ಟ್ರಗಳ ಆರ್ಥಿಕತೆಯ ಮೇಲೆ ಭಾರಿ ಹೊಡೆತ ಬಿದ್ದಿದೆ.
ಮೋದಿ ಕಳವಳ: ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಕೆಯಾಗದಂತೆ ತಡೆಯಲು ಈ ಜಲಸಂಧಿ ಮುಕ್ತವಾಗಿರುವುದು ಅತ್ಯಗತ್ಯ ಎಂದು ಮೋದಿ ಪ್ರತಿಪಾದಿಸಿದ್ದಾರೆ.
ಟ್ರಂಪ್ ಭರವಸೆ: ಹಾರ್ಮುಜ್ ಜಲಸಂಧಿಯನ್ನು ಶೀಘ್ರದಲ್ಲೇ ಮುಕ್ತಗೊಳಿಸಲಾಗುವುದು ಮತ್ತು ಇದನ್ನು ಇರಾನ್‌ನೊಂದಿಗೆ ಜಂಟಿಯಾಗಿ ನಿರ್ವಹಿಸುವ ಸಾಧ್ಯತೆಯಿದೆ ಎಂದು ಟ್ರಂಪ್ ಮೋದಿಯವರಿಗೆ ವಿವರಿಸಿದ್ದಾರೆ ಎನ್ನಲಾಗಿದೆ.

ಭಾರತದ ಮಧ್ಯಸ್ಥಿಕೆ ಮತ್ತು ರಾಜತಾಂತ್ರಿಕ ಪಾತ್ರ

ಇರಾನ್ ಮತ್ತು ಅಮೆರಿಕ ಎರಡರೊಂದಿಗೂ ಉತ್ತಮ ಸಂಬಂಧ ಹೊಂದಿರುವ ಏಕೈಕ ಪ್ರಮುಖ ರಾಷ್ಟ್ರ ಭಾರತವಾಗಿದ್ದು. ಹೀಗಾಗಿ, ಈ ಬಿಕ್ಕಟ್ಟನ್ನು ಶಮನಗೊಳಿಸಲು ಪ್ರಧಾನಿ ಮೋದಿ ಅವರ ಮಧ್ಯಸ್ಥಿಕೆ ಅತ್ಯಂತ ಮಹತ್ವದ್ದಾಗಿದೆ. ಅಲಿ ಲಾರಿಜಾನಿ ಹತ್ಯೆ ಮತ್ತು ಇರಾನ್‌ನಲ್ಲಿ ಹೊಸ ಭದ್ರತಾ ಮುಖ್ಯಸ್ಥರ ನೇಮಕದ ನಂತರ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. ಇಂತಹ ಸಂದರ್ಭದಲ್ಲಿ ಟ್ರಂಪ್ ಅವರು ಮೋದಿಯವರ ಜೊತೆ ಮಾತನಾಡಿರುವುದು ಜಾಗತಿಕ ಶಾಂತಿ ಸ್ಥಾಪನೆಯಲ್ಲಿ ಭಾರತದ ಪ್ರಭಾವವನ್ನು ಎತ್ತಿ ತೋರಿಸುತ್ತದೆ.

ಯುದ್ಧದ ಅಂತ್ಯಕ್ಕೆ ಭಾರತದ ಒತ್ತಾಯ

ಮಾತುಕತೆಯ ವೇಳೆ ಪ್ರಧಾನಿ ಮೋದಿ ಅವರು ಈ ಯುದ್ಧವನ್ನು ಶೀಘ್ರವೇ ಕೊನೆಗಾಣಿಸಿ ರಾಜತಾಂತ್ರಿಕ ಮಾತುಕತೆಗಳ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಸಲಹೆ ನೀಡಿದ್ದಾರೆ. ಏಪ್ರಿಲ್ 9 ರಂದು ಯುದ್ಧವನ್ನು ಅಂತ್ಯಗೊಳಿಸುವ ಅಮೆರಿಕದ ಉದ್ದೇಶಕ್ಕೆ ಭಾರತವು ತನ್ನ ಬೆಂಬಲ ಸೂಚಿಸಿದೆ ಎನ್ನಲಾಗಿದೆ. ಆದರೆ, ಇರಾನ್‌ನಲ್ಲಿ ಈಗ ಸೇನಾ ಕಮಾಂಡರ್ ಝೋಲ್ಘಾದ್ರ್ ಅವರ ನೇಮಕವಾಗಿರುವುದು ಸಂಧಾನಕ್ಕೆ ಅಡ್ಡಿಯಾಗಬಹುದೇ ಎಂಬ ಆತಂಕವೂ ಈ ಚರ್ಚೆಯಲ್ಲಿ ವ್ಯಕ್ತವಾಗಿದೆ,(ಏಜೆನ್ಸೀಸ್).