Qatar: ಇರಾನ್ ದಾಳಿ ಬಳಿಕ ಕತಾರ್‌ನ ಪ್ರಮುಖ ಅತಿದೊಡ್ಡ ದ್ರವೀಕೃತ ನೈಸರ್ಗಿಕ ಅನಿಲ ಸಂಸ್ಕರಣಾ ಕೇಂದ್ರವಾದ ರಾಸ್ ಲಫಾನ್ ಕೈಗಾರಿಕಾ ನಗರದಲ್ಲಿ ಭಾನುವಾರ(ಜೂ. 21) ರಾತ್ರಿ ಭೀಕರ ಸ್ಫೋಟ ಸಂಭವಿಸಿದ್ದು, ಬೆಂಕಿಯ ಅವಘಡದ ಪರಿಣಾಮವಾಗಿ ಕನಿಷ್ಠ 54 ಮಂದಿ ಗಾಯಗೊಂಡಿದ್ದು, 18 ಜನ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಕತಾರ್‌ನ ಆಂತರಿಕ ಸಚಿವಾಲಯ, ಸ್ಪೋಟದ ಘಟನೆಯಲ್ಲಿ 54 ಜನರು ಗಾಯಗೊಂಡಿದ್ದಾರೆ ಮತ್ತು ಇನ್ನೂ 18 ಜನರು ಕಾಣೆಯಾಗಿದ್ದಾರೆ. ಸ್ಫೋಟ ತಾಂತ್ರಿಕ ಅಪಘಾತವಾಗಿದೆ. ಸಾರ್ವಜನಿಕ ಸುರಕ್ಷತೆಗೆ ಅಪಾಯವನ್ನುಂಟುಮಾಡುವ ಯಾವುದೇ ಸೋರಿಕೆ ಇಲ್ಲ ನಡೆದಿಲ್ಲ. ನಾಗರಿಕ ರಕ್ಷಣಾ ತಂಡಗಳೊಂದಿಗೆ ಕತಾರಿ ಅಂತರರಾಷ್ಟ್ರೀಯ ಶೋಧ ಮತ್ತು ರಕ್ಷಣಾ ಗುಂಪು ನಾಪತ್ತೆಯಾದವರವನ್ನು ಪತ್ತೆಹಚ್ಚಲು ಕಾರ್ಯಾಚರಣೆ ನಡೆಸಿದೆ ಎಂದು ಹೇಳಿದೆ.
ಇನ್ನೂ ಕತಾರ್ ಎನರ್ಜಿ ಪ್ರಕಾರ, ಇರಾನ್ ದಾಳಿ ಬಳಿಕ ರಾಸ್ ಲಫಾನ್ ಕೈಗಾರಿಕಾ ನಗರದಲ್ಲಿರುವ ಬರ್ಜಾನ್ ಸ್ಥಳೀಯ ಅನಿಲ ಪೂರೈಕೆ ಘಟಕದಲ್ಲಿ ಕಾರ್ಯಾಚರಣೆ ಪುನರಾರಂಭದ ವೇಳೆ ಈ ಘಟನೆ ಸಂಭವಿಸಿದೆ. ಇನ್ನೂ ಬರ್ಜಾನ್ ಸ್ಥಾವರವು ಕತಾರ್‌ನ ದೇಶೀಯ ಮಾರುಕಟ್ಟೆಗೆ ನೈಸರ್ಗಿಕ ಅನಿಲವನ್ನು ಪೂರೈಸುತ್ತದೆ ಮತ್ತು ದೇಶದ ವಿಶಾಲ ಇಂಧನ ಮೂಲಸೌಕರ್ಯದ ಭಾಗವಾಗಿದೆ.
ಯುದ್ಧಕ್ಕೆ ಶಾಶ್ವತ ಅಂತ್ಯ ಹಾಡುವ ಬಗ್ಗೆ ಮಾತುಕತೆಗಳು ಮುಂದುವರೆದಂತೆ ಇರಾನ್ ಜಲಸಂಧಿಯ ಮೇಲಿನ ಹಿಡಿತವನ್ನು ಸಡಿಲಗೊಳಿಸುತ್ತಿರುವುದರಿಂದ, ಕತಾರ್ ತನ್ನ ರಫ್ತು ಟರ್ಮಿನಲ್ ಅನ್ನು ಮರುಪ್ರಾರಂಭಿಸಲು ಪ್ರಯತ್ನಿಸಲು ಪ್ರಾರಂಭಿಸಿತು ಎನ್ನಲಾಗಿದೆ (ಏಜೆನ್ಸೀಸ್).