ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷದ (ಬಿಎನ್‌ಪಿ) ಪ್ರಮುಖ ನಾಯಕ ಅಜೀಜುರ್ ರೆಹಮಾನ್ ಮುಸಬ್ಬೀರ್ 
ವಿದೇಶ

ಢಾಕಾದಲ್ಲಿ ನಡುರಾತ್ರಿ ಗುಂಡಿನ ಸದ್ದು: ಬಿಎನ್‌ಪಿ ನಾಯಕ ರೆಹಮಾನ್ ಮುಸಾಬಿರ್ ಹತ್ಯೆ | Azizur Rahman Musabbir

ಢಾಕಾ: ಬಾಂಗ್ಲಾದಲ್ಲಿ ರಾಜಕೀಯ ಹಿಂಸಾಚಾರದ ಉಲ್ಬಣವಾಗಿದ್ದು, ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷದ (ಬಿಎನ್‌ಪಿ) ಪ್ರಮುಖ ನಾಯಕ ಅಜೀಜುರ್ ರೆಹಮಾನ್ ಮುಸಬ್ಬೀರ್​ರನ್ನು(Azizur Rahman Musabbir) ರಾತ್ರಿ ಢಾಕಾದ ಕಾರ್ವಾನ್ ಬಜಾರ್ ಪ್ರದೇಶದಲ್ಲಿ ಗುಂಡಿಕ್ಕಿ ಕೊಲ್ಲಲಾಗಿದೆ.

ಗುಂಡಿಕ್ಕಿ ಕೊಂದ ಅಪರಿಚಿತರು

ಬಾಂಗ್ಲಾದ ಬಶುಂಧರಾ ಸಿಟಿ ಶಾಪಿಂಗ್ ಕಾಂಪ್ಲೆಕ್ಸ್‌ನ ಹಿಂಭಾಗದಲ್ಲಿರುವ ತೇಜ್‌ತುರಿ ಬಜಾರ್ ಪ್ರದೇಶದಲ್ಲಿ ರಾತ್ರಿ ಸುಮಾರು 8:40 ಕ್ಕೆ ಈ ಘಟನೆ ಸಂಭವಿಸಿದೆ.
ಬಿಎನ್​ಪಿ ನಾಯಕ ಮುಸಬ್ಬೀರ್ ಹತ್ಯೆಯ ಮೊದಲು ಸೂಪರ್ ಸ್ಟಾರ್ ಹೋಟೆಲ್‌ನಲ್ಲಿ ನಡೆದ ರಾಜಕೀಯ ಕಾರ್ಯಕ್ರಮದಲ್ಲಿ ಭಾಗವಹಿಸುವುದನ್ನು ಮುಗಿಸಿದ್ದರು. ಅಲ್ಲದೆ, ಅಬು ಸುಫಿಯಾನ್ ಮಸೂದ್​ರೊಂದಿಗೆ ಕಿರಿದಾದ ಲೇನ್‌ನಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ, ಇಬ್ಬರು ಅಪರಿಚಿತ ಬಂದೂಕುಧಾರಿಗಳು ಪಾಯಿಂಟ್-ಬ್ಲಾಂಕ್ ರೇಂಜ್‌ನಲ್ಲಿ ರೆಹಮಾನ್​ಗೆ ಗುಂಡು ಹಾರಿಸಿದ್ದಾರೆ.
ಘಟನೆಯಲ್ಲಿ ಮುಸಬ್ಬೀರ್ ಅವರಿಗೆ ಹಲವು ಗುಂಡೇಟಿನ ಗಾಯಗಳಾಗಿದ್ದು, ಅವರನ್ನು ಪಂಥಾಪತ್‌ನಲ್ಲಿರುವ ಬಿಆರ್‌ಬಿ ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ ವೈದ್ಯರು ಅವರನ್ನು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು. ರೆಹಮಾನ್​ ಸಹಚರ ಅಬು ಸುಫಿಯಾನ್ ಹೊಟ್ಟೆಗೆ ಗುಂಡು ಹಾರಿಸಲಾಗಿದ್ದು, ಪ್ರಸ್ತುತ ಢಾಕಾ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ (ಡಿಎಂಸಿಎಚ್) ಗಂಭೀರ ಸ್ಥಿತಿಯಲ್ಲಿದ್ದಾರೆ.
ಗುಂಡಿನ ದಾಳಿಯ ನಂತರ ಮೋಟಾರ್ ಸೈಕಲ್‌ನಲ್ಲಿ ಬಂದಿರಬಹುದಾದ ದಾಳಿಕೋರರು ಕಿರಿದಾದ ಓಣಿಗಳ ಮೂಲಕ ಸ್ಥಳದಿಂದ ಕಾಲ್ನಡಿಗೆಯಲ್ಲಿ ಪರಾರಿಯಾಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಅಜೀಜುರ್ ರೆಹಮಾನ್ ಮುಸಬ್ಬೀರ್ ಯಾರು..?

ಮುಸಬ್ಬೀರ್ ಒಬ್ಬ ಅನುಭವಿ ರಾಜಕೀಯ ಸಂಘಟಕರಾಗಿದ್ದರು ಮತ್ತು ಬಿಎನ್‌ಪಿಯ ತಳಮಟ್ಟದ ಸಂಘಟನೆಯ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸುವ ವ್ಯಕ್ತಿಯಾಗಿದ್ದರು. ಅಲ್ಲದೆ, ಢಾಕಾ ನಗರ ಉತ್ತರ ಸ್ವೀಚ್ಛಸೇಬಕ್ ದಳದ (ಬಿಎನ್‌ಪಿಯ ಸ್ವಯಂಸೇವಕ ವಿಭಾಗ) ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು.
ರೆಹಮಾನ್ ಮುಸಬ್ಬೀರ್ 2020ರ ನಗರ ನಿಗಮ ಚುನಾವಣೆಯ ಸಮಯದಲ್ಲಿ ತೇಜಗಾಂವ್‌ನ ವಾರ್ಡ್ -26 ರ ಕೌನ್ಸಿಲರ್ ಸ್ಥಾನಕ್ಕೆ ಬಿಎನ್‌ಪಿ ಬೆಂಬಲಿತ ಅಭ್ಯರ್ಥಿಯಾಗಿದ್ದರು.

ವೈಯಕ್ತಿಕ ಹೋರಾಟ

ಮುಸಬ್ಬೀರ್ ಹಿಂದಿನ ಅವಾಮಿ ಲೀಗ್ ಆಡಳಿತದಲ್ಲಿ ಜೈಲಿನಲ್ಲಿದ್ದರು. ಅಲ್ಲದೆ, ಹಲವಾರು ರಾಜಕೀಯ ಪ್ರಕರಣಗಳನ್ನು ಎದುರಿಸಿದ್ದರು ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.

ಹೆಚ್ಚುತ್ತಿರುವ ರಾಜಕೀಯ ಅಶಾಂತಿ

ಈ ಹತ್ಯೆಯು ತಕ್ಷಣದ ಪ್ರತಿಭಟನೆಗಳಿಗೆ ನಾಂದಿ ಹಾಡಿದೆ. ಕೋಪಗೊಂಡ ಬಿಎನ್‌ಪಿ ಕಾರ್ಯಕರ್ತರು ಸಾರ್ಕ್ ಫೌಂಟೇನ್ ಛೇದಕವನ್ನು ತಡೆದು, ಹಂತಕರನ್ನು ಬಂಧಿಸುವಂತೆ ಒತ್ತಾಯಿಸಿದರು. ಪ್ರಸ್ತುತ ಆಡಳಿತವು ರಾಜಕೀಯ ಭಿನ್ನಮತೀಯರನ್ನು ರಕ್ಷಿಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು.

ಅಧಿಕೃತ ಪ್ರತಿಕ್ರಿಯೆ

ಹೆಚ್ಚುವರಿ ಜಿಲ್ಲಾಧಿಕಾರಿ ಫಜ್ಲುಲ್ ಕರೀಮ್ ಸಾವನ್ನು ದೃಢಪಡಿಸಿದ್ದು, ಹಲ್ಲೆಕೋರರನ್ನು ಗುರುತಿಸಲು ಪೊಲೀಸರು ತೇಜ್ತುರಿ ಬಜಾರ್ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಅದರೆ, ಗುರುವಾರ ಸಂಜೆಯವರೆಗೆ ಯಾರನ್ನೂ ಬಂಧಿಸಲಾಗಿಲ್ಲ,(ಏಜೆನ್ಸೀಸ್).