ಕ್ಷಿಪಣಿಗಳು ಖಾಲಿ, ಬಾಂಬ್‌ಗಳೇ ಗತಿ! ಅಮೆರಿಕ ತನ್ನ ಯುದ್ಧ ತಂತ್ರವನ್ನೇ ಬದಲಿಸಿದ್ದೇಕೆ..? ದೊಡಣ್ಣನ ಬೊಕ್ಕಸಕ್ಕೆ ಕನ್ನ ಹಾಕುತ್ತಿದೆಯೇ ಇರಾನ್ ಯುದ್ಧ..? 
ವಿದೇಶ

ಕ್ಷಿಪಣಿಗಳು ಖಾಲಿ, ಬಾಂಬ್‌ಗಳೇ ಗತಿ! ಅಮೆರಿಕ ತನ್ನ ಯುದ್ಧ ತಂತ್ರವನ್ನೇ ಬದಲಿಸಿದ್ದೇಕೆ..? ದೊಡಣ್ಣನ ಬೊಕ್ಕಸಕ್ಕೆ ಕನ್ನ ಹಾಕುತ್ತಿದೆಯೇ ಇರಾನ್ ಯುದ್ಧ..? Iran War Cost

ವಾಷಿಂಗ್ಟನ್: ಇರಾನ್ ಮತ್ತು ಅಮೆರಿಕ ನಡುವಿನ ಯುದ್ಧವು ಕೇವಲ ಜೀವಬಲಿ ಮಾತ್ರವಲ್ಲದೆ, ಜಾಗತಿಕ ಆರ್ಥಿಕತೆಯ(Iran War Cost) ಮೇಲೆ ಭೀಕರ ಹೊರೆ ಹೇರುತ್ತಿದೆ. ವಾಷಿಂಗ್ಟನ್ ಪೋಸ್ಟ್ ಬಿಡುಗಡೆ ಮಾಡಿರುವ ಹೊಸ ವರದಿಯ ಪ್ರಕಾರ, ಯುದ್ಧ ಆರಂಭವಾದ ಕೇವಲ ಮೊದಲ 48 ಗಂಟೆಗಳಲ್ಲಿ ಡೊನಾಲ್ಡ್ ಟ್ರಂಪ್ ಆಡಳಿತವು ಬರೋಬ್ಬರಿ 5.6 ಬಿಲಿಯನ್ ಡಾಲರ್ (ಸುಮಾರು 51,400 ಕೋಟಿ ರೂಪಾಯಿ) ಮೌಲ್ಯದ ಶಸ್ತ್ರಾಸ್ತ್ರಗಳನ್ನು ಬಳಸಿದೆ.
ಇದು ಕೇವಲ ಕ್ಷಿಪಣಿ ಮತ್ತು ಬಾಂಬ್‌ಗಳ ಖರ್ಚಾಗಿದ್ದು, ಸೈನಿಕರ ನಿಯೋಜನೆ, ವಿಮಾನಗಳ ಇಂಧನ ಮತ್ತು ನೌಕಾಪಡೆಯ ನಿರ್ವಹಣಾ ವೆಚ್ಚವನ್ನು ಸೇರಿಸಿದರೆ ಈ ಮೊತ್ತ ಊಹೆಗೂ ನಿಲುಕದಷ್ಟು ಹೆಚ್ಚಾಗಲಿದೆ.

ಏನೆಲ್ಲಾ ನಷ್ಟ..? ಪೆಂಟಗನ್ ಲೆಕ್ಕಾಚಾರ ಏನು..?

ಫೆಬ್ರವರಿ 28 ರಿಂದ ಆರಂಭವಾದ ಈ ಸಂಘರ್ಷದಲ್ಲಿ ಅಮೆರಿಕದ ಸೆಂಟ್ರಲ್ ಕಮಾಂಡ್ ನೀಡಿರುವ ಮಾಹಿತಿಯಂತೆ ಇರಾನ್‌ನ 5,000ಕ್ಕೂ ಹೆಚ್ಚು ಗುರಿಗಳ ಮೇಲೆ ದಾಳಿ ಮಾಡಲಾಗಿದೆ. ಅಲ್ಲದೆ, ಇದಕ್ಕಾಗಿ 2,000ಕ್ಕೂ ಹೆಚ್ಚು ಅತ್ಯಾಧುನಿಕ ಯುದ್ಧ ಸಾಮಗ್ರಿಗಳನ್ನು ಬಳಸಲಾಗಿದೆ.
ಇದರಲ್ಲಿ ಅತಿ ದುಬಾರಿಯಾದ ಟೊಮಾಹಾಕ್ ಕ್ರೂಸ್ ಕ್ಷಿಪಣಿಗಳು ಮತ್ತು ಸುಧಾರಿತ ವಾಯು ರಕ್ಷಣಾ ಇಂಟರ್ಸೆಪ್ಟರ್‌ಗಳು ಸೇರಿವೆ.
ಈ ಬೃಹತ್ ವೆಚ್ಚವು ಅಮೆರಿಕದ ಸಂಸತ್ತಿನಲ್ಲಿ ಆತಂಕ ಮೂಡಿಸಿದೆ. ಇಷ್ಟು ವೇಗವಾಗಿ ಶಸ್ತ್ರಾಸ್ತ್ರಗಳು ಖಾಲಿಯಾದರೆ ಚೀನಾ ಅಥವಾ ಇತರ ರಂಗಗಳಲ್ಲಿ ಅಮೆರಿಕದ ಸನ್ನದ್ಧತೆ ಕುಸಿಯಬಹುದು ಎಂದು ಕಾನೂನು ತಜ್ಞರು ಎಚ್ಚರಿಸಿದ್ದಾರೆ.

ತಂತ್ರ ಬದಲಿಸಿದ ಅಮೆರಿಕ: ದುಬಾರಿ ಕ್ಷಿಪಣಿ ಬಿಟ್ಟು ಬಾಂಬ್ ಮೊರೆ!

ಶಸ್ತ್ರಾಸ್ತ್ರಗಳ ಕೊರತೆ ಮತ್ತು ಹಣದ ವ್ಯಯವನ್ನು ತಡೆಯಲು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಹೊಸ ಪ್ಲಾನ್ ಘೋಷಿಸಿದ್ದಾರೆ.
ಇನ್ನು ಮುಂದೆ ಲಕ್ಷಾಂತರ ಡಾಲರ್ ಬೆಲೆಯ ನಿಖರ ಕ್ಷಿಪಣಿಗಳ ಬದಲಿಗೆ, ಕಡಿಮೆ ಬೆಲೆಯ ಲೇಸರ್ ಮಾರ್ಗದರ್ಶಿ ಬಾಂಬ್‌ಗಳನ್ನು ಬಳಸಲು ನಿರ್ಧರಿಸಲಾಗಿದೆ.
ಇರಾನ್‌ನ ವಾಯುಪ್ರದೇಶದ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಿದ ನಂತರ ಈ ಬದಲಾವಣೆ ಮಾಡಲಾಗುತ್ತಿದೆ.

ವಿಫಲವಾಯಿತೇ ಟ್ರಂಪ್ ಮಾಸ್ಟರ್ ಪ್ಲಾನ್..?

ಅಯತೊಲ್ಲಾ ಅಲಿ ಖಮೇನಿ ಅವರ ಹತ್ಯೆಯ ನಂತರ ಇರಾನ್ ಆಡಳಿತವು ಕುಸಿಯುತ್ತದೆ ಅಥವಾ ವೆನೆಜುವೆಲಾದಂತೆ ಅಮೆರಿಕದ ಜೊತೆ ಸಹಕರಿಸುತ್ತದೆ ಎಂಬ ಟ್ರಂಪ್ ಲೆಕ್ಕಾಚಾರ ಸದ್ಯಕ್ಕೆ ಉಲ್ಟಾ ಹೊಡೆದಿದೆ.
ಇರಾನ್ ಈಗ ಖಮೇನಿಯ ಪುತ್ರ ಮೊಜ್ತಬಾ ಖಮೇನಿಯನ್ನು ನೂತನ ಸರ್ವೋಚ್ಚ ನಾಯಕನನ್ನಾಗಿ ನೇಮಿಸಿ ಸೇಡಿನ ಶಪಥ ಮಾಡಿದೆ.
ಇರಾನ್‌ನ ಸೈನ್ಯವು ಹಾರ್ಮುಜ್ ಜಲಸಂಧಿಯನ್ನು ಬಂದ್ ಮಾಡಿದ್ದು, ಜಗತ್ತಿನ ಶೇ.20 ರಷ್ಟು ತೈಲ ಪೂರೈಕೆಗೆ ಕುತ್ತು ಬಂದಿದೆ.

ಬೇರೆ ರಾಷ್ಟ್ರಗಳಿಂದ ಶಸ್ತ್ರಾಸ್ತ್ರ ರವಾನೆ

ಇರಾನ್‌ನ ಪ್ರತಿರೋಧ ಹೆಚ್ಚಾಗುತ್ತಿದ್ದಂತೆ, ಅಮೆರಿಕವು ದಕ್ಷಿಣ ಕೊರಿಯಾದಲ್ಲಿಟ್ಟಿದ್ದ ತನ್ನ ಅತ್ಯಾಧುನಿಕ ಥಾಡ್ ಕ್ಷಿಪಣಿ ನಿರೋಧಕ ವ್ಯವಸ್ಥೆ ಮತ್ತು ಪೇಟ್ರಿಯಾಟ್ ಇಂಟರ್ಸೆಪ್ಟರ್‌ಗಳನ್ನು ಮಧ್ಯಪ್ರಾಚ್ಯಕ್ಕೆ ಸ್ಥಳಾಂತರಿಸುತ್ತಿದೆ. ಇದು ಇಂಡೋ-ಪೆಸಿಫಿಕ್ ವಲಯದಲ್ಲಿ ಅಮೆರಿಕದ ಭದ್ರತೆಯನ್ನು ದುರ್ಬಲಗೊಳಿಸಬಹುದು ಎಂಬ ಭಯ ಮೂಡಿಸಿದೆ.

ಹಣಕಾಸಿನ ಬಿಕ್ಕಟ್ಟು ಮತ್ತು ರಾಜಕೀಯ ಸಮರ

ಈ ವಾರ ಟ್ರಂಪ್ ಆಡಳಿತವು ಯುದ್ಧಕ್ಕಾಗಿ ಹತ್ತಾರು ಬಿಲಿಯನ್ ಡಾಲರ್‌ಗಳ ಹೆಚ್ಚುವರಿ ಬಜೆಟ್ ಅನ್ನು ಸಂಸತ್ತಿನಲ್ಲಿ ಮಂಡಿಸಲಿದೆ. ಆದರೆ, ಡೆಮೋಕ್ರಾಟ್ ಪಕ್ಷದ ಸಂಸದರು ಇದನ್ನು ವಿರೋಧಿಸುವ ಸಾಧ್ಯತೆಯಿದೆ. ಯುದ್ಧವು ಎಷ್ಟು ದಿನ ನಡೆಯಲಿದೆ ಎಂಬ ಬಗ್ಗೆ ಸ್ವತಃ ಟ್ರಂಪ್ ಅವರಲ್ಲೇ ಗೊಂದಲವಿದ್ದು, ಒಮ್ಮೆ ಒಂದು ತಿಂಗಳು ಎನ್ನುತ್ತಾರೆ, ಮತ್ತೊಮ್ಮೆ ಎಲ್ಲವೂ ಮುಗಿಯುತ್ತಾ ಬಂದಿದೆ ಎನ್ನುತ್ತಿದ್ದಾರೆ,(ಏಜೆನ್ಸೀಸ್).