ಮೆಸ್ಸಿ-ರೊನಾಲ್ಡೊ ಜೆರ್ಸಿಗೆ ಮುಗಿಬಿದ್ದ ಫ್ಯಾನ್ಸ್
- ಫುಟ್ಬಾಲ್ ದಂತಕಥೆಗಳಾದ ಲಿಯೋನೆಲ್ ಮೆಸ್ಸಿ ಮತ್ತು ಕ್ರಿಸ್ಟಿಯಾನೊ ರೊನಾಲ್ಡೊ
- ಹರಾಜಿನಲ್ಲಿ ನಿಮ್ಮ ಹುಬ್ಬೇರಿಸುವ ಮೊತ್ತಕ್ಕೆ ದಿಗ್ಗಜರ ಜೆರ್ಸಿಗಳು ಮಾರಾಟ
- ಖರೀದಿಗೆ ನಾ ಮುಂದು ತಾ ಮುಂದು ಎಂದು ಮುಗಿಬಿದ್ದ ದಂತಕಥೆಗಳ ಅಭಿಮಾನಿಗಳು
Jersey Auction: ಫುಟ್‌ಬಾಲ್ ಲೋಕದ ದಂತಕಥೆಗಳಾದ ಲಿಯೋನೆಲ್ ಮೆಸ್ಸಿ ಮತ್ತು ಕ್ರಿಸ್ಟಿಯಾನೊ ರೊನಾಲ್ಡೊ ಯಾವ ಕ್ರೀಡಾ ಅಥವಾ ಫುಟ್ಬಾಲ್ ಪ್ರೇಮಿಗಳಿಗೆ ತಾನೇ ಗೊತ್ತಿಲ್ಲ ಹೇಳಿ? ಈ ಇಬ್ಬರು ಲೆಜೆಂಡ್ರಿ ಆಟಗಾರರನ್ನು ಮೈದಾನದಲ್ಲಿ ನೋಡುವುದೇ ಒಂದು ಹಬ್ಬ. ಇತ್ತೀಚೆಗಷ್ಟೇ ಮುಕ್ತಾಯಗೊಂಡ ಫಿಫಾ ವಿಶ್ವಕಪ್ ಟೂರ್ನಿ ಬಳಿಕ ತಮ್ಮ ವೃತ್ತಿಗೆ ಗುಡ್ಬೈ ಹೇಳಿದ ಈ ದಿಗ್ಗಜರ ಜೆರ್ಸಿಗಳು ಇದೀಗ ಹರಾಜಿನಲ್ಲಿ ನಿಮ್ಮ ಹುಬ್ಬೇರಿಸುವ ಮೊತ್ತಕ್ಕೆ ಮಾರಾಟವಾಗಿದೆ.
ಬಾರ್ಸಿಲೋನಾ ಪರ ಮೆಸ್ಸಿ ಧರಿಸಿದ್ದ ಜೆರ್ಸಿಯೊಂದು ಬರೋಬ್ಬರಿ 56.4 ಲಕ್ಷಕ್ಕೆ ಮಾರಾಟವಾದರೆ, ರೊನಾಲ್ಡೊ ಅವರ ಜೆರ್ಸಿ 9.05 ಲಕ್ಷ ರೂ.ಗೆ ಹರಾಜಾಗಿದೆ. ಒಂದೇ ಕೋಣೆಯಲ್ಲಿದ್ದ ಹಲವು ವರ್ಷಗಳಿಂದಿದ್ದ ಈ ಎರಡು ಜೆರ್ಸಿಗಳನ್ನು ಆ್ಯಕ್ಷನ್ನಲ್ಲಿ ಕೂಗಿದಾಗ, ಫುಟ್ಬಾಲ್ ಅಲ್ಲ, ದಂತಕಥೆಗಳ ಅಭಿಮಾನಿಗಳು ಖರೀದಿಗೆ ನಾ ಮುಂದು ತಾ ಮುಂದು ಎಂದು ಮುಗಿಬಿದ್ದರು. ಕಡೆಗೂ ದುಬಾರಿ ಹಣಕ್ಕೆ ಕೊಂಡುಕೊಂಡಿರುವುದು ಹೊಸ ದಾಖಲೆಯನ್ನು ನಿರ್ಮಿಸಿದೆ.
ಮೆಸ್ಸಿ ಜೆರ್ಸಿಗೆ ಸಿಕ್ಕಾಪಟ್ಟೆ ಡಿಮಾಂಡ್
ರೊನಾಲ್ಡೊಗೆ ಹೋಲಿಸಿದರೆ ಮೆಸ್ಸಿಯ ಜೆರ್ಸಿಯೇ ಮೂರು ಪಟ್ಟು ಹೆಚ್ಚು ಬೆಲೆಗೆ ಮಾರಾಟವಾಗಿದೆ. 2012ರಲ್ಲಿ ಬಾರ್ಸಿಲೋನಾ ತಂಡ ಓಲ್ಡ್ ಟ್ರಾಫರ್ಡ್‌ಗೆ ಭೇಟಿ ಕೊಡುವ ಮುನ್ನ, ಥಾರ್ನ್ಲಿ ಎಂಬುವವರು ತಮ್ಮ ಸ್ನೇಹಿತ ಬಾರ್ಸಿಲೋನಾ ಡಿಫೆಂಡರ್ ಗೆರಾರ್ಡ್ ಪಿಕ್‌ಗೆ ಮೆಸ್ಸಿಯ ಜೆರ್ಸಿಯನ್ನು ಕೊಡಿಸುವಂತೆ ಹೇಳಿದ್ದರು. ಪಂದ್ಯದ ನಂತರ, ಪಿಕ್ ವೈಯಕ್ತಿಕವಾಗಿ ಥಾರ್ನ್ಲಿಯನ್ನು ಬಾರ್ಸಿಲೋನಾ ಡ್ರೆಸ್ಸಿಂಗ್ ರೂಮ್ಗೆ ಕರೆದುಕೊಂಡು ಹೋದರು. ಆ ಸಮಯದಲ್ಲಿ, ಮೆಸ್ಸಿ ತಾವು ಧರಿಸಿದ್ದ ಜೆರ್ಸಿಯನ್ನು ತೆಗೆದು, ಅದರ ಮೇಲೆಯೇ ಸಹಿ ಮಾಡಿ ಥಾರ್ನ್ಲಿ ಕೈಗೆ ಕೊಟರು. ಮೆಸ್ಸಿ ಸಹಿ ಮತ್ತು ಅವರು ಧರಿಸಿದ್ದ ಜೆರ್ಸಿ ಎರಡನ್ನೂ ಗಮನಿಸಿದ ಮಂದಿ, ಬಿಡ್ಡಿಂಗ್ನಲ್ಲಿ ದುಬಾರಿ ಹಣವನ್ನೇ ಸುರಿದಿದ್ದಾರೆ.
ಮತ್ತೊಂದೆಡೆ, ರೊನಾಲ್ಡೊ ಅವರ ಜೆರ್ಸಿಯನ್ನು 2014-15ರ ಸೀಸನ್ ರಿಯಲ್ ಮ್ಯಾಡ್ರಿಡ್ ಪಂದ್ಯಕ್ಕಾಗಿ ರೆಡಿ ಮಾಡಲಾಗಿತ್ತು, ಆದರೆ, ಅವರು ಪಂದ್ಯದಲ್ಲಿ ಅದನ್ನು ಧರಿಸಲೇ ಇಲ್ಲ. ಸಂದರ್ಶನವೊಂದರಲ್ಲಿ ಅದನ್ನು ಥಾರ್ನ್ಲಿ ಅವರಿಗೆ ಸಂದೇಶದೊಂದಿಗೆ ಸಹಿ ಮಾಡಿಕೊಟ್ಟಿದ್ದರು. ರೊನೊಲ್ಡೊ ಅದನ್ನು ಧರಿಸಿಯೇ ಇಲ್ಲ ಎಂಬ ಬೇಸರವಿದ್ದ ಕಾರಣ, ಅಭಿಮಾನಿಗಳು ಅದನ್ನು ಆದಷ್ಟು ಕಡಿಮೆ ಬೆಲೆಗೆ ಕೊಳ್ಳಲು ಬಿಡ್ಡಿಂಗ್ ನಡೆಸಿದರು. ಈ ಹರಾಜಿನಲ್ಲಿ ಮ್ಯಾಂಚೆಸ್ಟರ್ ಯುನೈಟೆಡ್ ಲೆಜೆಂಡ್ಸ್‌ನ ಜೆರ್ಸಿಗಳು ಸಹ ಉತ್ತಮ ಬೆಲೆಗಳಿಗೆ ಸೇಲ್ ಆಗಿವೆ.
2002ರ ಚಾಂಪಿಯನ್ಸ್ ಲೀಗ್ ಪಂದ್ಯದ ರಯಾನ್ ಗಿಗ್ಸ್ ಅವರ ಜೆರ್ಸಿ 8.62 ಲಕ್ಷ ರೂ., ಪಾಲ್ ಸ್ಕೋಲ್ಸ್ ಜೆರ್ಸಿ 3.91 ಲಕ್ಷ ರೂ., ಡೇವಿಡ್ ಬೆಕ್‌ಹ್ಯಾಮ್ ಜೆರ್ಸಿ 3.32 ಲಕ್ಷ ರೂ.ಗೆ ಮಾರಾಟವಾಯಿತು. ಇನ್ನು, ನಿಕಿ ಬಟ್ ಅವರ ಜೆರ್ಸಿ 2.32 ಲಕ್ಷ ರೂ.ಗೆ ಮತ್ತು ಗ್ಯಾರಿ ನೆವಿಲ್ಲೆ ಅವರ ಜೆರ್ಸಿಯನ್ನು 1.50 ಲಕ್ಷ ರೂ.ಗೆ ಸೇಲ್ ಮಾಡಲಾಯಿತು. ಇದೆಲ್ಲದರ ಮಧ್ಯೆ, ಮೆಸ್ಸಿ ಮತ್ತು ರೊನೊಲ್ಡೊಗೆ ಇರುವ ಕ್ರೇಜ್ ಮಾತ್ರ ನಿಜಕ್ಕೂ ಬಲು ಜೋರಾಗಿದೆ ಎಂಬುದರಲ್ಲಿ ಅನುಮಾನವೇ ಇಲ್ಲ,(ಏಜೆನ್ಸೀಸ್).