ಚೀನಾದಲ್ಲಿ ಕಾರು ತಯಾರಿಕಾ ಕಂಪನಿಯಲ್ಲಿ ಭಾರಿ ಅಗ್ನಿ ದುರಂತ
- ಚೀನಾದಲ್ಲಿ ಕಾರು ತಯಾರಿಕಾ ಕಂಪನಿಯಲ್ಲಿ ಭಾರಿ ಅಗ್ನಿ ದುರಂತ
- ಹೊತ್ತಿ ಉರಿದ BYD ಕಂಪನಿ ಕಾರುಗಳು
- ಹೊಸ ಕಾರುಗಳಿಗೆ ಯಾವುದೇ ತೊಂದರೆಯಾಗಿಲ್ಲ ಎಂದ ಕಂಪನಿ
ಚೀನಾ/ ಶೆನ್ಜೆನ್: ವಿಶ್ವದ ಅತಿದೊಡ್ಡ ಎಲೆಕ್ಟ್ರಿಕ್ ವಾಹನ ತಯಾರಿಕಾ ಸಂಸ್ಥೆಗಳಲ್ಲಿ ಒಂದಾದ BYD ಕಂಪನಿಯ ಚೀನಾದ ಪ್ರಧಾನ ಕಚೇರಿಯ ಆವರಣದಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದೆ. ಶೆನ್ಜೆನ್‌ನ ಪಿಂಗ್‌ಶಾನ್ ಜಿಲ್ಲೆಯಲ್ಲಿರುವ BYD (Fire Accident in BYD) ಉತ್ಪಾದನಾ ಸಂಕೀರ್ಣದ ಬಹುಮಹಡಿ ಪಾರ್ಕಿಂಗ್ ಗ್ಯಾರೇಜ್‌ನಲ್ಲಿ ಹಠಾತ್ ಬೆಂಕಿ ಕಾಣಿಸಿಕೊಂಡಿದ್ದು, ನೋಡನೋಡುತ್ತಿದ್ದಂತೆ ಇಡೀ ಕಟ್ಟಡವನ್ನು ಜ್ವಾಲೆ ಆವರಿಸಿಕೊಂಡಿದೆ.
ಬೆಂಕಿಯ ತೀವ್ರತೆ ಎಷ್ಟಿತ್ತೆಂದರೆ, ಕಿಲೋಮೀಟರ್‌ಗಟ್ಟಲೆ ದೂರದವರೆಗೆ ಕಪ್ಪು ಹೊಗೆಯ ದಟ್ಟ ಮೋಡಗಳು ಆಕಾಶದಲ್ಲಿ ಕಾಣಿಸುತ್ತಿದ್ದವು. ತಕ್ಷಣ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಅದೃಷ್ಟವಶಾತ್, ಈ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.
ಹೊಸ ಕಾರುಗಳಿಗೆ ಯಾವುದೇ ಅಪಾಯವಾಗಿಲ್ಲ!
ಸಾಮಾನ್ಯವಾಗಿ ಇಂತಹ ಘಟನೆ ನಡೆದಾಗ ಹೊಸ ಎಲೆಕ್ಟ್ರಿಕ್ ಕಾರುಗಳು ಸುಟ್ಟುಹೋದವು ಎಂಬ ಸುದ್ದಿ ಹಬ್ಬುವುದು ಸಹಜ. ಆದರೆ, ಈ ಬಗ್ಗೆ ಸ್ಪಷ್ಟನೆ ನೀಡಿರುವ BYD ಅಧಿಕಾರಿಗಳು, ಬೆಂಕಿ ಬಿದ್ದ ಗ್ಯಾರೇಜ್‌ನಲ್ಲಿ ಹೊಸ ಕಾರುಗಳಿರಲಿಲ್ಲ ಎಂದು ತಿಳಿಸಿದ್ದಾರೆ. ಈ ಪಾರ್ಕಿಂಗ್ನಲ್ಲಿ ಕೇವಲ ಪರೀಕ್ಷಾರ್ಥ ವಾಹನಗಳು (Testing Cars) ಮತ್ತು ಸ್ಕ್ರ್ಯಾಪ್ ಮಾಡಿದ (ಹಳೆಯ) ಗಾಡಿಗಳನ್ನು ಇಡಲು ಮಾತ್ರ ಬಳಸಲಾಗುತ್ತಿತ್ತು. ಹೀಗಾಗಿ, ಕಂಪನಿಯ ಉತ್ಪಾದನಾ ವಿಭಾಗಕ್ಕಾಗಲಿ ಅಥವಾ ಗ್ರಾಹಕರಿಗೆ ವಿತರಣೆಯಾಗಬೇಕಿದ್ದ ಹೊಸ ವಾಹನಗಳಿಗಾಗಲಿ ಯಾವುದೇ ಹಾನಿಯಾಗಿಲ್ಲ ಎಂದು ಕಂಪನಿ ಸ್ಪಷ್ಟಪಡಿಸಿದೆ.
ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್
ಬೆಂಕಿ ಕಾಣಿಸಿಕೊಂಡ ಕೂಡಲೇ ಸುತ್ತಮುತ್ತಲಿದ್ದ ಜನರು ಮೊಬೈಲ್‌ನಲ್ಲಿ ವಿಡಿಯೋ ಚಿತ್ರೀಕರಿಸಿದ್ದು, ಈಗ ಅವು ಇಂಟರ್ನೆಟ್‌ನಲ್ಲಿ ಸಖತ್ ಸದ್ದು ಮಾಡುತ್ತಿವೆ. ಬಹುಮಹಡಿ ಕಟ್ಟಡದ ಪ್ರತಿಯೊಂದು ಹಂತದಲ್ಲೂ ಬೆಂಕಿ ಉರಿಯುತ್ತಿರುವುದು ಮತ್ತು ದಟ್ಟ ಹೊಗೆಯ ನಡುವೆ ಅಗ್ನಿಶಾಮಕ ವಾಹನಗಳು ಸೈರನ್ ಹಾಕುತ್ತಾ ಸ್ಥಳಕ್ಕೆ ಧಾವಿಸುತ್ತಿರುವ ದೃಶ್ಯಗಳು ಎದೆಝಲ್ಲೆನಿಸುವಂತಿವೆ.
ದುರಂತಕ್ಕೆ ಕಾರಣವೇನು?
ಪ್ರಾಥಮಿಕ ತನಿಖೆಯ ಪ್ರಕಾರ, ಈ ಬೆಂಕಿ ಅವಘಡಕ್ಕೆ ಎಲೆಕ್ಟ್ರಿಕ್ ಕಾರಿನ ಬ್ಯಾಟರಿ ದೋಷ ಕಾರಣವಲ್ಲ ಎಂದು ತಿಳಿದು ಬಂದಿದೆ. ಚೀನಾ ಮಾಧ್ಯಮಗಳ ವರದಿಯ ಪ್ರಕಾರ, ಕಟ್ಟಡದ ಹೊರಭಾಗದಲ್ಲಿ ನಡೆಯುತ್ತಿದ್ದ ಅಸಮರ್ಪಕ ನಿರ್ಮಾಣ ಕಾರ್ಯದ (Construction Work) ವೇಳೆ ಉಂಟಾದ ತಪ್ಪುಗಳಿಂದ ಈ ಬೆಂಕಿ ಹೊತ್ತಿಕೊಂಡಿದೆ ಎನ್ನಲಾಗಿದೆ. ಬ್ಯಾಟರಿ ಸುರಕ್ಷತೆಯ ಬಗ್ಗೆ ಜಾಗತಿಕವಾಗಿ ಚರ್ಚೆ ನಡೆಯುತ್ತಿರುವ ಈ ಸಮಯದಲ್ಲಿ, ಇದು ವಾಹನ ತಯಾರಿಕಾ ದೋಷವಲ್ಲ ಎಂದು ಕಂಪನಿ ಸ್ಪಷ್ಟನೆ ನೀಡಿದೆ.
ಕಾರು ತಯಾರಿಕೆಗೆ ತೊಂದರೆಯಿಲ್ಲ
ಒಂದೆಡೆ ಈ ಅಗ್ನಿ ಅವಘಡ ಸಂಭವಿಸಿದ್ದರೂ, BYD ತನ್ನ ವಿಸ್ತರಣೆಯ ವೇಗವನ್ನು ಕುಗ್ಗಿಸಿಲ್ಲ. ಇತ್ತೀಚೆಗಷ್ಟೇ ಚೀನಾದಾದ್ಯಂತ 5,000 ಫ್ಲ್ಯಾಶ್ ಚಾರ್ಜಿಂಗ್ ಸ್ಟೇಷನ್‌ಗಳನ್ನು ಸ್ಥಾಪಿಸಿರುವ ಕಂಪನಿ, ಜಾಗತಿಕ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಯಲ್ಲಿ ತನ್ನ ಪಾರುಪತ್ಯ ಮುಂದುವರಿಸಿದೆ. ಈ ಬೆಂಕಿ ಘಟನೆಯಿಂದ ಪಿಂಗ್‌ಶಾನ್ ಸ್ಥಾವರದ ದೈನಂದಿನ ಉತ್ಪಾದನೆಗೆ ಯಾವುದೇ ಅಡ್ಡಿಯಾಗಿಲ್ಲ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ,(ಏಜನ್ಸೀಸ್).