ಯಾರ್ಕ್‌ಶೈರ್ ವನ್ಯಜೀವಿ ಉದ್ಯಾನವನದಲ್ಲಿನ ಹುಲಿ ಆವರಣಕ್ಕೆ ಬಿದ್ದು ಯುವಕ ಸಾವು.
ಅ.11ರವರೆಗೂ ವನ್ಯಜೀವಿ ಉದ್ಯಾನವನ ಬಂದ್ ಮಾಡಿದ ಆಡಳಿತ ಮಂಡಳಿ.
ನಮ್ಮ ಪ್ರವಾಸಿಗರು, ಸಿಬ್ಬಂದಿ ಮತ್ತು ಪ್ರಾಣಿಗಳ ಸುರಕ್ಷತೆ ಮುಖ್ಯ ಎಂದು ಪೋಸ್ಟ್.
Man mauled to death by tiger at UK wildlife park: ಇಂಗ್ಲೆಂಡ್‌ನ ಯಾರ್ಕ್‌ಶೈರ್ ವೈಲ್ಡ್‌ಲೈಫ್ ಪಾರ್ಕ್‌ನಲ್ಲಿ ನಡೆದ ಅಘಾತಕಾರಿ, ಪ್ರವಾಸಿಗರನ್ನೇ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದೆ. ಸಾರ್ವಜನಿಕ ನಿರ್ಬಂಧಿತ ಪ್ರದೇಶವನ್ನು ಮೀರಿ, ಸೈಬೀರಿಯನ್ ಹುಲಿಗಳು ಇರುವ ಆವರಣದೊಳಗೆ ಸ್ವತಃ ವ್ಯಕ್ತಿಯೊಬ್ಬರು ಜಿಗಿದ ಪರಿಣಾಮ, ಹುಲಿ ದಾಳಿಗೆ ಒಳಗಾಗಿ ತೀವ್ರ ಗಾಯದಿಂದ ಮೃತಪಟ್ಟಿದ್ದಾರೆ ಎಂದು ದಕ್ಷಿಣ ಯಾರ್ಕ್‌ಶೈರ್ ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಇಂಗ್ಲೆಂಡ್‌ನ ಡಾನ್‌ಕಾಸ್ಟರ್ ಬಳಿಯ ಯಾರ್ಕ್‌ಶೈರ್ ವನ್ಯಜೀವಿ ಉದ್ಯಾನವನದ ಆವರಣಕ್ಕೆ ವ್ಯಕ್ತಿಯೊಬ್ಬ ಮಧ್ಯಾಹ್ನ 1.35ಕ್ಕೆ ಆಕಸ್ಮಿಕವಾಗಿ ಬಿದ್ದಿದ್ದಾನೆ ಎಂದು ಮಾಹಿತಿ ಬಂದಿತ್ತು. ತಕ್ಷಣವೇ ಘಟನಾ ಸ್ಥಳಕ್ಕೆ ಬಂದ ತುರ್ತು ಸೇವಾ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸಿ, ಯುವಕನನ್ನು ರಕ್ಷಿಸಿದರು.
ಹುಲಿಯಿಂದ ದಾಳಿಗೊಳಗಾದ ಯುವಕನಿಗೆ ತೀವ್ರ ಗಂಭೀರ ಗಾಯಗಳಾಗಿದ್ದ ಕಾರಣ, ಆ ವ್ಯಕ್ತಿಯನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ವೈದ್ಯಕೀಯ ಸಿಬ್ಬಂದಿಯ ಪ್ರಯತ್ನಗಳ ಹೊರತಾಗಿಯೂ, ಚಿಕಿತ್ಸೆ ಫಲಕಾರಿಯಾಗದೆ ಆ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ಘೋಷಿಸಲಾಗಿದೆ.
ಮೃತ ವ್ಯಕ್ತಿ ಯಾರು, ಎಲ್ಲಿನವರು ಎನ್ನುವ ಮಾಹಿತಿಯನ್ನು ಇನ್ನು ಅಧಿಕೃತವಾಗಿ ರಿಲೀಸ್ ಮಾಡಿಲ್ಲ. ಆದರೆ,. ಅವರ ಕುಟುಂಬಕ್ಕೆ ಈ ಬಗ್ಗೆ ಮಾಹಿತಿ ನೀಡಲಾಗಿದೆ. ಈ ಸಮಯದಲ್ಲಿ ನಾವು ಕುಟುಂಬಸ್ಥರೊಟ್ಟಿಗೆ ನಿಲ್ಲುತ್ತೇವೆ ಎಂದು ಸ್ಪಷ್ಟನೆ ಕೊಟ್ಟರು.
ಇನ್ನೂ ಸೋಶಿಯಲ್ ಮೀಡಿಯಾದಲ್ಲಿ ಹುಲಿಗೂ ಗಂಭೀರ ಗಾಯವಾಗಿದೆ. ಶೂಟೌಟ್ ಮಾಡಲಾಯ್ತು ಎನ್ನುವ ವದಂತಿಗಳು ಹರಿದಾಡುತ್ತಿರುವ ಬಗ್ಗೆ ಮಾತನಾಡಿದ ಅವರು, ಹುಲಿಗೆ ಯಾವುದೇ ಗಾಯವಾಗಿಲ್ಲ . ಸದ್ಯ ಹುಲಿ ತನ್ನ ಆವರಣದಲ್ಲಿದ್ದು, ಸಾರ್ವಜನಿಕರಿಗೆ ಯಾವುದೇ ಪ್ರಾಣಾಪಾಯವಿಲ್ಲ ಎಂದು ಸ್ಪಷ್ಟನೆ ಕೊಟ್ಟರು.
ಹುಲಿ ದಾಳಿ ನಡೆಸಿದ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಅಲ್ಲದೇ ಇದೇ ಸಮಯದಲ್ಲಿ ಉದ್ಯಾನದಲ್ಲಿದ್ದ ಪ್ರವಾಸಿಗರಿಗೆ ಇದೊಂದು ಅಘಾತಕಾರಿ ಘಟನೆಯಾಗಿ ಪರಿಣಮಿಸಿತ್ತು. ಸದ್ಯ ಮುನ್ನಚ್ಚರಿಕಾ ಕ್ರಮವಾಗಿ ಯಾರ್ಕ್‌ಶೈರ್ ವನ್ಯಜೀವಿ ಉದ್ಯಾನವನ್ನು ಅ.11ರವರೆಗೆ ಮುಚ್ಚಲು ನಿರ್ಧರಿಸಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.
'ನಮ್ಮ ಪ್ರವಾಸಿಗರು, ಸಿಬ್ಬಂದಿ ಮತ್ತು ಪ್ರಾಣಿಗಳ ಸುರಕ್ಷತೆ ಮತ್ತು ಯೋಗಕ್ಷೇಮವು ನಮ್ಮ ಅತ್ಯುನ್ನತ ಆದ್ಯತೆಯಾಗಿ ಉಳಿದಿದೆ' ಎಂದು ವನ್ಯಜೀವಿ ಉದ್ಯಾನವನ ಆಡಳಿತ ಮಂಡಳಿ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.
ನಾವು ಈಗಾಗಲೇ ಪೊಲೀಸರ ಮೂಲಕ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ನೋಡಿದ್ದೇವೆ, ಈಗ ಹುಲಿಯ ಮೂಲಕ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ನೋಡುತ್ತಿದ್ದೇವೆ. ಇದು ರಷ್ಯಾದೊಂದಿಗೆ ಪರಮಾಣು ಯುದ್ಧದ ಮೂಲಕ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸುತ್ತಿರುವ ಯುರೋಪಿಯನ್ ಒಕ್ಕೂಟವನ್ನು ನನಗೆ ನೆನಪಿಸುತ್ತದೆ ಎಂದು ನೆಟ್ಟಿಗರೊಬ್ಬರು ಬರೆದುಕೊಂಡಿದ್ದಾರೆ, (ಏಜೆನ್ಸೀಸ್).