Solar Eclipse ಸಾಂದರ್ಭಿಕ ಚಿತ್ರ
ಮ್ಯಾಡ್ರಿಡ್: ಸ್ಪೇನ್ ದೇಶಾದ್ಯಂತ ಇತ್ತೀಚೆಗೆ ಸಂಭವಿಸಿದ ಅಪರೂಪದ ಹಾಗೂ ಕಣ್ಣು ಕೋರೈಸುವ ಪೂರ್ಣ ಸೂರ್ಯಗ್ರಹಣವು (Solar Eclipse) ದೇಶದ ಜನರನ್ನು ಮತ್ತು ಪ್ರಪಂಚದ ನಾನಾ ಮೂಲೆಗಳಿಂದ ಬಂದಿದ್ದ ಪ್ರವಾಸಿಗರನ್ನು ಅಕ್ಷರಶಃ ಮಂತ್ರಮುಗ್ಧಗೊಳಿಸಿದೆ.
ಗಲಿಷಿಯಾದಿಂದ ಹಿಡಿದು ಮೆಡಿಟರೇನಿಯನ್ ಕರಾವಳಿ ಹಾಗೂ ಬಾಲೆರಿಕ್ ದ್ವೀಪಗಳವರೆಗಿನ ವಿಶಾಲ ಪ್ರದೇಶದಲ್ಲಿ ಕಂಡುಬಂದ ಈ ಖಗೋಳ ಕೌತುಕವು ಕೇವಲ ಎರಡೇ ನಿಮಿಷಗಳ ಕಾಲ ಇತ್ತಾದರೂ, ನೆರೆದಿದ್ದ ಪ್ರತಿಯೊಬ್ಬರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯುವಂತಹ ಕ್ಷಣಗಳನ್ನು ನೀಡಿತು. ಸ್ಪೇನ್‌ನಲ್ಲಿ ಕಳೆದ ಒಂದು ಶತಮಾನಕ್ಕೂ ಹೆಚ್ಚು ಕಾಲದ ನಂತರ ಸಂಭವಿಸಿದ ಮೊದಲ ಪೂರ್ಣ ಸೂರ್ಯಗ್ರಹಣ ಇದಾಗಿದ್ದು, ಎಲ್ಲೆಡೆ ಹಬ್ಬದ ವಾತಾವರಣ ಮನೆಮಾಡಿತ್ತು.
ಮೌನದಿಂದ ಹರ್ಷೋದ್ಗಾರದತ್ತ: ಕತ್ತಲಲ್ಲಿ ಮುಳುಗಿದ ನಗರಗಳು
ಮೆಡಿಟರೇನಿಯನ್ ಕರಾವಳಿಯ ತಾರಾಗೋನಾದಲ್ಲಿ ಸಂಜೆಯ ಹೊಂಬೆಳಕು ಏಕಾಏಕಿ ಕತ್ತಲಿಗೆ ಜಾರುತ್ತಿದ್ದಂತೆ, ನೆರೆದಿದ್ದ ಸಾವಿರಾರು ಜನರ ಸಮೂಹವು ಅಚ್ಚರಿಯಿಂದ ನಿಶ್ಚಲವಾಯಿತು. ಸೂರ್ಯ ಸಂಪೂರ್ಣವಾಗಿ ಮರೆಯಾಗುತ್ತಿದ್ದಂತೆ ಜನರ ಸಂತಸದ ಹರ್ಷೋದ್ಗಾರ ಮುಗಿಲು ಮುಟ್ಟಿತು. ಪ್ರತಿಯೊಬ್ಬರೂ ಕರತಾಡನ ಮಾಡುತ್ತಾ ಈ ರಮಣೀಯ ದೃಶ್ಯವನ್ನು ಕಣ್ಣುಂಬಿಕೊಂಡರು.
ಪೋಸ್ಟ್ನಲ್ಲಿರೋದೇನು?
ಬಾರ್ಸಿಲೋನಾದಿಂದ ಆಗಮಿಸಿದ್ದ ನಾನೋಸೈನ್ಸ್ ಸಂಶೋಧಕ ಅಲೆಜಾಂಡ್ರೋ ಕ್ಯುಸ್ಟಾ ತಮ್ಮ ಭಾವುಕತೆಯನ್ನು ಹಂಚಿಕೊಳ್ಳುತ್ತಾ, ನನಗೆ ಕ್ಷಣಕಾಲ ಕಣ್ಣೀರು ಬರುವಂತಾಯಿತು, ಮೈಯೆಲ್ಲಾ ರೋಮಾಂಚನಗೊಂಡಿತು. ಇದು ನಿಜಕ್ಕೂ ನಂಬಲಾಗದಷ್ಟು ಸುಂದರವಾದ ಕ್ಷಣ," ಎಂದು ಪ್ರತಿಕ್ರಿಯಿಸಿದರು.
ಅಂತೆಯೇ, ಸುಮಾರು 500 ಕಿಲೋಮೀಟರ್ ದೂರದಲ್ಲಿರುವ ಲೋಡೋಸೊ ಎಂಬ ಪಟ್ಟಣದಲ್ಲಿ ನೂರಾರು ಜನರು ಬೇಸಿಗೆಯ ಸುಡುವ ಬಿಸಿಲನ್ನು ಲೆಕ್ಕಿಸದೆ ವಿಶಾಲವಾದ ಮೈದಾನದಲ್ಲಿ ನೆರೆದಿದ್ದರು. ಚಂದ್ರನು ಸೂರ್ಯನನ್ನು ಪೂರ್ತಿಯಾಗಿ ಮರೆಮಾಚಿದಾಗ ಹುಟ್ಟಿಕೊಂಡ ಸೂರ್ಯನ ಅತ್ಯಪರೂಪದ ಸೌರ ಕಿರೀಟವನ್ನು (Solar Corona) ಕಂಡು ಜನಸ್ತೋಮ ಬೆರಗಾಯಿತು.
ಅಂತರರಾಷ್ಟ್ರೀಯ ಮಟ್ಟದ ಕೌತುಕ ಹಾಗೂ ಸಂಭ್ರಮ
ಈ ಅಪರೂಪದ ಘಟನೆಗೆ ಸಾಕ್ಷಿಯಾಗಲು ದಕ್ಷಿಣ ಕೊರಿಯಾ, ಫ್ರಾನ್ಸ್, ಪೋಲೆಂಡ್, ಜರ್ಮನಿ ಸೇರಿದಂತೆ ಪ್ರಪಂಚದ ನಾನಾ ದೇಶಗಳಿಂದ ಪ್ರವಾಸಿಗರು ಆಗಮಿಸಿದ್ದರು. ಜನರಿಗೆ ಮಾರ್ಗದರ್ಶನ ನೀಡಲು ಹಲವು ಭಾಷೆಗಳಲ್ಲಿ ಸೂಚನಾ ಫಲಕಗಳನ್ನು ಅಳವಡಿಸಲಾಗಿತ್ತು. ಸುರಕ್ಷಿತ ಗ್ರಹಣ ಕನ್ನಡಕಗಳನ್ನು ಧರಿಸಿ, ಅತ್ಯಾಧುನಿಕ ಟೆಲಿಸ್ಕೋಪ್‌ಗಳನ್ನು ಜೋಡಿಸಿಕೊಂಡು ಜನರು ಈ ಕ್ಷಣವನ್ನು ತಮ್ಮ ಮೊಬೈಲ್ ಹಾಗೂ ಕ್ಯಾಮೆರಾಗಳಲ್ಲಿ ಸೆರೆಹಿಡಿದರು.
ಪಾಲ್ಮಾ ಡಿ ಮಜೋರ್ಕಾ: ಬಾಲೆರಿಕ್ ದ್ವೀಪ ಸಮೂಹದ ಪ್ರಸಿದ್ಧ ಸಮುದ್ರ ದಂಡೆಯಲ್ಲಿ ಈಜು ಉಡುಪಿನಲ್ಲಿದ್ದ ಪ್ರವಾಸಿಗರು, ಸಮುದ್ರದ ನೀರಿನಲ್ಲಿ ನಿಂತುಕೊಂಡೇ ಕಣ್ಣಿಗೆ ಸುರಕ್ಷಿತ ಗ್ಲಾಸ್ ಧರಿಸಿ ಗ್ರಹಣವನ್ನು ವೀಕ್ಷಿಸಿದರು.
ಮ್ಯಾಡ್ರಿಡ್: ರಾಜಧಾನಿ ಮ್ಯಾಡ್ರಿಡ್‌ನಲ್ಲಿ ಗ್ರಹಣವು ಶೇಕಡಾ 99 ಕ್ಕಿಂತ ಹೆಚ್ಚು ಭಾಗ ಕಂಡುಬಂದಿದ್ದು, ಇಡೀ ನಗರವೇ ಕೆಲ ಕ್ಷಣಗಳ ಕಾಲ ಕತ್ತಲಲ್ಲಿ ಮುಳುಗಿಹೋಯಿತು. ಅಲ್ಲಿನ 'ಟೆಂಪಲ್ ಆಫ್ ಅಮುನ್' ಉದ್ಯಾನವನದಲ್ಲಿ ಸಾವಿರಾರು ಜನರು ಒಟ್ಟುಗೂಡಿದ್ದರು.
ಬಾರ್ಸಿಲೋನಾ: ನಗರದ ಪ್ರಸಿದ್ಧ ಮೊಂಟ್‌ಜುಯಿಕ್ ಬೆಟ್ಟದ ಮೇಲೆ ಯುವಕರು ಮತ್ತು ಕುಟುಂಬಗಳು ಗುಂಪುಗೂಡಿ ಈ ಐತಿಹಾಸಿಕ ಘಟನೆಯನ್ನು ಸಂಭ್ರಮಿಸಿದರು (ಏಜೆನ್ಸೀಸ್).