ಮೆಕ್ಸಿಕೋ ಸಿಟಿ: ಸಾವು ಬಾಗಿಲು ತಟ್ಟಿದರೂ ಭರವಸೆ ಕಳೆದುಕೊಳ್ಳದಿದ್ದರೆ ಪವಾಡಗಳು ಸಂಭವಿಸುತ್ತವೆ ಎಂಬುದಕ್ಕೆ ಮೆಕ್ಸಿಕೋದಲ್ಲಿ(Mexico Mine) ನಡೆದ ಈ ಘಟನೆಯೇ ಸಾಕ್ಷಿ. ಬರೋಬ್ಬರಿ 14 ದಿನಗಳ ಕಾಲ ಸೂರ್ಯನ ಬೆಳಕೇ ಕಾಣದ, 300 ಮೀಟರ್ ಆಳದ ಕಗ್ಗತ್ತಲ ಗಣಿಯೊಳಗೆ ಹಸಿವು ಮತ್ತು ನೀರಡಿಕೆಯೊಂದಿಗೆ ಹೋರಾಡಿದ ಕಾರ್ಮಿಕನೊಬ್ಬ ಸಾವಿನ ದವಡೆಯಿಂದ ಪಾರಾಗಿ ಬಂದಿದ್ದಾನೆ.
ಮೆಕ್ಸಿಕೋದ ಸಿನಾಲೋವಾ ಪ್ರಾಂತ್ಯದ ಚಿನ್ನದ ಗಣಿಯೊಂದರಲ್ಲಿ ಮಾರ್ಚ್ 25 ರಂದು ಭೀಕರ ದುರಂತ ಸಂಭವಿಸಿತ್ತು. ಗಣಿಯ ತಾಜ್ಯವನ್ನು ಹಿಡಿದಿಟ್ಟುಕೊಳ್ಳುವ ಅಣೆಕಟ್ಟು (Tailings Dam) ಹಠಾತ್ತನೆ ಒಡೆದ ಪರಿಣಾಮ ಗಣಿಯ ಒಳಭಾಗಕ್ಕೆ ನೀರು ನುಗ್ಗಿತ್ತು. ಈ ವೇಳೆ 25 ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಅವರಲ್ಲಿ 21 ಮಂದಿ ತಕ್ಷಣ ಹೊರಬರುವಲ್ಲಿ ಯಶಸ್ವಿಯಾದರು. ಆದರೆ ಫ್ರಾನ್ಸಿಸ್ಕೋ ಜಪಾಟಾ ನಾಜೆರಾ (42) ಸೇರಿದಂತೆ ನಾಲ್ವರು ಕಾರ್ಮಿಕರು ಗಣಿಯ ಒಳಭಾಗದಲ್ಲೇ ಸಿಲುಕಿಕೊಂಡಿದ್ದರು.
ಟಾರ್ಚ್ ಬೆಳಕೇ ದಾರಿಯಾಯಿತು
ನಾಜೆರಾ ಸಿಲುಕಿದ್ದ ಜಾಗ ಸುಮಾರು 300 ಮೀಟರ್ ಆಳದಲ್ಲಿತ್ತು. ರಕ್ಷಣಾ ತಂಡವು ನಿರಂತರವಾಗಿ 300 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದರೂ ಅವರ ಸುಳಿವು ಸಿಕ್ಕಿರಲಿಲ್ಲ. ಆದರೆ, 14ನೇ ದಿನದಂದು ರಕ್ಷಣಾ ತಂಡಕ್ಕೆ ದೂರದಲ್ಲಿ ಸಣ್ಣ ಬೆಳಕೊಂದು ಮಿಟುಕಿಸುತ್ತಿರುವುದು ಕಾಣಿಸಿತು. ಅದು ನಾಜೆರಾ ಅವರ ಬಳಿ ಇದ್ದ ಟಾರ್ಚ್‌ನ ಬೆಳಕಾಗಿತ್ತು. ಅವರು ಹತಾಶರಾಗದೆ ಟಾರ್ಚ್ ಆನ್ ಮತ್ತು ಆಫ್ ಮಾಡುವ ಮೂಲಕ ರಕ್ಷಣಾ ತಂಡಕ್ಕೆ ತಮ್ಮ ಇರುವಿಕೆಯ ಸುಳಿವು ನೀಡಿದ್ದರು.
ರಕ್ಷಣಾ ತಂಡದ ಡೈವರ್‌ಗಳು ನಾಜೆರಾ ಅವರ ಬಳಿ ತಲುಪಿದಾಗ, ಅವರು ಸೊಂಟದವರೆಗೆ ತುಂಬಿದ್ದ ನೀರಿನಲ್ಲಿ ನಿಂತಿದ್ದರು. "ನೀವು ಹೇಗಿದ್ದೀರಿ?" ಎಂದು ರಕ್ಷಕರು ಕೇಳಿದಾಗ, "ನಾನು ನಂಬಿಕೆ ಕಳೆದುಕೊಂಡಿರಲಿಲ್ಲ" ಎಂದು ನಾಜೆರಾ ಭಾವುಕರಾಗಿ ಉತ್ತರಿಸಿದ್ದಾರೆ. ಅಚ್ಚರಿಯೆಂದರೆ 14 ದಿನಗಳ ಕಾಲ ಅವರು ಆಹಾರ ಮತ್ತು ನೀರಿಲ್ಲದೆ ಅಲ್ಲಿ ಕಳೆದು ಬಂದಿದ್ದರು.
ರೋಚಕ ರಕ್ಷಣೆ
ನಾಜೆರಾ ಪತ್ತೆಯಾದರೂ ತಕ್ಷಣ ಅವರನ್ನು ಹೊರಗೆ ತರಲು ಸಾಧ್ಯವಾಗಲಿಲ್ಲ. ಗಣಿಯ ಸುರಂಗದಲ್ಲಿ ಅತಿಯಾದ ನೀರು ತುಂಬಿದ್ದರಿಂದ ಮೊದಲು ಪಂಪ್‌ಗಳ ಮೂಲಕ ನೀರನ್ನು ಹೊರಹಾಕಲಾಯಿತು. ಸುಮಾರು 20 ಗಂಟೆಗಳ ಪರಿಶ್ರಮದ ನಂತರ ಅವರನ್ನು ಸುರಕ್ಷಿತವಾಗಿ ಹೊರತರಲಾಯಿತು. ಸದ್ಯ ಅವರನ್ನು ಹೆಲಿಕಾಪ್ಟರ್ ಮೂಲಕ ಆಸ್ಪತ್ರೆಗೆ ರವಾನಿಸಲಾಗಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಈ ಘಟನೆಯು ವಿಶ್ವದಾದ್ಯಂತ ಸುದ್ದಿಯಾಗಿದ್ದು, ನಾಜೆರಾ ಅವರ ಧೈರ್ಯ ಮತ್ತು ರಕ್ಷಣಾ ತಂಡದ ಛಲಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ,(ಏಜೆನ್ಸೀಸ್).