ಮೈಕೆಲಾ ಬೆಂಥೌಸ್ 
ವಿದೇಶ

ವೀಲ್​ಚೇರ್​ ಮೂಲಕ ಸ್ಪೇಸ್​ಗೆ ಎಂಟ್ರಿಕೊಟ್ಟ ಮೊದಲ ಮಹಿಳೆ ಈಕೆ! ಯಾರೀ ಇತಿಹಾಸ ನಿರ್ಮಿಸಿದ ಮೈಕೆಲಾ ಬೆಂಥೌಸ್?

Michaela Benthaus: ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆಯಲ್ಲಿ ಏರೋಸ್ಪೇಸ್ ಮತ್ತು ಮೆಕಾಟ್ರಾನಿಕ್ಸ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿರುವ ಜರ್ಮನ್ ಮಹಿಳೆ ಮೈಕೆಲಾ ಬೆಂಥೌಸ್ (33), ಇದೀಗ ಸ್ಪೇಸ್​ಗೆ ಪ್ರಯಾಣಿಸಿದ ಮೊದಲ ವೀಲ್‌ಚೇರ್ ಯೂಸರ್​ ಎಂಬ ಇತಿಹಾಸವನ್ನು ನಿರ್ಮಿಸಿದ್ದಾರೆ. 
ಸಮುದ್ರ ಮಟ್ಟದಿಂದ 100 ಕಿ.ಮೀ ಎತ್ತರದಲ್ಲಿರುವ ಕರ್ಮನ್ ರೇಖೆಯನ್ನು ದಾಟಿದ್ದಾರೆ. ಕರ್ಮನ್ ರೇಖೆಯು ಭೂಮಿಯ ವಾತಾವರಣವು ಅಂತ್ಯಗೊಳ್ಳುತ್ತದೆ ಎಂದು ಪರಿಗಣಿಸಲಾದ ಸ್ಪೇಸ್​ ಗಡಿಯಾಗಿದೆ. ಮೈಕೆಲಾ ಬೆಂಥೌಸ್ ಅವರ ಬಾಹ್ಯಾಕಾಶ​ ಯಾನವು ಶನಿವಾರ (ಡಿ.20) ಬೆಳಗ್ಗೆ ಬ್ಲೂ ಒರಿಜಿನ್‌ನ ನ್ಯೂ ಶೆಪರ್ಡ್ ಕ್ಯಾಪ್ಸುಲ್‌ನಲ್ಲಿ ಆರಂಭವಾಯಿತು. ಟೆಕ್ಸಾಸ್‌ನ ವ್ಯಾನ್ ಹಾರ್ನ್ ಸಮೀಪದ ಉಡಾವಣಾ ಸ್ಥಳದಿಂದ ರಾಕೆಟ್ ಉಡಾವಣೆಗೊಂಡಿತು.
ಈ ಕಾರ್ಯಾಚರಣೆಯನ್ನು NS-37 ಎಂದು ಕರೆಯಲಾಗಿದೆ. ಇದು ಬ್ಲೂ ಒರಿಜಿನ್ ನಡೆಸಿದ 16ನೇ ಸಬ್‌ಆರ್ಬಿಟಲ್ ಬಾಹ್ಯಾಕಾಶ ಪ್ರವಾಸೋದ್ಯಮ ಪ್ರಯೋಗವಾಗಿದೆ. ಸಬ್‌ಆರ್ಬಿಟಲ್ ಒಂದು ಸ್ಪೇಸ್​ ಹಾರಾಟವಾಗಿದ್ದು, ಇದು ಭೂಮಿಯನ್ನು ಸಂಪೂರ್ಣವಾಗಿ ಸುತ್ತುವುದಿಲ್ಲ. ಆದರೆ, ಒಂದು ನಿರ್ದಿಷ್ಟ ಎತ್ತರಕ್ಕೆ ಹೋಗಿ ಭೂಮಿಗೆ ಹಿಂತಿರುಗಲಿದೆ. ಬ್ಲೂ ಒರಿಜಿನ್ 2000ರಲ್ಲಿ ಸ್ಥಾಪಿಸಲಾಯಿತು. ಸಾಮಾನ್ಯ ಗಗನಯಾತ್ರಿಗಳಂತೆ ಅನುಭವವಿಲ್ಲದಿದ್ದರೂ ಸಹ, ಹೆಚ್ಚಿನ ಜನರಿಗೆ ಬಾಹ್ಯಾಕಾಶ ಪ್ರಯಾಣವನ್ನು ಪ್ರವೇಶಿಸುವಂತೆ ಮಾಡುವುದು ಇದರ ಮಹತ್ವದ ಗುರಿಯಾಗಿದೆ.
ಅನೇಕ ಸಾಹಸಮಯ ಈವೆಂಟ್​ಗಳಲ್ಲಿ ಭಾಗಿಯಾಗುವ ಬೆಂಥೌಸ್, 2018ರಲ್ಲಿ ಮೌಂಟೇನ್ ಬೈಕಿಂಗ್ ಅಪಘಾತದಲ್ಲಿ ಬೆನ್ನುಮೂಳೆಯ ಇಂಜುರಿಯಿಂದ ಬಳಲುತ್ತಿದ್ದರು. ತದನಂತರ, ಅವರು ವೀಲ್‌ಚೇರ್‌ ಸಹಾಯದಿಂದ ಮಾತ್ರ ಓಡಾಡುವಂತಾಯಿತು. ಅನಾಹುತದ ಬಳಿಕವೂ ಕುಗ್ಗದ ಅವರು, ಇಂಜಿನಿಯರಿಂಗ್ ಮತ್ತು ಸಂಶೋಧನೆಯತ್ತ ತಮ್ಮ ಒಲವು ತೋರಿದರು ಎಂಬುದು ನಿಜಕ್ಕೂ ಗಮನಾರ್ಹ,(ಏಜೆನ್ಸೀಸ್).