ನವದೆಹಲಿ/ಟೆಹ್ರಾನ್: ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ನಡೆಸಿರುವ(Middle East Crisis) ಭೀಕರ ವಾಯುದಾಳಿ ಹಿನ್ನೆಲೆ ದಕ್ಷಿಣ ಇರಾನ್‌ನ ಮಿನಾಬ್‌ನಲ್ಲಿರುವ ಬಾಲಕಿಯರ ಶಾಲೆಯೊಂದರ ಮೇಲೆ ಸ್ಪೋಟಗೊಂಡಿದ್ದು, ದಾಳಿಯಲ್ಲಿ 40 ವಿದ್ಯಾರ್ಥಿನಿಯರು ಸಾವನ್ನಪ್ಪಿರುವ ಆಘಾತಕಾರಿ ಸುದ್ದಿ ವರದಿಯಾಗಿದೆ.
ಇರಾನ್‌ನ ಪ್ಯಾರಾಮಿಲಿಟರಿ ರೆವಲ್ಯೂಷನರಿ ಗಾರ್ಡ್‌ನ ನೆಲೆ ಇರುವ ಮಿನಾಬ್ ಪ್ರದೇಶದಲ್ಲಿ ಈ ದಾಳಿ ನಡೆದಿದೆ. ಈ ಕಾರ್ಯಾಚರಣೆಯಲ್ಲಿ ಇದುವರೆಗೆ ದೃಢಪಟ್ಟ ಮೊದಲ ಸಾವುನೋವುಗಳು ಇವಾಗಿವೆ. ಶಾಲೆ ಮೇಲೆ ದಾಳಿ ನಡೆದಾಗ ವಿದ್ಯಾರ್ಥಿನಿಯರು ತರಗತಿಯಲ್ಲಿದ್ದರು ಎಂದು ತಿಳಿದುಬಂದಿದ್ದು, ಈ ಕೃತ್ಯವು ಅಂತರರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಖಂಡನೆಗೆ ಗುರಿಯಾಗಿದೆ.
ಇರಾನ್ ಆಡಳಿತಕ್ಕೆ ಟ್ರಂಪ್ ಸವಾಲು
ಇರಾನ್‌ನಲ್ಲಿನ ದಾಳಿಗಳ ನಂತರ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್‌ನ ಜನರಿಗೆ ತಮ್ಮ ಹಣೆಬರಹವನ್ನು ತಾವೇ ನಿರ್ಧರಿಸಿಕೊಳ್ಳುವಂತೆ ಮತ್ತು 1979 ರಿಂದ ಆಡಳಿತ ನಡೆಸುತ್ತಿರುವ ಇಸ್ಲಾಮಿಕ್ ನಾಯಕತ್ವದ ವಿರುದ್ಧ ದಂಗೆ ಏಳುವಂತೆ ಕರೆ ನೀಡಿದ್ದಾರೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕೂಡ, "ನಮ್ಮ ಜಂಟಿ ಕಾರ್ಯಾಚರಣೆಯು ಧೈರ್ಯಶಾಲಿ ಇರಾನಿನ ಜನರು ತಮ್ಮ ಭವಿಷ್ಯವನ್ನು ತಾವೇ ರೂಪಿಸಿಕೊಳ್ಳಲು ಅವಕಾಶ ಕಲ್ಪಿಸುತ್ತದೆ" ಎಂದು ಹೇಳಿದ್ದಾರೆ.
ಮಧ್ಯಪ್ರಾಚ್ಯದಲ್ಲಿ ಪ್ರತೀಕಾರದ ಜ್ವಾಲೆ
ದಾಳಿಯು ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಕಚೇರಿಯ ಸಮೀಪವಿರುವ ಪ್ರದೇಶಗಳನ್ನು ಗುರಿಯಾಗಿಸಿಕೊಂಡಿತ್ತು. ಇದಾದ ಕೆಲವೇ ಕ್ಷಣಗಳಲ್ಲಿ, ಮಧ್ಯಪ್ರಾಚ್ಯದಾದ್ಯಂತ ಪ್ರತೀಕಾರದ ದಾಳಿಗಳು ವರದಿಯಾಗಿವೆ. ಬಹ್ರೇನ್, ಕುವೈತ್ ಮತ್ತು ಕತಾರ್‌ನಲ್ಲಿನ ಅಮೆರಿಕದ ಮಿಲಿಟರಿ ಸ್ಥಾಪನೆಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ. ಯುಎಇ ಮತ್ತು ಇರಾಕ್ ತಮ್ಮ ವಾಯುಪ್ರದೇಶವನ್ನು ಬಂದ್ ಮಾಡಿವೆ.
ಇರಾನ್ ವಿದೇಶಾಂಗ ಸಚಿವಾಲಯವು, "ತಾಯ್ನಾಡನ್ನು ರಕ್ಷಿಸಲು ಮತ್ತು ಶತ್ರುಗಳ ಮಿಲಿಟರಿ ದಾಳಿಯನ್ನು ಎದುರಿಸಲು ಇದು ಸಮಯ" ಎಂದು ಘೋಷಿಸಿದ್ದು, ಪ್ರತೀಕಾರ ತೀರಿಸಿಕೊಳ್ಳುವುದಾಗಿ ಎಚ್ಚರಿಸಿದೆ,(ಏಜೆನ್ಸೀಸ್).