ಜೋಹಾನ್ಸ್‌ಬರ್ಗ್: ಆಟವಾಡಲು ಹೋದ ಮಗು ಅಚಾನಕ್ಕಾಗಿ ಎಡವಿ ಬಿದ್ದಾಗ ಸಿಕ್ಕ ಕಲ್ಲು, ಇಂದು ಮಾನವ ಕುಲದ ವಿಕಾಸದ ಇತಿಹಾಸವನ್ನೇ ಬದಲಿಸಿದೆ. ತನ್ನ ಸಾಕು ನಾಯಿಯ ಹಿಂದೆ ಓಡುತ್ತಿದ್ದ 9 ವರ್ಷದ ಬಾಲಕ ಮ್ಯಾಥ್ಯೂ ಬರ್ಗರ್ (Matt Berger ), ಅಕಸ್ಮಾತಾಗಿ ಸುಮಾರು 20 ಲಕ್ಷ ವರ್ಷಗಳ ಹಿಂದಿನ ಮಾನವ ಪೂರ್ವಜರ ಪಳೆಯುಳಿಕೆಯನ್ನು ಪತ್ತೆಹಚ್ಚುವ ಮೂಲಕ ಜಗತ್ತನ್ನು ಬೆರಗುಗೊಳಿಸಿದ್ದಾನೆ.
ಹೌದು, ಈ ಘಟನೆ ನಡೆದದ್ದು 2008ರಲ್ಲಿ. ಅಂದು ಒಂಬತ್ತು ವರ್ಷದ ಮ್ಯಾಟ್ ಬರ್ಗರ್ ತನ್ನ ತಂದೆ ಲೀ ಬರ್ಗರ್ ಅವರೊಂದಿಗೆ ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್ ಸಮೀಪದ 'ಮಲಾಪಾ' ಗುಹೆಯ ಪ್ರದೇಶಕ್ಕೆ ಹೋಗಿದ್ದನು. ಲೀ ಬರ್ಗರ್ ಅವರು ಪ್ರಸಿದ್ಧ ಪಳೆಯುಳಿಕೆ ತಜ್ಞರಾಗಿದ್ದು (Paleoanthropologist), ಮಾನವ ಪೂರ್ವಜರ ಕುರಿತು ದಶಕಗಳಿಂದ ಸಂಶೋಧನೆ ನಡೆಸುತ್ತಿದ್ದರು. ಆದರೆ 2000ರ ದಶಕದ ಆರಂಭದಲ್ಲಿ ಅವರು ವೃತ್ತಿಜೀವನದಲ್ಲಿ ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿದ್ದರು.
ಆ ದಿನ ಮ್ಯಾಟ್ ತನ್ನ ಸಾಕು ನಾಯಿಯೊಂದಿಗೆ ಆಟವಾಡುತ್ತಾ ಮುಖ್ಯ ಗುಹೆಯಿಂದ ಸ್ವಲ್ಪ ದೂರ ಸಾಗಿದ್ದನು. ನಾಯಿಯನ್ನು ಹಿಂಬಾಲಿಸುತ್ತಿದ್ದ ಮ್ಯಾಟ್, ದಾರಿಯಲ್ಲಿದ್ದ ಮರದ ದಿಮ್ಮಿಗೆ ತಾಗಿ ಎಡವಿ ಬಿದ್ದನು. ಕೆಳಗೆ ಬಿದ್ದವನು ಧೂಳು ಕೊಡವಿಕೊಂಡು ಏಳುವಾಗ, ಅಲ್ಲಿದ್ದ ಕಲ್ಲಿನ ಮೇಲೆ ಮೂಳೆಯಂತಹ ಆಕೃತಿಯೊಂದು ಚಾಚಿಕೊಂಡಿರುವುದನ್ನು ಗಮನಿಸಿದನು.
ಅಪ್ಪನಿಗೆ ಮಗ ನೀಡಿದ ಅಚ್ಚರಿಯ ಉಡುಗೊರೆ
ಮ್ಯಾಟ್ ಕೂಡಲೇ ತನ್ನ ತಂದೆಯನ್ನು ಕೂಗಿ ಕರೆದನು. ಅಲ್ಲಿಗೆ ಬಂದ ಲೀ ಬರ್ಗರ್ ಆ ಕಲ್ಲನ್ನು ನೋಡಿದ ತಕ್ಷಣ ಸ್ತಬ್ಧರಾದರು. ಅದು ಮಾನವ ಪೂರ್ವಜರ ಪಂಗಡಕ್ಕೆ ಸೇರಿದ 'ಹೋಮಿನಿಡ್' ಅಸ್ಥಿಪಂಜರದ ಕೊರಳುಮೂಳೆಯಾಗಿತ್ತು (Collarbone). ಆ ಕಲ್ಲನ್ನು ಮಗುಚಿ ನೋಡಿದಾಗ ಅವರಿಗೆ ಮತ್ತಷ್ಟು ಅಚ್ಚರಿ ಕಾದಿತ್ತು; ಅಲ್ಲಿ ಹಲ್ಲುಗಳಿರುವ ಕೆಳದವಡೆಯ ಭಾಗವೂ ಇತ್ತು. ಒಂದೇ ಬಂಡೆಯಲ್ಲಿ ಎರಡು ಪ್ರಮುಖ ಭಾಗಗಳು ಸಿಕ್ಕಿರುವುದು ವಿರಳಾತಿ ವಿರಳ ವಿದ್ಯಮಾನವಾಗಿತ್ತು.
ಸಂಶೋಧನೆಯ ನಂತರ ಈ ಪಳೆಯುಳಿಕೆಯು ಈವರೆಗೆ ಜಗತ್ತಿಗೆ ತಿಳಿಯದಿದ್ದ ಹೊಸ ಪ್ರಭೇದಕ್ಕೆ ಸೇರಿದ್ದೆಂದು ತಿಳಿದುಬಂದಿತು. ವಿಜ್ಞಾನಿಗಳು ಇದಕ್ಕೆ 'ಆಸ್ಟ್ರಲೋಪಿಥೆಕಸ್ ಸೆಡಿಬಾ' (Australopithecus sediba) ಎಂದು ಹೆಸರಿಟ್ಟರು. ಈ ಪ್ರಭೇದವು ಸುಮಾರು 1.98 ಮಿಲಿಯನ್ (20 ಲಕ್ಷ) ವರ್ಷಗಳ ಹಿಂದೆ ಜೀವಿಸಿತ್ತು ಎಂದು ಅಂದಾಜಿಸಲಾಗಿದೆ. ಕೆಲವು ವಿಜ್ಞಾನಿಗಳ ಪ್ರಕಾರ, ಇದು ಆಧುನಿಕ ಮಾನವರ ನೇರ ಪೂರ್ವಜ ತಳಿಯಾಗಿರುವ ಸಾಧ್ಯತೆಯಿದೆ.
ಮಾನವ ಇತಿಹಾಸದ ಮಹತ್ವದ ಆವಿಷ್ಕಾರ
ದಕ್ಷಿಣ ಆಫ್ರಿಕಾದ ಈ ಭಾಗವನ್ನು 'ಮಾನವಕುಲದ ತೊಟ್ಟಿಲು' (Cradle of Humankind) ಎಂದು ಕರೆಯಲಾಗುತ್ತದೆ. ಅಂದು ಆ ಒಂಬತ್ತು ವರ್ಷದ ಬಾಲಕನ ಕುತೂಹಲದಿಂದ ಇಡೀ ದಶಕದ ಅತ್ಯಂತ ಮಹತ್ವದ ಸಂಶೋಧನೆ ಸಾಧ್ಯವಾಯಿತು. ಮ್ಯಾಟ್ ಬರ್ಗರ್ ಅಂದು ಆಟದ ಭರದಲ್ಲಿ ಎಡವಿ ಬೀಳದಿದ್ದರೆ, ಬಹುಶಃ ಮಾನವ ವಿಕಾಸದ ಈ ಪ್ರಮುಖ ಕೊಂಡಿ ಇಂದಿಗೂ ಮಣ್ಣಿನ ಅಡಿಯಲ್ಲೇ ಹೂತು ಹೋಗಿರುತ್ತಿತ್ತು,(ಏಜೆನ್ಸೀಸ್).