80 ಮಂದಿ ಪುರುಷರ ಅಸ್ಥಿಪಂಜರಗಳು
- 2,500 ವರ್ಷಗಳ ಹಿಂದಿನ ಸಾಮೂಹಿಕ ಸಮಾಧಿ
- ಸಮಾಧಿಯಲ್ಲಿದ್ದ 95%ಕ್ಕೂ ಹೆಚ್ಚು ಮಂದಿ ಸ್ಥಳೀಯರು
- ಹಲವು ಅಸ್ಥಿಪಂಜರಗಳಿಗೆ ಕಬ್ಬಿಣದ ಕೈಕೋಳ
ಗ್ರೀಸ್: ಸುಮಾರು 2,500 ವರ್ಷಗಳ ಹಿಂದೆ ಗ್ರೀಸ್‌ನ ಅಥೆನ್ಸ್‌ನಲ್ಲಿ ನಡೆದಿದ್ದ ಭೀಕರ ಘಟನೆಯ ರಹಸ್ಯ ಈಗ ಬಯಲಾಗಿದೆ. ವರ್ಷಗಳ ಹಿಂದೆ ಒಂದೇ ಸಮಾಧಿಯಲ್ಲಿ ಸುಮಾರು 80 ಮಂದಿ ಪುರುಷರ ಅಸ್ಥಿಪಂಜರಗಳು ಸಿಕ್ಕಿದ್ದವು. ಆದರೆ ಇವರು ಹೊರಗಿನಿಂದ ಬಂದವರಲ್ಲ, ಸ್ಥಳೀಯ ನಿವಾಸಿಗಳೇ ಎಂಬುದು ಹೊಸ ವೈಜ್ಞಾನಿಕ ಅಧ್ಯಯನದಿಂದ ತಿಳಿದುಬಂದಿದೆ.
2016ರಲ್ಲಿ ಅಥೆನ್ಸ್ ಸಮೀಪದ ಫಲೆರಾನ್ನಲ್ಲಿ ಪುರಾತತ್ವ ತಜ್ಞರು ಉತ್ಖನನ ನಡೆಸುತ್ತಿದ್ದಾಗ ಈ ಸಾಮೂಹಿಕ ಸಮಾಧಿ ಪತ್ತೆಯಾಗಿತ್ತು. ಇಲ್ಲಿ ಸುಮಾರು 80 ವಯಸ್ಕ ಪುರುಷರ ಎಲುಬಿನ ಅವಶೇಷಗಳು ಸಿಕ್ಕಿದ್ದವು. ಹಲವು ಅಸ್ಥಿಪಂಜರಗಳ ಕೈಗಳಿಗೆ ಕಬ್ಬಿಣದ ಬೇಡಿ ಹಾಕಲಾಗಿತ್ತು. ಅವರನ್ನು ಸಾಲಿನಲ್ಲಿ ಮಲಗಿಸಿ ಹೂಳಲಾಗಿದ್ದು, ಆ ಸಾವುಗಳು ಹಿಂಸಾತ್ಮಕವಾಗಿ ಆಗಿದ್ದವು ಎಂದು ಪುರಾತತ್ವ ಅಧ್ಯಯನ ಹೇಳುತ್ತದೆ. ಹೀಗಾಗಿ ಇವರು ಯಾರು, ಯಾಕೆ ಹೀಗೆ ಹತ್ಯೆ ಮಾಡಲಾಗಿದೆ ಎಂಬ ಪ್ರಶ್ನೆ ಹಲವು ವರ್ಷಗಳಿಂದ ಕಾಡುತ್ತಿತ್ತು.
ಹಲ್ಲುಗಳ ಪರೀಕ್ಷೆಯಿಂದ ಸಿಕ್ಕಿತು ಸುಳಿವು
ಈ ರಹಸ್ಯಕ್ಕೆ ಉತ್ತರ ಕಂಡುಕೊಳ್ಳಲು ಅಮೆರಿಕದ ಅರಿಜೋನಾ ಸ್ಟೇಟ್ ಯೂನಿವರ್ಸಿಟಿಯ ಜುಲ್ಲಾನ್ನೆ ಆರ್. ಸ್ಟೇಮರ್ ನೇತೃತ್ವದ ಸಂಶೋಧಕರ ತಂಡ ರಿಸರ್ಚ್ ನಡೆಸಿತು. ಮೃತರ ಹಲ್ಲುಗಳ ಎನಾಮೆಲ್‌ನಲ್ಲಿರುವ ಸ್ಟ್ರಾಂಷಿಯಂ ಐಸೋಟೋಪ್‌ಗಳನ್ನು ಪರೀಕ್ಷಿಸಿದರು. ಬಾಲ್ಯದಲ್ಲಿ ಸೇವಿಸುವ ಆಹಾರದ ಮೂಲಕ ಸ್ಟ್ರಾಂಷಿಯಂನ ರಾಸಾಯನಿಕ ದೇಹಕ್ಕೆ ಸೇರಿರುತ್ತೆ ಮತ್ತು ಅದರ ಗುರುತು ಹಲ್ಲುಗಳಲ್ಲಿ ಉಳಿಯುತ್ತದೆ. ಇದರಿಂದ ವ್ಯಕ್ತಿ ಬಾಲ್ಯದಲ್ಲಿ ಯಾವ ಪ್ರದೇಶದಲ್ಲಿ ಬೆಳೆದಿದ್ದ ಅನ್ನುವುದನ್ನು ಅಂದಾಜಿಬಹುದು.
95%ಕ್ಕೂ ಹೆಚ್ಚು ಮಂದಿ ಸ್ಥಳೀಯರು
ಬೇಡಿ ಹಾಕಲಾಗಿದ್ದ 66 ಪುರುಷರ ಹಲ್ಲುಗಳ ಮಾದರಿಗಳನ್ನು ಪರೀಕ್ಷಿಸಿ, ಫಲೆರಾನ್ ಸಮಾಧಿಯಲ್ಲಿದ್ದ ಇತರ 97 ಜನರ ಮಾದರಿಗಳೊಂದಿಗೆ ಹೋಲಿಕೆ ಮಾಡಲಾಯಿತು. ಅದರ ಫಲಿತಾಂಶ ಸಂಶೋಧಕರಿಗೂ ಅಚ್ಚರಿ ಮೂಡಿಸಿತು. ಪರೀಕ್ಷಿಸಲಾದ ಪುರುಷರ ಪೈಕಿ ಶೇ. 95ಕ್ಕೂ ಹೆಚ್ಚು ಮಂದಿ ಅಥೆನ್ಸ್ನ ಅಟ್ಟಿಕಾ ಪ್ರದೇಶದಲ್ಲೇ ಬಾಲ್ಯ ಕಳೆದಿದ್ದರು ಎಂಬುದು ಬಯಲಾಗಿದೆ. ಅಂದರೆ, ಇವರು ಹೊರಗಿನಿಂದ ಬಂದ ಸೈನಿಕರಲ್ಲ. ಬದಲಿಗೆ, ಅವರು ಅದೇ ಪ್ರದೇಶದ ಸ್ಥಳೀಯ ನಿವಾಸಿಗಳಾಗಿದ್ದರು ಎಂಬುದಕ್ಕೆ ಅಧ್ಯಯನ ಬಲವಾದ ಪುರಾವೆ ನೀಡಿದೆ.
ಯಾಕೆ ಕೊಲ್ಲಲಾಯಿತು?
ಈ ಪುರುಷರನ್ನು ಯಾಕೆ ಬೇಡಿ ಕೈಕೋಳ ಹಾಕಿ ಹತ್ಯೆ ಮಾಡಲಾಗಿದೆ ಎಂಬುದಕ್ಕೆ ಇನ್ನೂ ಸ್ಪಷ್ಟ ಉತ್ತರ ಸಿಕ್ಕಿಲ್ಲ. ಆ ಕಾಲದಲ್ಲಿ ಅಥೆನ್ಸ್‌ನಲ್ಲಿ ಅಧಿಕಾರಕ್ಕಾಗಿ ರಾಜಕೀಯ ಸಂಘರ್ಷಗಳು ನಡೆಯುತ್ತಿದ್ದವು. ಹೀಗಾಗಿ ರಾಜಕೀಯ ಅಸ್ಥಿರತೆಯ ಸಂದರ್ಭದಲ್ಲಿ ಸಾಮೂಹಿಕ ಶಿಕ್ಷೆ ನೀಡಲಾಗಿತ್ತೇ ಅಥವಾ ಯಾವುದಾದರೂ ದಂಗೆಗೆ ಸಂಬಂಧಿಸಿದಂತೆ ಇವರನ್ನು ಹತ್ಯೆ ಮಾಡಲಾಗಿತ್ತೇ ಎಂಬ ಪ್ರಶ್ನೆ ಇನ್ನೂ ಉಳಿದಿದೆ,(ಏಜೆನ್ಸೀಸ್).