ಜಿ7 ಶೃಂಗಸಭೆಯಲ್ಲಿ ಮುನಿಸು ಮರೆತು ಕೈಕುಲುಕಿದ ಮೋದಿ-ಟ್ರಂಪ್: 16 ತಿಂಗಳ ಬಳಿಕ ಮಹತ್ವದ ಮುಖಾಮುಖಿ ಭೇಟಿ! 
ವಿದೇಶ

ಜಿ7 ಶೃಂಗಸಭೆಯಲ್ಲಿ ಮುನಿಸು ಮರೆತು ಕೈಕುಲುಕಿದ ಮೋದಿ-ಟ್ರಂಪ್: 16 ತಿಂಗಳ ಬಳಿಕ ಮಹತ್ವದ ಮುಖಾಮುಖಿ ಭೇಟಿ! Modi-Trump Meet

ಪ್ಯಾರಿಸ್​: ಜಾಗತಿಕ ರಾಜಕಾರಣದಲ್ಲಿ ಭಾರಿ ಕುತೂಹಲ ಮೂಡಿಸಿದ್ದ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Modi-Trump Meet) ಅವರ ಬಹುನಿರೀಕ್ಷಿತ ಭೇಟಿ ಕೊನೆಗೂ ಸಾಕಾರಗೊಂಡಿದೆ. ಫ್ರಾನ್ಸ್‌ನ ಎವಿಯನ್ ನಗರದಲ್ಲಿ ಆಯೋಜನೆಯಾಗಿರುವ 52ನೇ ಜಿ7 ಶೃಂಗಸಭೆಯ ಸಂದರ್ಭದಲ್ಲಿ ಮಂಗಳವಾರ ಇಬ್ಬರೂ ನಾಯಕರು ಪರಸ್ಪರ ಹಸ್ತಲಾಘವ ಮಾಡಿ, ಆಪ್ತವಾಗಿ ಮಾತನಾಡಿದ್ದಾರೆ. ಕಳೆದ 16 ತಿಂಗಳುಗಳಲ್ಲಿ ಉಭಯ ನಾಯಕರ ನಡುವೆ ನಡೆದ ಮೊದಲ ಮುಖಾಮುಖಿ ಭೇಟಿ ಇದಾಗಿದೆ.
ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರಾನ್ ಆತಿಥ್ಯದಲ್ಲಿ ವಿಶ್ವದ ಪ್ರಮುಖ ನಾಯಕರು ಒಟ್ಟುಗೂಡಿದ್ದ ಔಟ್‌ರೀಚ್ ಅಧಿವೇಶನದಲ್ಲಿ ಈ ಮಹತ್ವದ ವಿದ್ಯಮಾನ ಜರುಗಿದೆ. ಜಿ7 ಶೃಂಗಸಭೆಯ ಮುಖ್ಯ ವೇದಿಕೆಯಲ್ಲಿ ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಟ್ರಂಪ್ ಪಕ್ಕದ ಆಸನಗಳಲ್ಲೇ ಕುಳಿತು ಜಾಗತಿಕ ವಿದ್ಯಮಾನಗಳ ಕುರಿತು ಗಂಭೀರ ಚರ್ಚೆ ನಡೆಸುತ್ತಿರುವುದು ಕಂಡುಬಂದಿದೆ.
16 ತಿಂಗಳ ಬಳಿಕ ಮುಖಾಮುಖಿ; ಮುನಿಸು ಮರೆತು ಹಸ್ತಲಾಘವ!
ಡೊನಾಲ್ಡ್ ಟ್ರಂಪ್ ಅವರು ಎರಡನೇ ಬಾರಿಗೆ ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ತಕ್ಷಣ, ಅಂದರೆ 2025ರ ಫೆಬ್ರವರಿಯಲ್ಲಿ ಪ್ರಧಾನಿ ಮೋದಿ ವಾಷಿಂಗ್ಟನ್‌ಗೆ ಭೇಟಿ ನೀಡಿದ್ದರು. ಅದಾದ ಬಳಿಕ ಉಭಯ ನಾಯಕರು ಎಲ್ಲಿಯೂ ಖುದ್ದಾಗಿ ಭೇಟಿಯಾಗಿರಲಿಲ್ಲ. ಇತ್ತೀಚಿನ ತಿಂಗಳುಗಳಲ್ಲಿ ಭಾರತದ ಆಪರೇಷನ್ ಸಿಂಧೂರ ಮತ್ತು ಭಾರತೀಯ ಉತ್ಪನ್ನಗಳ ಮೇಲೆ ಅಮೆರಿಕ ವಿಧಿಸಿದ್ದ ಭಾರಿ ಆಮದು ಸುಂಕದ ನಿರ್ಧಾರಗಳಿಂದಾಗಿ ಉಭಯ ದೇಶಗಳ ರಾಜತಾಂತ್ರಿಕ ಸಂಬಂಧದಲ್ಲಿ ಒಂದಿಷ್ಟು ತಂಪು ವಾತಾವರಣ ನಿರ್ಮಾಣವಾಗಿತ್ತು. ಈ ಹಿನ್ನೆಲೆಯಲ್ಲಿ ಎವಿಯನ್ ನಗರದಲ್ಲಿ ನಡೆದ ಇವರ ಇಂದಿನ ಆತ್ಮೀಯ ಭೇಟಿ ಮತ್ತು ಮುಗುಳ್ನಗೆಯ ಹಸ್ತಲಾಘವವು ಉಭಯ ದೇಶಗಳ ಸ್ನೇಹದ ಮರುಚಿಗುರಿಕೆಗೆ ಮುನ್ನುಡಿ ಬರೆದಿದೆ.

ಉಭಯ ದೇಶಗಳ ನಡುವೆ ದ್ವಿಪಕ್ಷೀಯ ಮಾತುಕತೆ

ಬುಧವಾರ (ಜೂನ್ 17) ಸಂಜೆ ಭಾರತೀಯ ಕಾಲಮಾನ 6.15ಕ್ಕೆ ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಟ್ರಂಪ್ ಅಧಿಕೃತವಾಗಿ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಶ್ವೇತಭವನದ ಉನ್ನತ ಮೂಲಗಳ ಪ್ರಕಾರ, ಈ ಸಭೆಯಲ್ಲಿ ಉಭಯ ದೇಶಗಳ ನಡುವಿನ ವ್ಯಾಪಾರ ಒಪ್ಪಂದದ ಕುರಿತು ಪ್ರಮುಖವಾಗಿ ಚರ್ಚೆಯಾಗಲಿದೆ.
ಈ ಹಿಂದೆ ಫೆಬ್ರವರಿ 2 ರಂದು ಅಧ್ಯಕ್ಷ ಟ್ರಂಪ್ ಭಾರತದ ಮೇಲಿನ ಸುಂಕವನ್ನು ಶೇ. 25 ರಿಂದ ಶೇ.18 ಕ್ಕೆ ಇಳಿಸುವುದಾಗಿ ಪ್ರಕಟಿಸಿದ್ದರು. ಇದೇ ವೇಳೆ, ಭಾರತವು ಅಮೆರಿಕದಿಂದ ಸುಮಾರು 500 ಬಿಲಿಯನ್ ಡಾಲರ್ ಮೌಲ್ಯದ ಇಂಧನ, ಆಧುನಿಕ ತಂತ್ರಜ್ಞಾನ, ಕೃಷಿ ಉತ್ಪನ್ನಗಳು ಮತ್ತು ಕಲ್ಲಿದ್ದಲನ್ನು ಖರೀದಿಸಲಿದೆ ಎಂದು ಟ್ರಂಪ್ ಘೋಷಿಸಿದ್ದರು. ಇಂದಿನ ಸಭೆಯಲ್ಲಿ ಈ ವ್ಯಾಪಾರ ಒಪ್ಪಂದಗಳಿಗೆ ಅಂತಿಮ ರೂಪ ನೀಡುವ ನಿಟ್ಟಿನಲ್ಲಿ ಉನ್ನತ ಮಟ್ಟದ ತಾಂತ್ರಿಕ ಚರ್ಚೆಗಳು ನಡೆಯಲಿವೆ.

ಜಾಗತಿಕ ನಾಯಕರ ‘ಫ್ಯಾಮಿಲಿ ಫೋಟೋ’ದಲ್ಲಿ ಮುಂಚೂಣಿ

ಶೃಂಗಸಭೆಯ ಸಾಂಪ್ರದಾಯಿಕ ಸಮೂಹ ಚಿತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರಾನ್ ಮುಂಚೂಣಿಯಲ್ಲಿದ್ದರು.
ಇವರೊಂದಿಗೆ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ, ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್, ಜರ್ಮನಿ ಚಾನ್ಸೆಲರ್ ಫ್ರೀಡ್ರಿಕ್ ಮೆರ್ಜ್, ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ, ಜಪಾನ್ ಪ್ರಧಾನಿ ಸನಾಯ್ ತಕಾಚಿ, ಬ್ರೆಜಿಲ್ ಅಧ್ಯಕ್ಷ ಲುಲಾ ಡಾ ಸಿಲ್ವಾ, ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಎಲ್-ಸಿಸಿ ಹಾಗೂ ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷ ಆಂಟೋನಿಯೊ ಕೋಸ್ಟಾ ಒಂದೇ ಫ್ರೇಮ್‌ನಲ್ಲಿ ಕಾಣಿಸಿಕೊಂಡರು. ಸಮೂಹ ಚಿತ್ರಕ್ಕೂ ಮುನ್ನ ಫ್ರೆಂಚ್ ಅಧ್ಯಕ್ಷ ಮ್ಯಾಕ್ರಾನ್ ಅವರು ಪ್ರಧಾನಿ ಮೋದಿಯವರನ್ನು ಅತ್ಯಂತ ಆತ್ಮೀಯವಾಗಿ ಬರಮಾಡಿಕೊಂಡಿದ್ದು ಭಾರತದ ಜಾಗತಿಕ ಗೌರವಕ್ಕೆ ಸಾಕ್ಷಿಯಾಯಿತು,(ಏಜೆನ್ಸೀಸ್​).