Miraculous  
ವಿದೇಶ

ಪವಾಡ ಸದೃಶ ಚೇತರಿಕೆ: ಗೆಳೆಯರ ಪ್ರೀತಿಯ ಸಂದೇಶಕ್ಕೆ 55 ದಿನಗಳ ಕೋಮಾದಿಂದ ಎಚ್ಚರಗೊಂಡ 8 ವರ್ಷದ ಬಾಲಕ! | Miraculous

ಬೀಜಿಂಗ್/ಹುನಾನ್: "ಪ್ರೀತಿ ಮತ್ತು ನಂಬಿಕೆ ಸಾವು ಗೆಲ್ಲಬಲ್ಲದು" ಎಂಬುದಕ್ಕೆ ಚೀನಾದ ಹುನಾನ್ ಪ್ರಾಂತ್ಯದ ಯುವೆಯಾಂಗ್ ನಗರದಲ್ಲಿ ನಡೆದ ಘಟನೆಯೇ ಸಾಕ್ಷಿ. 
ಹೌದು, ಭೀಕರ ಅಪಘಾತದಲ್ಲಿ ಮೆದುಳು ಮತ್ತು ಶ್ವಾಸಕೋಶಕ್ಕೆ ತೀವ್ರ ಗಾಯವಾಗಿ, ಬದುಕುವ ಭರವಸೆಯೇ ಇಲ್ಲದಿದ್ದ 8 ವರ್ಷದ ಬಾಲಕ ಲಿಯು ಚುಕ್ಸಿ (Liu Chuxi), ಸತತ 55 ದಿನಗಳ ಕೋಮಾದ ನಂತರ ಪವಾಡ ಸದೃಶವಾಗಿ ಎಚ್ಚರಗೊಂಡಿದ್ದಾನೆ. ಬಾಲಕನ ಈ ಪುನರ್ಜನ್ಮಕ್ಕೆ ವೈದ್ಯಕೀಯ ಚಿಕಿತ್ಸೆಯ ಜೊತೆಗೆ ಆತನ ಸಹಪಾಠಿಗಳ ಮತ್ತು ಶಿಕ್ಷಕರ ಪ್ರೀತಿಯ ಧ್ವನಿಗಳೇ(ಸಂದೇಶ) ಕಾರಣ ಎನ್ನಲಾಗುತ್ತಿದೆ.

ವಿಧಿಯಾಟ ಮತ್ತು ವೈದ್ಯರ ಆತಂಕ

ನವೆಂಬರ್ 2025 ರಲ್ಲಿ ನಡೆದ ಭೀಕರ ಕಾರು ಅಪಘಾತದಲ್ಲಿ ಮೂರನೇ ತರಗತಿಯ ವಿದ್ಯಾರ್ಥಿ ಲಿಯು ಚುಕ್ಸಿಗೆ ತೀವ್ರ ಪೆಟ್ಟು ಬಿದ್ದಿತ್ತು. ಆತನ ಸ್ಥಿತಿ ಎಷ್ಟೊಂದು ಗಂಭೀರವಾಗಿತ್ತೆಂದರೆ, ವೈದ್ಯರು ಆತ ಮತ್ತೆ ಪ್ರಜ್ಞೆ ಪಡೆಯುವ ಸಾಧ್ಯತೆ ತೀರಾ ಕಡಿಮೆ ಎಂದು ಕೈಚೆಲ್ಲಿದ್ದರು. ಆದರೆ, ಆತನ ತಾಯಿ ಮಾತ್ರ ಮಗನ ಮೇಲಿನ ಭರವಸೆಯನ್ನು ಬಿಡಲಿಲ್ಲ. ಮಗನನ್ನು ಹಲವು ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದರು.

ಚಿಕಿತ್ಸೆಯಾಗಿ ಬದಲಾದ ಶಾಲೆಯ ದಿನಚರಿ!

ವೈದ್ಯರೊಬ್ಬರ ಸಲಹೆಯಂತೆ, ಲಿಯು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾಗ ಆತನ ತಾಯಿ ಒಂದು ಹೊಸ ಪ್ರಯತ್ನ ಮಾಡಿದರು. ಲಿಯುಗೆ ಪರಿಚಿತವಿರುವ ಶಾಲೆಯ ಘಂಟೆಯ ಶಬ್ದ, ಪ್ರಾರ್ಥನಾ ಗೀತೆಗಳು ಮತ್ತು ಸಹಪಾಠಿಗಳ ಮಾತುಗಳನ್ನು ರೆಕಾರ್ಡ್ ಮಾಡಿ ಆತನ ಹಾಸಿಗೆಯ ಪಕ್ಕದಲ್ಲಿ ಪ್ಲೇ ಮಾಡುತ್ತಿದ್ದರು. ಎಮೋಷನಲ್ ಕನೆಕ್ಷನ್ ಮೂಲಕ ಮೆದುಳನ್ನು ಸಕ್ರಿಯಗೊಳಿಸುವುದು ಇದರ ಉದ್ದೇಶವಾಗಿತ್ತು.

'ಬೇಗ ಎದ್ದು ಬಾ ಗೆಳೆಯ': ಸಹಪಾಠಿಗಳ ಕರೆಯೇ ಸಂಜೀವಿನಿ

ಲಿಯು ಕೋಮಾದಲ್ಲಿದ್ದಾನೆ ಎಂದು ತಿಳಿದ ಆತನ ಶಾಲೆಯ ಗೆಳೆಯರು ಮತ್ತು ಶಿಕ್ಷಕರು ಭಾವನಾತ್ಮಕ ವಿಡಿಯೋ ಸಂದೇಶಗಳನ್ನು ಕಳುಹಿಸಿದ್ದರು. "ಚುಕ್ಸಿ, ಬೇಗ ಎದ್ದು ಬಾ, ನಾವು ಜೊತೆಯಾಗಿ ಫುಟ್ಬಾಲ್ ಆಡೋಣ," ಎಂದು ಒಬ್ಬ ಗೆಳೆಯ ಕರೆದರೆ, "ನಾವು ನಿನಗಾಗಿ ಕಾಯುತ್ತಿದ್ದೇವೆ, ಪರೀಕ್ಷೆಗಳು ಹತ್ತಿರ ಬರುತ್ತಿವೆ, ನೀನು ಬಂದು ನಮ್ಮ ಜೊತೆ ಓದಬೇಕು," ಎಂದು ಮತ್ತೊಬ್ಬ ಹರಸಿದ್ದ. ಈ ಧ್ವನಿಗಳನ್ನು ಕೇಳುತ್ತಾ ಸುಮಾರು 45 ದಿನಗಳ ನಂತರ ಲಿಯು ದೇಹದಲ್ಲಿ ಸಣ್ಣ ಚಲನೆ ಕಾಣಿಸಿಕೊಂಡಿತು. ಆತ ತನ್ನ ರೆಪ್ಪೆಗಳನ್ನು ಅಲ್ಲಾಡಿಸಲು ಮತ್ತು ತಾಯಿಯ ಸ್ಪರ್ಶಕ್ಕೆ ಸ್ಪಂದಿಸಲು ಶುರು ಮಾಡಿದ.

55ನೇ ದಿನದ ಮಿರಾಕಲ್!

ಸತತ ಪ್ರಯತ್ನಗಳ ಫಲವಾಗಿ 55ನೇ ದಿನ ಲಿಯು ಸಂಪೂರ್ಣ ಪ್ರಜ್ಞೆ ಪಡೆದಿದ್ದಾನೆ. ಆತ ತನ್ನ ಎಡಗೈಯನ್ನು ಅಲ್ಲಾಡಿಸಿ ತಾಯಿಯನ್ನು ಗುರುತಿಸಿದ ಕ್ಷಣ ಆಸ್ಪತ್ರೆಯಲ್ಲಿದ್ದ ಎಲ್ಲರ ಕಣ್ಣುಗಳನ್ನು ಒದ್ದೆ ಮಾಡಿತು. "ಮೋಡಗಳ ಹಿಂದಿದ್ದ ಸೂರ್ಯನನ್ನು ನಾನು ನೋಡಿದಂತಾಯಿತು, ನಿಜಕ್ಕೂ ಪವಾಡ ಸಂಭವಿಸಿದೆ," ಎಂದು ಲಿಯು ತಾಯಿ ಕಣ್ಣೀರಿಟ್ಟಿದ್ದಾರೆ.

ಹೋಮ್‌ವರ್ಕ್‌ನಿಂದ ಮುಕ್ತಿ!

ಚೇತರಿಸಿಕೊಂಡ ಲಿಯು ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆತನನ್ನು ಭೇಟಿ ಮಾಡಿದ ಶಿಕ್ಷಕರು ತಮಾಷೆಯಾಗಿ, "ನಿನಗೆ ಹೋಮ್‌ವರ್ಕ್‌ನಿಂದ ವಿನಾಯಿತಿ ನೀಡಲಾಗಿದೆ" ಎಂದು ಹೇಳಿದಾಗ, ಆತ ಮುಗುಳ್ನಕ್ಕು ಪ್ರತಿಕ್ರಿಯಿಸಿದ್ದಾನೆ. ಮೆದುಳಿನ ಗಾಯದಿಂದ ಚೇತರಿಸಿಕೊಳ್ಳುವುದು ಕಷ್ಟ ಎಂಬ ವೈದ್ಯಕೀಯ ವಾದದ ನಡುವೆ, ಲಿಯು ಕಥೆಯು ವಿಶ್ವದಾದ್ಯಂತ ಭರವಸೆಯ ಕಿರಣವಾಗಿ ಹರಡುತ್ತಿದೆ. ಸಮಾಜದ ಕರುಣೆ, ಸ್ನೇಹಿತರ ಪ್ರೀತಿ ಮತ್ತು ತಾಯಿಯ ದೃಢ ನಿರ್ಧಾರ ಒಬ್ಬ ವ್ಯಕ್ತಿಯನ್ನು ಸಾವಿನ ದವಡೆಯಿಂದ ಹೇಗೆ ತರಬಹುದು ಎಂಬುದಕ್ಕೆ ಈ ಘಟನೆಯೇ ಜ್ವಲಂತ ಉದಾಹರಣೆಯಾಗಿದೆ,(ಏಜೆನ್ಸೀಸ್​).