60,000 ಉದ್ಯೋಗಿಗಳಿಗೆ ತಾವೇ ಕೆಲಸಕ್ಕೆ ಗುಡ್​ಬೈ ಹೇಳುವಂತೆ ಟೆಕ್​ ದೈತ್ಯ ಕಂಪನಿ ಆಫರ್‌! ಬುದ್ಧಿವಂತಿಕೆಯ ಮೈಕ್ರೋಸಾಫ್ಟ್​ | Microsoft Offer  
ವಿದೇಶ

60,000 ಉದ್ಯೋಗಿಗಳಿಗೆ ತಾವೇ ಕೆಲಸಕ್ಕೆ ಗುಡ್​ಬೈ ಹೇಳುವಂತೆ ಟೆಕ್​ ದೈತ್ಯ ಕಂಪನಿ ಆಫರ್‌! ಬುದ್ಧಿವಂತಿಕೆಯ ಮೈಕ್ರೋಸಾಫ್ಟ್​ | Microsoft Offer

ಕೃತಕ ಬುದ್ಧಿಮತ್ತೆ (ಎಐ) ಕ್ಷೇತ್ರದಲ್ಲಿ ಭಾರಿ ಪ್ರಮಾಣದ ಹೂಡಿಕೆ ಮಾಡುತ್ತಿರುವ ಮೈಕ್ರೋಸಾಫ್ಟ್, ಎಷ್ಟು ಸಾಧ್ಯವೋ ಅಷ್ಟು ವೆಚ್ಚ ಕಡಿತಗೊಳಿಸುವ ಉದ್ದೇಶದಿಂದ ಸುಮಾರು 60 ಸಾವಿರ ಉದ್ಯೋಗಿಗಳಿಗೆ ಸ್ವಯಂ ವಿದಾಯ ಹೇಳುವ ಆಫರ್​ ಅನ್ನು ನೀಡಿದೆ.

ನವದೆಹಲಿ: ಕಳೆದ ವರ್ಷದಲ್ಲಿ ಸತತವಾಗಿ ಮೂರು ಬಾರಿ ಉದ್ಯೋಗಿಗಳ ವಜಾಗೊಳಿಸುವಿಕೆ ಪ್ರಕ್ರಿಯೆಯಲ್ಲಿ ತೊಡಗುವ ಮೂಲಕ ಹೆಸರಾಂತ ಟೆಕ್​ ಸಂಸ್ಥೆ ಮೈಕ್ರೋಸಾಫ್ಟ್, ಅದೆಷ್ಟೋ ಉದ್ಯೋಗಿಗಳನ್ನು ಕೆಲಸದಿಂದ ಕಿತ್ತುಬಿಸಾಡಿತು. ಈ ವರ್ಷವು ಭಾರಿ ಉದ್ಯೋಗ ಕಡಿತಕ್ಕೆ ತೆರೆಮರೆಯಲ್ಲಿ ಸಿದ್ಧತೆ ನಡೆಸುತ್ತಿರುವ ಮೈಕ್ರೋಸಾಫ್ಟ್, 60 ಸಾವಿರಕ್ಕೂ ಹೆಚ್ಚು ನೌಕರರಿಗೆ ತಾವೇ ಕೆಲಸ ಬಿಟ್ಟುಹೋಗುವಂತೆ​ ಕೊಟ್ಟಿರುವ ಆಫರ್ ಸದ್ಯ​ ಬಹಳ ಶಾಕಿಂಗ್ ಆಗಿದೆ.

ಕೃತಕ ಬುದ್ಧಿಮತ್ತೆ (ಎಐ) ಕ್ಷೇತ್ರದಲ್ಲಿ ಭಾರಿ ಪ್ರಮಾಣದ ಹೂಡಿಕೆ ಮಾಡುತ್ತಿರುವ ಮೈಕ್ರೋಸಾಫ್ಟ್, ಎಷ್ಟು ಸಾಧ್ಯವೋ ಅಷ್ಟು ವೆಚ್ಚ ಕಡಿತಗೊಳಿಸುವ ಉದ್ದೇಶದಿಂದ ಸುಮಾರು 60 ಸಾವಿರ ಉದ್ಯೋಗಿಗಳಿಗೆ ಸ್ವಯಂ ವಿದಾಯ ಹೇಳುವ ಆಫರ್​ ಅನ್ನು ನೀಡಿದೆ. ಕಂಪನಿಯ ಒಟ್ಟು ಉದ್ಯೋಗಿಗಳಲ್ಲಿ ಸುಮಾರು ಕಾಲು ಭಾಗದಷ್ಟು ಮಂದಿ ಈ ಯೋಜನೆಗೆ ಅರ್ಹರಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.

ಅಮೆರಿಕ, ಕೆನಡಾ, ಭಾರತ ಮತ್ತು ಬ್ರಿಟನ್‌ನ ಆಯ್ದ ತಂಡಗಳಲ್ಲಿ ಉಪಾಧ್ಯಕ್ಷರ ಹಂತದವರೆಗಿನ ಉದ್ಯೋಗಿಗಳು ಈ ಯೋಜನೆಯ ಪ್ರಯೋಜನ ಪಡೆಯಬಹುದು ಎನ್ನಲಾಗಿದೆ. ಆದರೆ, ಡೇಟಾ ಸೆಂಟರ್‌ಗಳು, ಸೇಲ್ಸ್​ ಮತ್ತು ಮಾರುಕಟ್ಟೆ ವಿಭಾಗಗಳ ಕೆಲವು ಉದ್ಯೋಗಿಗಳಿಗೆ ಈ ಆಫರ್ ಅನ್ವಯಿಸುವುದಿಲ್ಲ ಎಂಬುದನ್ನು ಸಂಸ್ಥೆಯು ಒತ್ತಿ ಹೇಳಿದೆ.

ಉದ್ಯೋಗಿಗಳಿಗೆ ತಮ್ಮ ಮುಂದಿನ ವೃತ್ತಿಜೀವನದ ನಿರ್ಧಾರಗಳನ್ನು ತೆಗೆದುಕೊಳ್ಳಲು ಹೆಚ್ಚಿನ ಅವಕಾಶ ಕಲ್ಪಿಸುವುದು ಈ ಯೋಜನೆಯ ಉದ್ದೇಶ ಎಂದು ಕಂಪನಿಯ ಮುಖ್ಯ ಮಾನವ ಸಂಪನ್ಮೂಲ (ಎಚ್​ಆರ್​) ಆಮಿ ಕೋಲ್ಮನ್ ಸ್ಪಷ್ಟಪಡಿಸಿದ್ದಾರೆ. ಈ ವರ್ಷ ಮೈಕ್ರೋಸಾಫ್ಟ್ ನೀಡುತ್ತಿರುವ ಎರಡನೇ ಸ್ವಯಂ ಗುಡ್​ಬೈ ಆಫರ್ ಇದಾಗಿದೆ. ಏಪ್ರಿಲ್‌ನಲ್ಲಿ ಅಮೆರಿಕದ ಉದ್ಯೋಗಿಗಳ ಪೈಕಿ ಸುಮಾರು ಶೇ.7ರಷ್ಟು ಮಂದಿಗೆ ಇದೇ ರೀತಿಯ ಅವಕಾಶ ನೀಡಲಾಗಿತ್ತು. ಅವರಲ್ಲಿ ಶೇ. 30ರಷ್ಟು ಮಂದಿ ಇದನ್ನು ಸ್ವೀಕರಿಸಿದ್ದರು ಎಂದು ಸಿಎನ್​ಬಿಸಿ ವರದಿ ಮಾಡಿದೆ.

ದಾಖಲೆಗಳ ಪ್ರಕಾರ, 2025ರ ಕೊನೆಯಲ್ಲಿ 2.28 ಲಕ್ಷ ಉದ್ಯೋಗಿಗಳನ್ನು ಹೊಂದಿದ್ದ ಕಂಪನಿಯಲ್ಲಿ, ಈ ವರ್ಷದ ಜೂನ್ ಅಂತ್ಯಕ್ಕೆ ಉದ್ಯೋಗಿಗಳ ಸಂಖ್ಯೆ 2.23 ಲಕ್ಷಕ್ಕೆ ಇಳಿದಿದೆ. ಎಐ ಕ್ಷೇತ್ರದಲ್ಲಿ ಹೂಡಿಕೆ ಹೆಚ್ಚಿಸುತ್ತಿರುವ ಹಿನ್ನೆಲೆಯಲ್ಲಿ ವೆಚ್ಚ ನಿರ್ವಹಣೆಗೆ ಕಂಪನಿಯು ಆದ್ಯತೆ ನೀಡುತ್ತಿದೆ. ಇದು ಹೀಗೆ ಮುಂದುವರಿದರೆ, ಮುಂದಿನ ದಿನಗಳಲ್ಲಿ ಉದ್ಯೋಗಿಗಳಿಗೆ ಟೆಕ್​ ಸಂಸ್ಥೆಗಳಲ್ಲಿ ಹೆಚ್ಚಿನ ಅವಕಾಶ ಸಿಗುವುದು ಬಹುತೇಕ ಡೌಟ್​ ಎಂದೇ ಹೇಳಬಹುದು,(ಏಜೆನ್ಸೀಸ್).