- ಭಾರತ–ಮಡಗಾಸ್ಕರ್ ನಡುವೆ ಮುಳುಗಿದ ಖಂಡವೇ ಲೆಮೂರಿಯಾ?
- ಹಿಂದೂ ಮಹಾಸಾಗರದಾಳದಲ್ಲಿ ಪುರಾತನ ಖಂಡದ ಕುರುಹು
- ಮೊಟ್ಟೆ ಇಡುತ್ತಿದ್ದ ದೇಹವಿಲ್ಲದ ಮಾನವರಲ್ಲಿ ಏಲಿಯನ್ ಡಿಎನ್ಎ ಪತ್ತೆ ಎಂಬ ಮಾತು
Lost Continent: ಹಿಂದೂ ಮಹಾಸಾಗರದ ಆಳದಲ್ಲಿ ಪುರಾತನ ಖಂಡವೊಂದರ ಪಳೆಯುಳಿಕೆಗಳು ಪತ್ತೆಯಾಗಿದ್ದು, ವಿಜ್ಞಾನಿಗಳು ಅದನ್ನು ‘ಮೊರಿಷಿಯಾ’ (Mauritia) ಎಂದು ಭೇದಿಸಿದ್ದಾರೆ. ಆದರೆ, ಈ ಶೋಧನೆಯು 19ನೇ ಶತಮಾನದ ಅತ್ಯಂತ ವಿಚಿತ್ರ ಹಾಗೂ ನಿಗೂಢ ಎನ್ನಲಾದ ಲೆಮೂರಿಯಾ (Lemuria) ಎಂಬ ಮುಳುಗಿಹೋದ ಕಾಲ್ಪನಿಕ ಖಂಡವೆಂಬ ಚರ್ಚೆಗಳು ಸದ್ಯ ಜೋರಾಗಿವೆ.
ಏನಿದು ಲೆಮೂರಿಯಾ?
1846ರಲ್ಲಿ ಬ್ರಿಟಿಷ್ ಜೀವವಿಜ್ಞಾನಿ ಫಿಲಿಪ್ ಸಕ್ಲೇಟರ್ ಎಂಬುವವರು ಭಾರತ ಮತ್ತು ಮಡಗಾಸ್ಕರ್‌ನಲ್ಲಿ ‘ಲೆಮೂರ್’ ಎಂಬ ಜೀವಿಗಳ ಪಳೆಯುಳಿಕೆಗಳು ಒಂದೇ ರೀತಿ ಇರುವುದನ್ನು ಗಮನಿಸಿದ್ದಾರೆ. ಆದರೆ, ಇವೆರಡಕ್ಕೂ ಹತ್ತಿರದಲ್ಲಿದ್ದ ಆಫ್ರಿಕಾ ಖಂಡದಲ್ಲಿ ಈ ಪಳೆಯುಳಿಕೆಗಳು ಪತ್ತೆಯಾಗಿಲ್ಲ. ಈ ವ್ಯತ್ಯಾಸವನ್ನು ವಿವರಿಸಲು, ಭಾರತ ಮತ್ತು ಮಡಗಾಸ್ಕರ್ ನಡುವೆ ಒಂದು ಭೂಭಾಗವಿತ್ತು. ಮತ್ತು ಅದು ಕಾಲಕ್ರಮೇಣ ಸಾಗರದಲ್ಲಿ ಮುಳುಗಿಹೋಯಿತು ಎಂಬ ಕಾಲ್ಪನಿಕ ಪ್ರತಿಪಾದದ ಅಧಾರದ ಮೇಲೆ, ಆ ಭೂಭಾಗಕ್ಕೆ 'ಲೆಮೂರಿಯಾ' ಎಂದು ಹೆಸರಿಡಲಾಯಿತು. ಇದೇ ಈಗಿನ ಮೊರಿಷಿಯಾ ಎಂಬ ಮಾತುಗಳು ಕೇಳಿಬಂದಿವೆ.
ಭಾರತ ಮತ್ತು ಮಡಗಾಸ್ಕರ್ ಲಕ್ಷಾಂತರ ವರ್ಷಗಳ ಹಿಂದೆ ಒಂದೇ ಸೂಪರ್ ಕಾಂಟಿನೆಂಟ್ ಭಾಗವಾಗಿದ್ದವು ಎಂಬುದು ವೈಜ್ಞಾನಿಕವಾಗಿ ಸಾಬೀತಾದರೂ ಈ ಲೆಮೂರಿಯಾ ಖಂಡದ ಕಲ್ಪನೆಗೆ ವಿಜ್ಞಾನದಲ್ಲಿ ಜಾಗ ದೊರೆತಿಲ್ಲ. ಖಂಡದ ಸಿದ್ಧಾಂತಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲದಿದ್ದರೂ, ಗೂಢಚಾರಿಗಳು ಹಾಗೂ ಕಾಲ್ಪನಿಕ ಪ್ರಿಯರು ಇದಕ್ಕೆ ಹಲವು ವಿಚಿತ್ರ ಕಥೆಗಳನ್ನು ಹೆಣೆದಿದ್ದಾರೆ.
ಮೊಟ್ಟೆಯಿಡುವ ಮಾನವರು?
1888ರಲ್ಲಿ ಹೆಲೆನಾ ಬ್ಲಾವಟ್ಸ್ಕಿ ಎಂಬ ಆಧ್ಯಾತ್ಮಿಕವಾದಿ ಬರೆದ 'ದಿ ಸೀಕ್ರೆಟ್ ಡಾಕ್ಟ್ರಿನ್' ಪುಸ್ತಕದಲ್ಲಿ, ಲೆಮೂರಿಯಾ ಖಂಡದಲ್ಲಿದ್ದ ಮಾನವರು ಶರೀರ ರಹಿತರಾಗಿದ್ದರು. ಅವರು ಕೋಳಿಯಂತೆ ಮೊಟ್ಟೆಯಿಡುತ್ತಿದ್ದರು ಮತ್ತು ಅವರಲ್ಲಿ ಏಲಿಯನ್ ಡಿಎನ್‌ಎಗಳು ಇತ್ತು ಎಂಬ ಹುಬ್ಬೇರಿಸುವ ಅಂಶವನ್ನು ಉಲ್ಲೇಖಿಸಿ ಬರೆದಿದ್ದಾಗಿ 'ದಿ ವಯೋನ್' ತನ್ನ ವರದಿಯಲ್ಲಿ ತಿಳಿಸಿದೆ.
ಅಂತರಿಕ್ಷದಿಂದ ಬಂದ ಏಲಿಯನ್ಗಳು
ಇನ್ನು, ಮತ್ತೊಂದು ಸಿದ್ಧಾಂತದ ಪ್ರಕಾರ, 'ಮಾಲ್ಡೆಕ್' ಎಂಬ ಗ್ರಹವನ್ನು ಹೈಡ್ರೋಜನ್ ಬಾಂಬ್‌ನಿಂದ ನಾಶಪಡಿಸಿದ ಜನರು, ಲೆಮೂರಿಯಾಗೆ ಬಂದು ನೆಲೆಸಿದರು. ಕಾಲಕ್ರಮೇಣ ಇಲ್ಲೂ ಪರಮಾಣು ಯುದ್ಧ ನಡೆದು ಈ ಖಂಡವು ನಾಶವಾಯಿತು ಎಂಬ ನಂಬಿಕೆ ಇಂದಿಗೂ ಉಳಿದಿದೆ. ಲೆಮೂರಿಯಾ ಖಂಡದಿಂದ ತಪ್ಪಿಸಿಕೊಂಡ 7 ಅಡಿ ಎತ್ತರದ ಮಾನವರು, ಉತ್ತರ ಕ್ಯಾಲಿಫೋರ್ನಿಯಾದ ಮೌಂಟ್ ಶಷ್ಟಾ ಬೆಟ್ಟದ ಅಡಿಯಲ್ಲಿ ಭೂಗತ ನಗರವನ್ನು ನಿರ್ಮಿಸಿಕೊಂಡು ವಾಸಿಸುತ್ತಿದ್ದಾರೆ ಎಂಬ ಗಾಸಿಪ್‌ಗಳೂ ಸಹ ಜೀವಂತವಾಗಿವೆ.
ವಿಜ್ಞಾನಿಗಳು ಒಪ್ಪಿದ ಅಸಲಿ ಇದು ಮಾತ್ರ!
ವಿಜ್ಞಾನಿಗಳು ಲೆಮೂರಿಯಾ ಖಂಡದಲ್ಲಿ ಏಳು ಅಡಿ ಎತ್ತರದ ಮಾನವರಿದ್ದರು, ಏಲಿಯನ್ ಬಂದು ನೆಲೆಸಿದ್ದವು ಎಂಬ ಕಾಲ್ಪನಿಕ ಕಥೆ, ಉಲ್ಲೇಖಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. ಆದರೆ, 2013ರಲ್ಲಿ ಹಿಂದೂ ಮಹಾಸಾಗರದಲ್ಲಿ ಮುಳುಗಿಹೋದ ಭೂಭಾಗವೊಂದನ್ನು ಕಂಡುಹಿಡಿದಿದ್ದು, ಅದಕ್ಕೆ ಮೊರಿಷಿಯಾ ಎಂದು ಹೆಸರಿಟ್ಟಿದ್ದಾರೆ. ಸುಮಾರು 200 ಮಿಲಿಯನ್ ವರ್ಷಗಳ ಹಿಂದೆ 'ಗೊಂಡ್ವಾನಾಲ್ಯಾಂಡ್' ಎಂಬ ಬೃಹತ್ ಭೂಭಾಗವು ಒಡೆದು ಬೇರ್ಪಟ್ಟಾಗ ಈ ಮೊರಿಷಿಯಾ ಭಾಗವು ಸಾಗರದ ಅಡಿಯಲ್ಲಿ ಮುಳುಗಿತು ಎಂದು ವಿಜ್ಞಾನಿಗಳು ಹೇಳುತ್ತಾರೆ. ಪ್ರಸ್ತುತ, ಸಂಶೋಧಕರು ಈ ಭೂಖಂಡದ ವಿಸ್ತೀರ್ಣ ಮತ್ತು ಆಕಾರವನ್ನು ಪತ್ತೆಹಚ್ಚಲು ನಿರಂತರ ಸಂಶೋಧನೆಯಲ್ಲಿ ಸಖತ್ ಬಿಜಿಯಾಗಿದ್ದಾರೆ,(ಏಜೆನ್ಸೀಸ್).