ಹೊತ್ತಿಉರಿಯುತ್ತಿರುವ ಶಾಪಿಂಗ್​ ಮಾಲ್​ 
ವಿದೇಶ

ಕರಾಚಿ ಶಾಪಿಂಗ್ ಮಾಲ್‌ನಲ್ಲಿ ಭೀಕರ ಅಗ್ನಿ ದುರಂತ: ಸತ್ತವರ ಸಂಖ್ಯೆ 14 ಕ್ಕೆ ಏರಿಕೆ | Shopping Mall

ಪ್ರಮುಖ ಮುಖ್ಯಾಂಶಗಳು

  • ಪಾಕಿಸ್ತಾನದ ‘ಕರಾಚಿಯಲ್ಲಿನ ಶಾಪಿಂಗ್​ ಮಾಲ್​ನಲ್ಲಿ ಕಾಣಿಸಿಕೊಂಡ ಬೆಂಕಿ
  • ಅವಘಡದಲ್ಲಿ ಸಾವನ್ನಪ್ಪಿದವರ ಸಂಖ್ಯೆ 14 ಕ್ಕೆ ಏರಿಕೆ
  • ಇನ್ನೂ 70 ಜನ ಸಿಲುಕಿರುವ ಶಂಕೆ
ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿರುವ ಶಾಪಿಂಗ್ ಮಾಲ್‌(Shopping Mall)ನಲ್ಲಿ ಸಂಭವಿಸಿದ ಭೀಕರ ಬೆಂಕಿ ಅವಘಡ ಸಂಭವಿಸಿದ್ದು, ಇಲ್ಲಿಯವರೆಗೆ ಸಾವನ್ನಪ್ಪಿದವರ ಸಂಖ್ಯೆ 14 ಕ್ಕೆ ಏರಿದೆ.
ಶನಿವಾರ (ಜ.17) ರಾತ್ರಿ ಗುಲ್ ಪ್ಲಾಜಾದಲ್ಲಿ ಸಂಭವಿಸಿದ್ದ ಅವಘಡದಲ್ಲಿ ನೆಲಮಾಳಿಗೆ ಇಂದ ಮೂರು ಮಹಡಿಗಳವರೆಗೆ ಬೆಂಕಿ ಹೊತ್ತಿಕೊಂಡಿತ್ತು.ಭಾನುವಾರ (ಜ.18) ರಾತ್ರಿಯ ವೇಳೆಗೆ ನಿಯಂತ್ರಣಕ್ಕೆ ತರಲಾಯಿತು.

ಆರು ಶವಗಳು ತಕ್ಷಣವೇ ಪತ್ತೆ

ಬೆಂಕಿ ಹೊತ್ತಿಕೊಂಡ ತಕ್ಷಣ ಆರು ಶವಗಳು ಪತ್ತೆಯಾಗಿದ್ದು, ಉಸಿರುಗಟ್ಟುವಿಕೆಯಿಂದ ಸಾವು ಸಂಭವಿಸಿದ್ದು, ಹತ್ತಾರು ಗಾಯಾಳುಗಳನ್ನು ಆಸ್ಪತ್ರೆಗಳಿಗೆ ಕಳುಹಿಸಲಾಯಿತು. ಬೆಂಕಿಯ ತೀವ್ರತೆ ಹೆಚ್ಚಿದ್ದ ಕಾರಣ ರಕ್ಷಣಾ ತಂಡಗಳು ಒಳಗೆ ಹೋಗಲು ಸಾಧ್ಯವಾಗಲಿಲ್ಲ.
ಬೆಂಕಿಯನ್ನು ನಂದಿಸಿದ ನಂತರ, ಸಿಲುಕಿಕೊಂಡಿದ್ದ ಜನರನ್ನು ರಕ್ಷಿಸಲು ಹೋದಾಗ ಎಂಟು ಶವಗಳು ಕಂಡುಬಂದಿದ್ದು, ಕೆಲವು ತೀವ್ರವಾಗಿ ಸುಟ್ಟುಹೋಗಿವೆ ಎಂದು ಮುಖ್ಯ ಕಾರ್ಯಾಚರಣಾ ಅಧಿಕಾರಿ ಅಬಿದ್ ಜಲಾಲ್ ಹೇಳಿದ್ದಾರೆ. ಬೆಂಕಿಯು ಕಟ್ಟಡವನ್ನು ಸಂಪೂರ್ಣವಾಗಿ ಹಾನಿಗೊಳಿಸಿದೆ ಮತ್ತು ಕಟ್ಟಡದ ಒಂದು ಭಾಗವು ಕುಸಿದಿದೆ ಎಂದು ಹೇಳಿದರು. ನಾವು ಇನ್ನೂ ಉಳಿದಿರುವ ಜನರಿಗಾಗಿ ಹುಡುಕಾಟವನ್ನು ಮುಂದುವರಿಸಿದ್ದೇವೆ ಎಂದು ಜಲಾಲ್ ಹೇಳಿದರು.

70 ಜನರು ಇನ್ನೂ ಕಟ್ಟಡದೊಳಗೆ ಸಿಲುಕಿಕೊಂಡಿದ್ದಾರೆ

ಸೋಮವಾರ (ಜ.19) ಬೆಳಿಗ್ಗೆ ಸ್ಥಳಕ್ಕೆ ಬಂದ ಸಿಂಧ್ ಗವರ್ನರ್ ಕಮ್ರಾನ್ ಟೆಸ್ಸೋರಿ, ಕಟ್ಟಡದೊಳಗೆ ಇನ್ನೂ 70 ಜನರು ಸಿಲುಕಿಕೊಂಡಿದ್ದಾರೆ ಎಂದು ಮಾಧ್ಯಮಗಳಿಗೆ ತಿಳಿಸಿದರು. ಇದೊಂದು ದೊಡ್ಡ ದುರಂತವಾಗಿದ್ದು, ನಾವು ತುಂಬಾ ಕಳವಳಗೊಂಡಿದ್ದೇವೆ, ಒಳಗಿರುವ ಜನರನ್ನು ಹುಡುಕುವ ಪ್ರಯತ್ನಗಳು ನಡೆಯುತ್ತಿವೆ ಎಂದು ಟೆಸ್ಸೋರಿ ಹೇಳಿದರು.
ಶಾರ್ಟ್ ಸರ್ಕ್ಯೂಟ್​ನಿಂದ ಬೆಂಕಿಗೆ ಕಾರಣವಾಗಿರಬಹುದು,ಬೆಂಕಿಯು ಬಹಳ ಸಮಯದ ವರೆಗೆ ಉರಿದ ಕಾರಣ ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗಬಹುದು ಎಂದು ದಕ್ಷಿಣ ಡಿಐಜಿ ಸೈಯದ್ ಅಸಾದ್ ರಜಾ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ,(ಏಜನ್ಸೀಸ್).