ತೆಹ್ರಾನ್/ಬುಶೆಹರ್: ಮಧ್ಯಪ್ರಾಚ್ಯದಲ್ಲಿ ಯುದ್ಧವು ಈಗ ಅಕ್ಷರಶಃ ವಿನಾಶದ ಹಂತಕ್ಕೆ ತಲುಪಿದೆ. ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ನಡೆಸುತ್ತಿರುವ 'ಎಪಿಕ್ ಫ್ಯೂರಿ' (Epic Fury) ಮತ್ತು 'ರೋರಿಂಗ್ ಲಯನ್' (Roaring Lion) ಕಾರ್ಯಾಚರಣೆಯು ಭೀಕರತೆ ಪಡೆದಿದೆ. ಮಂಗಳವಾರ ನಡೆದ ದಾಳಿಯಲ್ಲಿ ಬುಶೆಹರ್ ವಿಮಾನ ನಿಲ್ದಾಣದಲ್ಲಿದ್ದ 'ಇರಾನ್ ಏರ್' ಸಂಸ್ಥೆಯ ಪ್ರಯಾಣಿಕ ವಿಮಾನವೊಂದು ನೆಲದ ಮೇಲೆಯೇ ಬಾಂಬ್ ದಾಳಿಗೆ ತುತ್ತಾಗಿ ಸಂಪೂರ್ಣ ಧ್ವಂಸಗೊಂಡಿದೆ.
ಪರ್ಷಿಯನ್ ಗಲ್ಫ್ ತೀರದಲ್ಲಿರುವ ಬುಶೆಹರ್ ನಗರವು ಇರಾನ್‌ನ ಏಕೈಕ ಕಾರ್ಯಾಚರಣಾ ಅಣುಶಕ್ತಿ ಸ್ಥಾವರವನ್ನು ಹೊಂದಿದೆ. ಈ ಸೂಕ್ಷ್ಮ ಪ್ರದೇಶದ ವಿಮಾನ ನಿಲ್ದಾಣದ ಮೇಲೆ ನಡೆದ ದಾಳಿಯು ಇಡೀ ವಿಶ್ವವನ್ನು ಬೆಚ್ಚಿಬೀಳಿಸಿದೆ. ಕೇವಲ ಬುಶೆಹರ್ ಮಾತ್ರವಲ್ಲದೆ, ರಾಜಧಾನಿ ತೆಹ್ರಾನ್‌ನ ಮೆಹ್ರಾಬಾದ್ ವಿಮಾನ ನಿಲ್ದಾಣವನ್ನೂ ಗುರಿಯಾಗಿಸಿಕೊಂಡು ಕ್ಷಿಪಣಿ ದಾಳಿ ನಡೆಸಲಾಗಿದ್ದು, ರನ್‌ವೇಗಳ ಬಳಿ ದಟ್ಟವಾದ ಕಪ್ಪು ಹೊಗೆ ಆವರಿಸಿರುವ ಭಯಾನಕ ದೃಶ್ಯಗಳು ವರದಿಯಾಗಿವೆ.
ನೆತನ್ಯಾಹು ಖಡಕ್ ವಾರ್ನಿಂಗ್!
"ನಮ್ಮ ಪೈಲಟ್‌ಗಳು ಇರಾನ್ ಮತ್ತು ಲೆಬನಾನ್ ಆಕಾಶದಲ್ಲಿ ಗಸ್ತು ತಿರುಗುತ್ತಿದ್ದಾರೆ. ಇಸ್ರೇಲ್ ಮೇಲೆ ದಾಳಿ ಮಾಡಿದವರಿಗೆ ನಾವು ಮಹಾ ಬಲದೊಂದಿಗೆ ಉತ್ತರ ನೀಡುವುದನ್ನು ಮುಂದುವರಿಸುತ್ತೇವೆ" ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಗುಡುಗಿದ್ದಾರೆ.
ಪ್ರಯಾಣಿಕ ವಿಮಾನಗಳನ್ನು ಗುರಿಯಾಗಿಸಿಕೊಳ್ಳುತ್ತಿರುವುದು ಮತ್ತು ಅಣುಸ್ಥಾವರದ ಸಮೀಪವೇ ದಾಳಿ ನಡೆಯುತ್ತಿರುವುದು ಜಾಗತಿಕ ಸಮುದಾಯದ ನಿದ್ದೆ ಕೆಡಿಸಿದೆ. ಒಂದು ವೇಳೆ ಬುಶೆಹರ್ ಅಣುಸ್ಥಾವರಕ್ಕೆ ಹಾನಿಯಾದರೆ, ಅದು ವಿಕಿರಣ ಸೋರಿಕೆಯಂತಹ ಮಹಾ ದುರಂತಕ್ಕೆ ಕಾರಣವಾಗಬಹುದು. ಮಧ್ಯಪ್ರಾಚ್ಯದ ಈ ಯುದ್ಧವು ಈಗ ನಿಯಂತ್ರಣ ಮೀರಿ ಹೋಗುತ್ತಿದ್ದು, ಇಡೀ ಜಗತ್ತು ಉಸಿರು ಬಿಗಿಹಿಡಿದು ನೋಡುತ್ತಿದೆ,(ಏಜೆನ್ಸೀಸ್)