ಮೆಕ್ಕಾ: ಮೆಕ್ಕಾ(Mecca)ದ ಮಸ್ಜಿದ್ ಅಲ್ ಹರಾಮ್‌ನಲ್ಲಿ ವ್ಯಕ್ತಿಯೊಬ್ಬ ಗ್ರ್ಯಾಂಡ್ ಮಸೀದಿಯ ಮೇಲಿನ ಮಹಡಿಯಿಂದ ಜಿಗಿಯಲು ಪ್ರಯತ್ನಿಸಿ ಉದ್ವಿಗ್ನ ಸ್ಥತಿ ನಿರ್ಮಾಣವಾದ ಬಗ್ಗೆ ವರದಿಯಾಗಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ವೀಡಿಯೊದಲ್ಲಿ ವ್ಯಕ್ತಿಯೊಬ್ಬ ಕಟ್ಟಡದ ತುದಿಯತ್ತ ಹೋಗಿ ಇನ್ನೇನು ಜಿಗಿಯಬೇಕು ಆವಾಗ ಇನ್ನೊಬ್ಬ ವ್ಯಕ್ತಿ ಅವನನ್ನು ತಡೆಯುತ್ತಿರುವುದನ್ನು ನೋಡಬಹುದು. ರಕ್ಷಣಾ ಕಾರ್ಯಾಚರಣೆಯ ಸಮಯದಲ್ಲಿ, ಭದ್ರತಾ ಅಧಿಕಾರಿಗಳಲ್ಲಿ ಒಬ್ಬರು ಗಾಯಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
X ನಲ್ಲಿ ನೀಡಿದ ಹೇಳಿಕೆಯಲ್ಲಿ ಎಮಿರೇಟ್ಸ್ನ ಆ ವ್ಯಕ್ತಿ ಮೇಲಿನಿಂದ ಜಿಗಿಯಲು ಪ್ರಯತ್ನಿಸಿದ ತಕ್ಷಣ ಗ್ರ್ಯಾಂಡ್ ಮಸೀದಿಯ ಭದ್ರತೆಗಾಗಿ ವಿಶೇಷ ಪಡೆ ಮಧ್ಯಪ್ರವೇಶಿಸಿದೆ ಎಂದು ದೃಢಪಡಿಸಿದೆ. ಆ ವ್ಯಕ್ತಿ ನೆಲಕ್ಕೆ ಬಡಿಯುವುದನ್ನು ತಡೆಯುವಾಗ ಗಾಯಗೊಂಡ ಅಧಿಕಾರಿಗೆ ಮೂಳೆ ಮುರಿತ ಸಂಭವಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪವಿತ್ರ ಸ್ಥಳದ ಬಗ್ಗೆ ಗೌರವವನ್ನು ತೋರಿಸಿ
ಘಟನೆಯ ನಂತರ ಗ್ರ್ಯಾಂಡ್ ಮಸೀದಿಯ ಮುಖ್ಯ ಇಮಾಮ್ ಅಬ್ದುರ್ ರೆಹಮಾನ್ ಆಸ್ ಸುದೈಸ್ ಈ ವಿಷಯವನ್ನು ಪ್ರಸ್ತಾಪಿಸಿ, ಪವಿತ್ರ ಸ್ಥಳದ ಪಾವಿತ್ರ್ಯವನ್ನು ಕಾಪಾಡಿಕೊಳ್ಳಲು, ನಿಯಮಗಳನ್ನು ಪಾಲಿಸಲು ಮತ್ತು ಆಧ್ಯಾತ್ಮಿಕ ಆಚರಣೆಗಳಿಗೆ ಬದ್ಧರಾಗಿರಲು ಭಕ್ತರನ್ನು ಒತ್ತಾಯಿಸಿದರು ಎಂದು ವರದಿಯಾಗಿದೆ. ಮಾನವ ಜೀವದ ಸಂರಕ್ಷಣೆ ಇಸ್ಲಾಮಿಕ್ ಕಾನೂನಿನಲ್ಲಿ ಕೇಂದ್ರ ತತ್ವವಾಗಿದೆ ಎಂದು ಅವರು ಯಾತ್ರಿಕರಿಗೆ ನೆನಪಿಸಿದರು ಮತ್ತು ಕುರಾನ್ ಬೋಧನೆಯನ್ನು ಉಲ್ಲೇಖಿಸಿದರು.
2017 ರಲ್ಲಿ ಇದೇ ರೀತಿಯ ಘಟನೆ
ಇದೇ ರೀತಿಯ ಘಟನೆಯು 2017 ರಲ್ಲಿ ಸಹ ನಡೆದಿದ್ದು, ಗ್ರ್ಯಾಂಡ್ ಮಸೀದಿಯ ಮೂರನೇ ಮಹಡಿಯಿಂದ ವ್ಯಕ್ತಿಯೊಬ್ಬ ಹಾರಿ ಆ*ತ್ಮಹತ್ಯೆ ಮಾಡಿಕೊಂಡಿದ್ದನು,(ಏಜನ್ಸೀಸ್).