- ವೆನೆಜುವೆಲಾ ಅಧ್ಯಕ್ಷನನ್ನು ಬಂಧಿಸಿದ ಅಮೆರಿಕ ಸೇನೆ
- ಮೋದಿಗೆ ತಾಕತ್ ಇದ್ದರೆ ಮಸೂದ್ ಅಜರ್‌ನನ್ನು ಭಾರತಕ್ಕೆ ಕರೆತರಲಿ
- ನಿಮ್ಮ ಮಿತ್ರ ಟ್ರಂಪ್ ಮಾಡುವ ಕೆಲಸವನ್ನು ನಿವೇಕೇ ಮಾಡುತ್ತಿಲ್ಲ?
ಮುಂಬೈ: ವೆನೆಜುವೆನಾ ಅಧ್ಯಕ್ಷನನ್ನು ಅಮೆರಿಕ ಬಂಧಿಸಿದಂತೆ, ಭಾರತದ ಮೇಲಿನ ದಾಳಿಗಳಿಗೆ ಕಾರಣರಾದ ಭಯೋತ್ಪಾದಕರ ವಿರುದ್ಧ ಸಹ ಈ ರೀತಿಯ ಕ್ರಮ ಜರುಗಬೇಕೆಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ (Asaduddin Owaisi) ಶನಿವಾರ(ಜ.3) ಹೇಳಿದ್ದಾರೆ.
ಮುಂಬೈನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ AIMIM ಮುಖ್ಯಸ್ಥರು ಈ ಹೇಳಿಕೆ ನೀಡಿದ್ದಾರೆ. ಜನವರಿ 3 ರ ರಾತ್ರಿ ಅಮೆರಿಕದ ಸೈನಿಕರು ವೆನೆಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೊ ಮತ್ತು ಅವರ ಪತ್ನಿ ಸಿಲಿಯಾ ಫ್ಲೋರ್ಸ್ ಅವರನ್ನು ಸೆರೆಹಿಡಿದಿದ್ದಾರೆ ಎಂದು ವರದಿಯಾದ ಕುರಿತು ಅವರು ಮಾತನಾಡಿದರು.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತನ್ನ ಸೈನ್ಯವನ್ನು ವೆನೆಜುವೆಲಾಗೆ ಕಳುಹಿಸಿ, ಅಲ್ಲಿನ ಅಧ್ಯಕ್ಷರನ್ನು ಸೆರೆಹಿಡಿದು ಅಮೆರಿಕಕ್ಕೆ ಕರೆತಂದಿದ್ದಾರೆ. ಟ್ರಂಪ್ ಮಾಡುವ ಕೆಲಸವನ್ನು ನಮ್ಮ ಪ್ರಧಾನಿ ಏಕೆ ಮಾಡುವುದಿಲ್ಲ ಎಂದು ಪ್ರಶ್ನಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯನ್ನು ಉಲ್ಲೇಖಿಸಿ ಮಾತನಾಡಿದ ಓವೈಸಿ, ಮೋದಿ ಜೀ, ನಿಮಗೆ 56 ಇಂಚಿನ ಎದೆಯಿದ್ದರೆ 26/11 ಭಯೋತ್ಪಾದಕ ದಾಳಿಗೆ ಕಾರಣರಾಗಿರುವ ಲಷ್ಕರ್-ಎ-ತೈಬಾದ ಮಸೂದ್ ಅಜರ್‌ನನ್ನು ಭಾರತಕ್ಕೆ ಕರೆತನ್ನಿ ಎಂದು ಹೇಳಿಕೆ ನೀಡಿದ್ದಾರೆ. ಟ್ರಂಪ್ ಇಂತಹ ಕ್ರಮಗಳನ್ನು ತೆಗೆದುಕೊಳ್ಳಲು ಸಮರ್ಥರಾಗಿದ್ದರೆ, ಹೀಗಾಗಿ ಭಾರತ ಸಹ ಇಂತದ್ದೆ ಕ್ರಮ ಕೈಗೊಳ್ಳಬೇಕು ಏಕೆಂದರೆ ನೀವೇ 'ಅಬ್ಕಿ ಬಾರ್ ಟ್ರಂಪ್ ಸರ್ಕಾರ್' ಎಂದು ಹೇಳಿದ್ದೀರಿ ಎಂದು ಓವೈಸಿ ಹೇಳಿದರು.
ಮೂರನೇ ಬಾರಿ ವಿದೇಶಿ ನಾಯಕರನ್ನು ಸೆರೆಹಿಡಿದ ಅಮೆರಿಕ
ಅಮೆರಿಕ ತನ್ನ ಸೇನೆಯನ್ನು ಬಳಸಿ ವಿದೇಶಿ ನಾಯಕನನ್ನು ಸೆರೆಹಿಡಿದ ಕಾರ್ಯಚಾರಣೆ ಇದೇ ಮೊದಲೇನಲ್ಲ. 1989 ರಲ್ಲಿ ಪನಾಮದಲ್ಲಿ ಹಾಗೂ 2003 ರಲ್ಲಿ ಇರಾಕ್‌ನಲ್ಲಿ ಸಹ ಇದೇ ರೀತಿಯ ಕಾರ್ಯಾಚರಣೆಗಳನ್ನು ನಡೆಸಲಾಗಿತ್ತು.
ಪನಾಮ (1989)
ಅಮೆರಿಕವು 1989 ರಲ್ಲಿ ಪನಾಮಾದ ಸರ್ವಾಧಿಕಾರಿ ಮ್ಯಾನುಯೆಲ್ ನೊರಿಗಾ ಅವರನ್ನು ಅಧಿಕಾರದಿಂದ ತೆಗೆದುಹಾಕಲು ಲ್ಯಾಟಿನ್ ಅಮೇರಿಕನ್ ರಾಷ್ಟ್ರವಾದ ಪನಾಮದ ಮೇಲೆ ಮಿಲಿಟರಿ ಆಕ್ರಮಣವನ್ನು ಪ್ರಾರಂಭಿಸಿತು. ವಾಷಿಂಗ್ಟನ್ ನೊರಿಗಾ ಅವರನ್ನು ಮಾದಕವಸ್ತು ಕಳ್ಳಸಾಗಣೆ ಮತ್ತು ಅಮೆರಿಕ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆಂದು ಆರೋಪಿಸಿತು.
ಕಾರ್ಯಾಚರಣೆಯ ಸಮಯದಲ್ಲಿ, ಯುಎಸ್ ಪಡೆಗಳು ರಾಜಧಾನಿ ಪನಾಮ ನಗರ ಸೇರಿದಂತೆ ಹಲವಾರು ಪ್ರದೇಶಗಳಲ್ಲಿ ಭಾರೀ ಬಾಂಬ್ ದಾಳಿ ನಡೆಸಿದವು. ಈ ದಾಳಿಯು ಸುಮಾರು 2,000 ಜನರ ಸಾವಿಗೆ ಕಾರಣವಾಯಿತು ಎಂದು ವರದಿಯಾಗಿದೆ. ನೊರಿಗಾ ಅವರನ್ನು ಅಂತಿಮವಾಗಿ ಯುಎಸ್ ಪಡೆಗಳು ಸೆರೆಹಿಡಿದು ಯುನೈಟೆಡ್ ಸ್ಟೇಟ್ಸ್‌ಗೆ ಕರೆದೊಯ್ಯಲಾಯಿತು ಅಲ್ಲಿ ಅವರು ವಿಚಾರಣೆಯನ್ನು ಎದುರಿಸಿದರು.
ಇರಾಕ್ (2003)
2003 ರಲ್ಲಿ ಇರಾಕ್ ಅಧ್ಯಕ್ಷ ಸದ್ದಾಂ ಹುಸೇನ್ ಅವರನ್ನು ಅಧಿಕಾರದಿಂದ ತೆಗೆದುಹಾಕುವ ಉದ್ದೇಶದೊಂದಿಗೆ ಅಮೆರಿಕ ಇರಾಕ್ ಮೇಲೆ ಮಿಲಿಟರಿ ದಾಳಿ ನಡೆಸಿತು. ಸದ್ದಾಂ ಆಡಳಿತವು ಇರಾಕ್‌ನೊಳಗಿನ ವಿವಿಧ ಸಮುದಾಯಗಳ ವಿರುದ್ಧ ಹಿಂಸಾಚಾರವನ್ನು ನಡೆಸುತ್ತಿದೆ, ಭಯೋತ್ಪಾದಕ ಗುಂಪು ಅಲ್-ಖೈದಾ ಜೊತೆ ಸಂಪರ್ಕವನ್ನು ಕಾಯ್ದುಕೊಂಡಿದೆ ಮತ್ತು ಸಾಮೂಹಿಕ ವಿನಾಶಕಾರಿ ಶಸ್ತ್ರಾಸ್ತ್ರಗಳನ್ನು ಹೊಂದಿದೆ ಎಂದು ವಾಷಿಂಗ್ಟನ್ ಆರೋಪಿಸಿತು.
ಆಕ್ರಮಣದ ಸಮಯದಲ್ಲಿ, ಯುಎಸ್ ಪಡೆಗಳು ರಾಜಧಾನಿ ಬಾಗ್ದಾದ್ ಸೇರಿದಂತೆ ಹಲವಾರು ಇರಾಕಿ ನಗರಗಳ ಮೇಲೆ ವ್ಯಾಪಕವಾದ ವೈಮಾನಿಕ ದಾಳಿಗಳನ್ನು ನಡೆಸಿದವು. ಈ ದಾಳಿಯು ಸದ್ದಾಂ ಹುಸೇನ್ ಅವರ ಸರ್ಕಾರದ ಪತನಕ್ಕೆ ಕಾರಣವಾಯಿತು ಮತ್ತು ಕೆಲವು ತಿಂಗಳುಗಳ ನಂತರ ಅವರನ್ನು ಸೆರೆಹಿಡಿಯಲಾಯಿತು.
ಬಂಧನದ ನಂತರ, ಸದ್ದಾಂ ಹುಸೇನ್ ಅವರನ್ನು ಇರಾಕಿ ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಡಿಸಲಾಯಿತು. ಆ ಸಮಯದಲ್ಲಿ, ಇರಾಕ್ ಯುಎಸ್ ಮಿಲಿಟರಿಯ ನಿಯಂತ್ರಣದಲ್ಲಿತ್ತು,(ಏಜನ್ಸೀಸ್).