ಕುಖ್ಯಾತ ಡ್ರಗ್ ಕಾರ್ಟೆಲ್ ಮುಖ್ಯಸ್ಥ ಎಲ್ ಮೆಂಚೊ
El Mancho: ವಿಶ್ವದ ಮೋಸ್ಟ್ ವಾಂಟೆಡ್ ಮಾದಕ ವಸ್ತು ಕಳ್ಳಸಾಗಾಣಿಕೆದಾರ ಮತ್ತು ಮೆಕ್ಸಿಕೋದ ಕುಖ್ಯಾತ ಡ್ರಗ್ ಕಾರ್ಟೆಲ್ ಮುಖ್ಯಸ್ಥ ನೆಮೆಸಿಯೊ ಎಲ್ ಮೆಂಚೊ ಒಸೆಗುರಾನನ್ನು ಕೊಂದಿರುವುದಾಗಿ ಮೆಕ್ಸಿಕನ್ ಸೇನೆ ಭಾನುವಾರ(ಫೆ. 23) ಘೋಷಣೆ ಮಾಡಿದೆ.
ಎಲ್ ಮೆಂಚೊ ಎಂದು ಖ್ಯಾತನಾಗಿದ್ದ ನೆಮೆಸಿಯೊ ಒಸೆಗುರಾ ಮೆಕ್ಸಿಕೊದ ಅತ್ಯಂತ ಶಕ್ತಿಶಾಲಿ ಕಾರ್ಟೆಲ್‌ಗಳಲ್ಲಿ ಒಂದಾದ ಜಲಿಸ್ಕೊ ನ್ಯೂ ಜನರೇಷನ್ ಕಾರ್ಟೆಲ್‌ನ ನಾಯಕರಾಗಿದ್ದರು. ದೇಶದ ಅತ್ಯಂತ ಹಿಂಸಾತ್ಮಕ ಕ್ರಿಮಿನಲ್ ವ್ಯಕ್ತಿಗಳಲ್ಲಿ ಒಬ್ಬನಾಗಿದ್ದನು. ಅಮೆರಿಕ ಅವನ ತಲೆಗೆ $15 ಮಿಲಿಯನ್ ಬಹುಮಾನವನ್ನು ಘೋಷಣೆ ಮಾಡಿತ್ತು.
ಈ ಕುರಿತು ಮಾಹಿತಿ ನೀಡಿರುವ ಮೆಕ್ಸಿಕೋ ರಕ್ಷಣಾ ಸಚಿವಾಲಯ, ಭಾನುವಾರ ಜಲಿಸ್ಕೊ ರಾಜ್ಯದ ಟಪಲ್ಪಾ ಪಟ್ಟಣದಲ್ಲಿ ಮೆಕ್ಸಿಕನ್ ಸೇನೆ ಕಾರ್ಯಾಚರಣೆ ನಡೆಸಿದ್ದು, ಈ ವೇಳೆ ನಡೆದ ಘರ್ಷಣೆಯಲ್ಲಿ 59 ವರ್ಷದ ನಾಯಕ ಒಸೆಗುರಾಗೆ ಗುಂಡು ತಗುಲಿದೆ. ಅವನನ್ನು ಮೆಕ್ಸಿಕೋ ನಗರಕ್ಕೆ ಕರೆತರುವ ಸಮಯದಲ್ಲಿ ಸಾವನ್ನಪ್ಪಿದ್ದಾನೆ. ಇನ್ನೂ 6 ಜನ ಕಾರ್ಟೆಲ್ಗಳನ್ನು ಸೇನೆ ಗುಂಡಿನ ಚಕಮಕಿಯಲ್ಲಿ ಹತ್ಯೆ ಮಾಡಿದೆ. ಮೂವರು ಸೈನಿಕರಿಗೆ ಗಾಯಗಳಾಗಿವೆ ಎಂದು ಹೇಳಿದೆ.
ಇನ್ನೂ ಎಲ್ ಮಂಚೋ ಹತ್ಯೆ ಖಂಡಿಸಿ ಮೆಕ್ಸಿಕೊದ ಹಲವು ನಗರಗಳಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ದಾಳಿಗೆ ಪ್ರತೀಕಾರವಾಗಿ ಬಂದೂಕುಧಾರಿಗಳು ಪಶ್ಚಿಮ ಜಲಿಸ್ಕೊ ರಾಜ್ಯದಲ್ಲಿ ಕಾರುಗಳು ಮತ್ತು ಟ್ರಕ್‌ಗಳಿಗೆ ಬೆಂಕಿ ಹಚ್ಚಿದ್ದು, 20 ಕ್ಕೂ ಹೆಚ್ಚು ರಸ್ತೆಗಳನ್ನು ಬಂದ್ ಮಾಡಿದ್ದಾರೆ. ಇನ್ನೂ ಹಿಂಸಾಚಾರವು ಇತರ ರಾಜ್ಯಗಳಿಗೂ ಹರಡಿದೆ ಎನ್ನಲಾಗಿದೆ.
ಎಲ್ ಮಂಚೋ ಹತ್ಯೆಗೆ ಎಕ್ಸ್ನಲ್ಲಿ ಸೇನೆಯನ್ನು ಅಭಿನಂದಿಸಿರುವ ಮೆಕ್ಸಿಕೋದ ಅಧ್ಯಕ್ಷೆ ಕ್ಲೌಡಿಯಾ ಶೀನ್‌ಬಾಮ್, ಸಾರ್ವಜನಿಕರು ಶಾಂತವಾಗಿರಲು ಒತ್ತಾಯಿಸಿದ್ದಾರೆ. ಎಲ್ಲಾ ರಾಜ್ಯಗಳ ಸರ್ಕಾರಗಳೊಂದಿಗೆ ಸಮನ್ವಯ ಸಾಧಿಸಿದ್ದು, ದೇಶದ ಬಹುಪಾಲು ಪ್ರದೇಶದಲ್ಲಿ ಸಾಮಾನ್ಯ ಸ್ಥಿತಿಯಿದೆ ಎಂದು ಹೇಳಿದ್ದಾರೆ (ಏಜೆನ್ಸೀಸ್).