ಇಸ್ಲಾಮಾಬಾದ್: ವೈದ್ಯಕೀಯ ಲೋಕವೇ ತಲೆತಗ್ಗಿಸುವಂತಹ ಘಟನೆಯೊಂದು ಪಾಕಿಸ್ತಾನದಲ್ಲಿ ನಡೆದಿದೆ. ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿಗಳ ಬೇಜವಾಬ್ದಾರಿಯಿಂದಾಗಿ(Medical Negligence) ಬರೋಬ್ಬರಿ 331 ಅಮಾಯಕ ಮಕ್ಕಳಿಗೆ ಹೆಚ್‌ಐವಿ (HIV) ಸೋಂಕು ತಗುಲಿದೆ!
ಹೌದು, ಬಳಸಿದ ಸಿರಿಂಜ್‌ಗಳನ್ನೇ ಮತ್ತೆ ಮತ್ತೆ ಬಳಸಿದ ಪರಿಣಾಮ, ಆಸ್ಪತ್ರೆಗೆ ಚಿಕಿತ್ಸೆಗೆಂದು ಬಂದಿದ್ದ ಮಕ್ಕಳು ಈಗ ಜೀವಮಾನವಿಡೀ ಮಾರಕ ರೋಗದೊಂದಿಗೆ ಹೋರಾಡುವಂತಾಗಿದೆ. ಬಿಬಿಸಿ (BBC) ನಡೆಸಿದ ಗುಪ್ತಚರ ತನಿಖೆಯಲ್ಲಿ ಈ ಭೀಕರ ಸತ್ಯ ಬಯಲಾಗಿದೆ.
ರಹಸ್ಯ ಕ್ಯಾಮೆರಾದಲ್ಲಿ ಸೆರೆಯಾಯ್ತು ಅಸಲಿ ಮುಖ!
ಪಾಕಿಸ್ತಾನದ ತೌನ್ಸಾದಲ್ಲಿರುವ ಟಿಹೆಚ್‌ಕ್ಯೂ (THQ) ಸರ್ಕಾರಿ ಆಸ್ಪತ್ರೆಯಲ್ಲಿ ಈ ಅವಾಂತರ ನಡೆದಿದೆ. ಬಿಬಿಸಿ ತಂಡವು ಸತತ 32 ಗಂಟೆಗಳ ಕಾಲ ಆಸ್ಪತ್ರೆಯ ಒಳಗಡೆ ರಹಸ್ಯ ಕ್ಯಾಮೆರಾಗಳನ್ನು ಇರಿಸಿ ತನಿಖೆ ನಡೆಸಿತ್ತು. ಈ ವೇಳೆ ನರ್ಸ್‌ಗಳು ಮತ್ತು ವೈದ್ಯಕೀಯ ಸಿಬ್ಬಂದಿಗಳು ಇಂಜೆಕ್ಷನ್ ನೀಡುವಾಗ ಬೇಸಿಕ್ ಹೈಜಿನ್ ನಿಯಮಗಳನ್ನು ಗಾಳಿಗೆ ತೂರಿರುವುದು ಕಂಡುಬಂದಿದೆ.
ಒಬ್ಬ ರೋಗಿಗೆ ಬಳಸಿದ ಸಿರಿಂಜ್ ಅನ್ನು ಸರಿಯಾಗಿ ವಿಲೇವಾರಿ ಮಾಡದೆ, ಅದರಲ್ಲಿ ಉಳಿದಿರುವ ಔಷಧಿ ದ್ರವವನ್ನೇ ಮತ್ತೊಬ್ಬ ಮಗುವಿಗೆ ಚುಚ್ಚುತ್ತಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ದಾಖಲಾಗಿದೆ. ಗ್ಲೌಸ್ ಧರಿಸದೆ ಇಂಜೆಕ್ಷನ್ ನೀಡುವುದು ಮತ್ತು ವೈದ್ಯಕೀಯ ತ್ಯಾಜ್ಯವನ್ನು ಬೇಕಾಬಿಟ್ಟಿ ಎಸೆಯುತ್ತಿರುವುದು ಕೂಡ ಬೆಳಕಿಗೆ ಬಂದಿದೆ.
331 ಮಕ್ಕಳ ಬದುಕು ಅಯೋಮಯ
2024ರ ನವೆಂಬರ್‌ನಿಂದ 2025ರ ಅಕ್ಟೋಬರ್‌ವರೆಗೆ ನಡೆಸಲಾದ ಸ್ಕ್ರೀನಿಂಗ್ ಮತ್ತು ಪೊಲೀಸ್ ದಾಖಲೆಗಳ ಪ್ರಕಾರ, ಈ ಭಾಗದಲ್ಲಿ ಕನಿಷ್ಠ 331 ಮಕ್ಕಳು ಹೆಚ್‌ಐವಿ ಪಾಸಿಟಿವ್ ಆಗಿದ್ದಾರೆ. ಸಾಮಾನ್ಯವಾಗಿ ತಾಯಿಯಿಂದ ಮಕ್ಕಳಿಗೆ ಹೆಚ್‌ಐವಿ ಹರಡುವ ಸಾಧ್ಯತೆ ಇರುತ್ತದೆ. ಆದರೆ ಇಲ್ಲಿ 97 ಕುಟುಂಬಗಳನ್ನು ಪರೀಕ್ಷಿಸಿದಾಗ ಕೇವಲ ನಾಲ್ವರು ತಾಯಂದಿರಲ್ಲಿ ಮಾತ್ರ ಸೋಂಕು ಇರುವುದು ಪತ್ತೆಯಾಗಿದೆ. ಅಂದರೆ ಬಾಕಿ ಉಳಿದ ಬಹುತೇಕ ಮಕ್ಕಳಿಗೆ ಆಸ್ಪತ್ರೆಯ ಅಸುರಕ್ಷಿತ ಇಂಜೆಕ್ಷನ್‌ಗಳೇ ಸೋಂಕು ಹರಡಲು ಪ್ರಮುಖ ಕಾರಣ ಎಂಬುದು ದೃಢಪಟ್ಟಿದೆ.
ಎಂಟು ವರ್ಷದ ಬಾಲಕ ಬಲಿ
ಈ ಭಯಾನಕ ಘಟನೆಗೆ ಎಂಟು ವರ್ಷದ ಮೊಹಮ್ಮದ್ ಅಮಿನ್ ಎಂಬ ಬಾಲಕ ಈಗಾಗಲೇ ಬಲಿಯಾಗಿದ್ದಾನೆ. "ತನ್ನ ಮಗ ಸಾಯುವ ಮುನ್ನ ವಿಪರೀತ ಜ್ವರ ಮತ್ತು ನೋವಿನಿಂದ ನರಳುತ್ತಿದ್ದ" ಎಂದು ತಾಯಿ ಕಣ್ಣೀರು ಹಾಕಿದ್ದಾರೆ. ಅಮಿನ್ ಸಾವನ್ನಪ್ಪಿದ ಬೆನ್ನಲ್ಲೇ ಆತನ ಸಹೋದರಿ ಅಸ್ಮಾಗೂ ಕೂಡ ಹೆಚ್‌ಐವಿ ಸೋಂಕು ತಗುಲಿರುವುದು ಕುಟುಂಬವನ್ನು ಕಂಗೆಡಿಸಿದೆ. ಸಣ್ಣಪುಟ್ಟ ಜ್ವರಕ್ಕೆಂದು ಆಸ್ಪತ್ರೆಗೆ ತೋರಿಸಲು ಹೋದಾಗ ಇಂಜೆಕ್ಷನ್ ಮೂಲಕ ಈ ರೋಗ ತಗುಲಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ತಪ್ಪೊಪ್ಪಿಕೊಳ್ಳದ ಅಧಿಕಾರಿಗಳು!
ಇಷ್ಟೆಲ್ಲಾ ಸಾಕ್ಷ್ಯಗಳು ಕಣ್ಣಮುಂದಿದ್ದರೂ ಆಸ್ಪತ್ರೆಯ ಅಧಿಕಾರಿಗಳು ಮಾತ್ರ ನಮಗೂ ಇದಕ್ಕೂ ಸಂಬಂಧವಿಲ್ಲ ಎನ್ನುತ್ತಿದ್ದಾರೆ. ಹೊಸದಾಗಿ ನೇಮಕಗೊಂಡಿರುವ ಸೂಪರಿಂಟೆಂಡೆಂಟ್ ಡಾ. ಕಾಸಿಮ್ ಬುಜ್ದಾರ್, "ಈ ವಿಡಿಯೋ ಹಳೆಯದಿರಬಹುದು ಅಥವಾ ಫ್ಯಾಬ್ರಿಕೇಟೆಡ್ ಆಗಿರಬಹುದು" ಎಂದು ಸಮರ್ಥಿಸಿಕೊಳ್ಳುತ್ತಿದ್ದಾರೆ. ಆದರೆ ಈ ಹಿಂದೆ ಮಾರ್ಚ್ 2025ರಲ್ಲಿ ಅಸುರಕ್ಷಿತ ಪದ್ಧತಿಗಳ ಕಾರಣಕ್ಕೆ ಹಳೆಯ ಸೂಪರಿಂಟೆಂಡೆಂಟ್ ಅನ್ನು ಅಮಾನತುಗೊಳಿಸಲಾಗಿತ್ತು. ಆದರೂ ಆಸ್ಪತ್ರೆಯಲ್ಲಿ ಯಾವುದೇ ಸುಧಾರಣೆ ಕಂಡಿಲ್ಲ ಎಂಬುದು ತನಿಖೆಯಿಂದ ಸಾಬೀತಾಗಿದೆ,(ಏಜೆನ್ಸೀಸ್).