ಧೂಮಪಾನ  
ವಿದೇಶ

14ನೇ ವಯಸ್ಸಿಗೆ ಸಿಗರೇಟ್​! 121 ವರ್ಷಗಳ ಬದುಕು; ಗಿನ್ನಿಸ್​ ವಿಶ್ವ ದಾಖಲೆ ಪುಟ ಸೇರದ ವ್ಯಕ್ತಿ ನಿಧನ

ದಕ್ಷಿಣ ಆಫ್ರಿಕಾ: ಸಿಗರೇಟ್​ ಸೇದುವ ಚಟ ಇಂದು ಹಲವರದ್ದು. ಕುಡಿತಕ್ಕೆ ಒಂದಷ್ಟು ಜನ ದಾಸರಾದರೆ, ಮತ್ತೊಂದಷ್ಟು ಮಂದಿ ಸ್ಮೋಕಿಂಗ್​ ಚಟಕ್ಕೆ ಒಗ್ಗಿಕೊಂಡಿದ್ದಾರೆ. ಇದು ಜೀವ ಮತ್ತು ಜೀವಕ್ಕೆ ತೀರ ಹಾನಿಕಾರಕ ಎಂದು ಗೊತ್ತಿದ್ದರೂ ಸೇದುವುದನ್ನು ಮಾತ್ರ ಬಿಡುವುದಿಲ್ಲ. ಕೆಲವೇ ಕೆಲವರು ಇಂತಹ ಚಟಗಳಿಂದ ಸುಲಭವಾಗಿ ಹೊರಬರುತ್ತಾರೆ. ಮತ್ತು ಅಂದುಕೊಂಡಂತೆ ಬಿಟ್ಟುಬಿಡುತ್ತಾರೆ. ವೈದ್ಯರ ಎಚ್ಚರಿಕೆಯ ಮೇಲೂ ಹೊಗೆ ಬಿಟ್ಟ ಅನೇಕ ಮಂದಿ ಸಾವಿನ ಹಾಸಿಗೆ ಏರಿದ ನಿದರ್ಶನಗಳು ಹೆಚ್ಚಿವೆ. ಆದರೆ, ಇಲ್ಲೊಬ್ಬ ವ್ಯಕ್ತಿ 14ನೇ ವಯಸ್ಸಿಗೆ ಧೂಮಪಾನ ಶುರುಮಾಡಿ, 121 ವರ್ಷಕ್ಕೆ ಆಸ್ತಮಾ ಖಾಯಿಲೆಯಿಂದ ಸಾವಿಗೀಡಾದ ಘಟನೆ ದಕ್ಷಿಣ ಆಫ್ರಿಕಾದಲ್ಲಿ ವರದಿಯಾಗಿದೆ.    

ಗಿನ್ನೆಸ್​ ವಿಶ್ವದಾಖಲೆ ಪುಟ ಸೇರದ ಹೆಸರು

14ನೇ ವಯಸ್ಸಿನಿಂದಲೇ ಧೂಮಪಾನ ಚಟಕ್ಕೆ ಬಿದ್ದ ದಕ್ಷಿಣ ಆಫ್ರಿಕಾದ ಊಮ್​ ಜಾನ್​ ಅಲಿಯಾಸ್​ ಜಾನ್ ಸ್ಟೀನ್‌ಬರ್ಗ್ (121 ವರ್ಷ ವಯಸ್ಸು) ಇತ್ತೀಚೆಗಷ್ಟೇ ಆಸ್ತಮಾ ಕಾಯಿಲೆಯಿಂದ ಇಹಲೋಕ ತ್ಯಜಿಸಿದರು. ಪೂರ್ವ ಕೇಪ್ ಪ್ರಾಂತ್ಯದ ಕೋಲ್ಚೆಸ್ಟರ್ ಎಂಬ ಹಳ್ಳಿಯಲ್ಲಿ ಹೊಸ ವರ್ಷದ ದಿನದಂದೇ ಅವರು ಸಾವಿಗೀಡಾದ ಬಗ್ಗೆ ಕುಟುಂಬಸ್ಥರು ಸ್ಥಳೀಯ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಅಸಲಿಗೆ, ಜಗತ್ತಿನಲ್ಲಿ ಇಷ್ಟು ವರ್ಷಗಳ ಕಾಲ ಬದುಕಿದ ಏಕೈಕ ವ್ಯಕ್ತಿ ಊಮ್ ಜಾನ್ ಎಂಬ ಮಾತಿದೆ. ಆದರೆ, ಅಚ್ಚರಿ ಎಂದರೆ, ಇಲ್ಲಿಯವರೆಗೆ ಊಮ್​ ಹೆಸರು ಗಿನ್ನೆಸ್​ ವಿಶ್ವದಾಖಲೆ ಪುಟವನ್ನು ಸೇರಿಲ್ಲ ಎಂಬುದು. 
ಗಿನ್ನೆಸ್ ವಿಶ್ವ ದಾಖಲೆಗಳ ಪ್ರಕಾರ ನೋಡುವುದಾದರೆ, ಜಾನ್​ ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ಆಗಬೇಕಿತ್ತು. ಆದರೆ, ವರ್ಲ್​ ಬುಕ್​ ಆಫ್ ರೆಕಾರ್ಡ್​ ಅವರನ್ನು ಗುರುತಿಸದೆ ಇರುವುದೇ ಸದ್ಯ ಹಲವರಲ್ಲಿ ಗೊಂದಲ ಸೃಷ್ಟಿಸಿದೆ. ಪ್ರಸ್ತುತ, ದಾಖಲೆ ಹೊಂದಿರುವವರು 113 ವರ್ಷ ವಯಸ್ಸಿನ ಬ್ರೆಜಿಲಿಯನ್ ಸೂಪರ್-ಸೆಂಟೆನರಿಯನ್ ಜೋವೊ ಮರಿನ್ಹೊ ನೆಟೊ ಎಂಬುವವರು. ಊಮ್ ಜಾನ್ ಅವರು ಡಿಸೆಂಬರ್ 31, 1904ರಂದು ಜನಿಸಿದರು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

2025ರ ಸಂದರ್ಶನದಲ್ಲಿ ಮಾತು..

ಬದುಕಿದ್ದ ಅಷ್ಟು ದಿವಸ ಸಮಾಧಿ ಅಗೆಯುವುದು, ಮೀನುಗಾರಿಕೆ ಮತ್ತು ಗಾಲ್ಫ್ ಕ್ಲಬ್​ಗಳಲ್ಲಿ ಕೆಲಸ ಮಾಡುತ್ತಿದ್ದರು. ವರ್ಲ್ಡ್​ ವಾರ್​, ದಕ್ಷಿಣ ಆಫ್ರಿಕಾದಲ್ಲಿ ವರ್ಣಭೇದ ನೀತಿಯ ಯುಗ, ಕಪ್ಪು ಬಣ್ಣದ ಪ್ರಜೆಗಳ ವಿರುದ್ಧ ನಡೆದ ತಾರತಮ್ಯ ಮತ್ತು ಕೋವಿಡ್​-19 ಸೇರಿದಂತೆ ಹಲವಾರು ಪ್ರಮುಖ ಘಟನೆಗಳನ್ನು ಜಾನ್​ ಕಂಡಿದ್ದರು. 2025ರಲ್ಲಿ ನಡೆದಿದ್ದ ಸಂದರ್ಶನವೊಂದರಲ್ಲಿ ತಮ್ಮ ಜೀವಿತಾವಧಿ ಬಗ್ಗೆ ಮಾತನಾಡಿದ್ದ ಅವರು, ಹಲವು ಕುತೂಹಲಕಾರಿ ವಿಚಾರಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ. 
"ಧೂಮಪಾನದ ಚಟದ ಹೊರತಾಗಿ ದೇವರ ಮೇಲಿನ ನನ್ನ ನಂಬಿಕೆಯೇ ನನ್ನನ್ನು ಇಷ್ಟು ವರ್ಷಗಳ ಕಾಲ ಜೀವಂತವಾಗಿರಿಸಿದೆ. ಆತನೇ ನನಗೆ ಉಸಿರು, ರಕ್ಷಕ ಎಲ್ಲ. ನಾನು ಕೂಡ ಧೂಮಪಾನ ಮಾಡುತ್ತಿದ್ದೆ. 14ನೇ ವಯಸ್ಸಿನಿಂದಲೇ ಸಿಗರೇಟ್​ ಸೇದುವ ಚಟಕ್ಕೆ ಬಿದ್ದೆ. ಆಗೆಲ್ಲ ನಾನು ಸಿಗರೇಟ್ ಕದಿಯುತ್ತಿದ್ದೆ. ನನ್ನ ಜೀವನದುದ್ದಕ್ಕೂ ಗಿಡಮೂಲಿಕೆ ರಸವನ್ನು ಕುಡಿಯುತ್ತಿದ್ದೆ. ಇದು ನನ್ನನ್ನು ಸಕ್ರಿಯ ಮತ್ತು ಆರೋಗ್ಯವಾಗಿಟ್ಟಿದೆ" ಎಂದು ಹೇಳಿಕೊಂಡಿದ್ದರು. ಅವರಿದ್ದಷ್ಟು ಕಾಲ, ಅಚ್ಚುಕಟ್ಟಾಗಿ ಉಡುಗೆ ತೊಡುವುದು, ಟೋಪಿ ಧರಿಸುವುದು ಮತ್ತು ಕಾರ್ಯಕ್ರಮಗಳಲ್ಲಿ ಡ್ಯಾನ್ಸ್ ಮಾಡುತ್ತಿದ್ದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ,(ಏಜೆನ್ಸೀಸ್).