ವಾಷಿಂಗ್ಟನ್/ಟೆಹ್ರಾನ್: ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಭೀತಿ ಮತ್ತಷ್ಟು ತೀವ್ರಗೊಂಡಿದೆ. ಇರಾನ್‌ನ ಕರಾವಳಿ ತೀರದಲ್ಲಿರುವ(Strait of Hormuz) ಕ್ಷಿಪಣಿ ನೆಲೆಗಳನ್ನು ಗುರಿಯಾಗಿಸಿಕೊಂಡು ಅಮೆರಿಕದ ಮಿಲಿಟರಿ ಪಡೆಗಳು ಬುಧವಾರ ಮುಂಜಾನೆ ಭೀಕರ ವೈಮಾನಿಕ ದಾಳಿ ನಡೆದ ಬಗ್ಗೆ ವರದಿಯಾಗಿದೆ.
ಈ ಕಾರ್ಯಾಚರಣೆಯಲ್ಲಿ ಅಮೆರಿಕವು ಅತಿ ಹೆಚ್ಚು ವಿನಾಶಕಾರಿ ಸಾಮರ್ಥ್ಯವುಳ್ಳ 5,000 ಪೌಂಡ್ (2,200 ಕೆಜಿ) ತೂಕದ 'ಬಂಕರ್ ಬಸ್ಟರ್' (Deep Penetrator Munitions) ಬಾಂಬ್‌ಗಳನ್ನು ಬಳಸಿದೆ ಎನ್ನಲಾಗಿದೆ.
ಯುಎಸ್ ಸೆಂಟ್ರಲ್ ಕಮಾಂಡ್ (CENTCOM) ನೀಡಿರುವ ಅಧಿಕೃತ ಮಾಹಿತಿಯ ಪ್ರಕಾರ, ಹಾರ್ಮುಜ್ ಜಲಸಂಧಿಯ ಸಮೀಪವಿರುವ ಇರಾನ್‌ನ ಅತ್ಯಂತ ಸುರಕ್ಷಿತ ಮತ್ತು ಭೂಗತ ಕ್ಷಿಪಣಿ ನೆಲೆಗಳ ಮೇಲೆ ಈ ದಾಳಿ ನಡೆದಿದೆ. ಇರಾನ್ ನಿಯೋಜಿಸಿದ್ದ ಹಡಗು ವಿರೋಧಿ ಕ್ರೂಸ್ ಕ್ಷಿಪಣಿಗಳನ್ನು (Anti-ship cruise missiles) ಈ ಬಾಂಬ್‌ಗಳು ಯಶಸ್ವಿಯಾಗಿ ಧ್ವಂಸಗೊಳಿಸಿವೆ. ಅಂತರಾಷ್ಟ್ರೀಯ ಶಿಪ್ಪಿಂಗ್ ಮಾರ್ಗಗಳಿಗೆ ಇರಾನ್‌ನ ಈ ಕ್ಷಿಪಣಿಗಳು ದೊಡ್ಡ ಮಟ್ಟದ ಅಪಾಯವನ್ನುಂಟುಮಾಡಿದ್ದವು ಎಂದು ಅಮೆರಿಕ ಸಮರ್ಥಿಸಿಕೊಂಡಿದೆ.
ಅಮೆರಿಕದ ಪರ ನಿಲ್ಲದ ನ್ಯಾಟೋ ಮಿತ್ರರಾಷ್ಟ್ರಗಳು!
ಈ ದಾಳಿಯ ಬೆನ್ನಲ್ಲೇ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ. ಇಸ್ರೇಲ್ ಮತ್ತು ಅಮೆರಿಕ ಜಂಟಿಯಾಗಿ ಇರಾನ್ ವಿರುದ್ಧ ನಡೆಸುತ್ತಿರುವ ಈ ಯುದ್ಧಕ್ಕೆ ಹೆಚ್ಚಿನ ನ್ಯಾಟೋ (NATO) ಮಿತ್ರರಾಷ್ಟ್ರಗಳು ಬೆಂಬಲ ನೀಡಲು ಹಿಂದೇಟು ಹಾಕಿವೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
"ನಮ್ಮ ನಿರ್ಧಾರವನ್ನು ಎಲ್ಲರೂ ಒಪ್ಪುತ್ತಾರೆ, ಆದರೆ ಯಾರಿಗೂ ಸಹಾಯ ಮಾಡಲು ಮನಸ್ಸಿಲ್ಲ. ಇದು ನಿಜಕ್ಕೂ ಆಘಾತಕಾರಿ ಸಂಗತಿ," ಎಂದು ಟ್ರಂಪ್ ಸುದ್ದಿಗಾರರಿಗೆ ತಿಳಿಸಿದ್ದಾರೆ. ಜರ್ಮನಿ ಮತ್ತು ಫ್ರಾನ್ಸ್‌ನಂತಹ ಪ್ರಬಲ ರಾಷ್ಟ್ರಗಳು ಈ ಸಂಘರ್ಷದಲ್ಲಿ ನೇರವಾಗಿ ಭಾಗಿಯಾಗಲು ನಿರಾಕರಿಸಿವೆ. ಜರ್ಮನಿಯ ವಿದೇಶಾಂಗ ಸಚಿವ ಜೊಹಾನ್ ವಾಡೆಫುಲ್ ಅವರು, "ನಾವು ಈ ಸಂಘರ್ಷದ ಸಕ್ರಿಯ ಭಾಗವಾಗುವುದಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ. ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಕೂಡ ಪರಿಸ್ಥಿತಿ ತಿಳಿಯಾಗುವವರೆಗೆ ತಮ್ಮ ಸೇನೆಯನ್ನು ಕಳುಹಿಸುವುದಿಲ್ಲ ಎಂದು ಹೇಳಿದ್ದಾರೆ.
ಮುಂದೇನು?
ಮೂರನೇ ವಾರಕ್ಕೆ ಕಾಲಿಟ್ಟಿರುವ ಈ ಯುದ್ಧವು ಇಡೀ ಮಧ್ಯಪ್ರಾಚ್ಯವನ್ನು ಬೂದಿ ಮಾಡುವ ಮುನ್ಸೂಚನೆ ನೀಡುತ್ತಿದೆ. ಒಂದು ಕಡೆ ಅಮೆರಿಕದ ಅತ್ಯಾಧುನಿಕ ಬಾಂಬ್‌ಗಳ ದಾಳಿ, ಇನ್ನೊಂದೆಡೆ ಮಿತ್ರರಾಷ್ಟ್ರಗಳ ಅಸಹಕಾರ – ಈ ಮಧ್ಯೆ ಇರಾನ್ ನೀಡಬಹುದಾದ ತಿರುಗೇಟು ಜಾಗತಿಕ ಆರ್ಥಿಕತೆಯ ಮೇಲೆ ಕರಾಳ ಛಾಯೆ ಬೀರಲಿದೆ,(ಏಜೆನ್ಸೀಸ್).