- ವೆನೆಜುವೆಲಾ ಅಧ್ಯಕ್ಷ ನ್ಯೂಯಾರ್ಕ್ ಜೈಲಿಗೆ ವರ್ಗಾವಣೆ
- ಕೊಲಂಬಿಯಾ ಅಧ್ಯಕ್ಷ ಗುಸ್ಟಾವೊ ಪೆಟ್ರೋಗೆ ಟ್ರಂಪ್ ಬೆದರಿಕೆ
- ವೆನಿಜುವೆಲಾದಲ್ಲಿ ಶತಕೋಟಿ ಹೂಡಿಕೆ ಮಾಡುತ್ತೇವೆ : ಟ್ರಂಪ್
ಅಮೆರಿಕ: ವೆನೆಜುವೆಲಾದಲ್ಲಿ ವಾಯುದಾಳಿ ನಡೆಸಿರುವುದಾಗಿ ಅಮೆರಿಕ ಹೇಳಿಕೊಂಡಿದ್ದು, ಅಧ್ಯಕ್ಷ ನಿಕೋಲಸ್ ಮಡುರೊ ಮತ್ತು ಅವರ ಪತ್ನಿಯನ್ನು ಬಂಧಿಸಿ, ಮಡುರೊ ಅವರನ್ನು ನ್ಯೂಯಾರ್ಕ್‌ನ ಜೈಲಿಗೆ ವರ್ಗಾಯಿಸಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರ ಘೋಷಣೆಯು ಲ್ಯಾಟಿನ್ ಅಮೆರಿಕಾದಾದ್ಯಂತ ಉದ್ವಿಗ್ನತೆಯನ್ನು ಹೆಚ್ಚಿಸಿದ್ದು,ಹಲವಾರು ದೇಶಗಳು ವಾಷಿಂಗ್ಟನ್‌ನ ಮಿಲಿಟರಿ ಕ್ರಮವನ್ನು ಖಂಡಿಸಿವೆ.
ಈ ಬೆಳವಣಿಗೆಯು ಹೊಸ ರಾಜತಾಂತ್ರಿಕ ವಿವಾದಕ್ಕೂ ನಾಂದಿ ಹಾಡಿದ್ದು, ಟ್ರಂಪ್,ಮಡುರೊ ನಂತರ ಈಗ ಕೊಲಂಬಿಯಾದ ಅಧ್ಯಕ್ಷರಿಗೆ ಸಾರ್ವಜನಿಕವಾಗಿ ಬೆದರಿಕೆ ಹಾಕಿದ್ದಾರೆ.
ಕೊಲಂಬಿಯಾ ಅಧ್ಯಕ್ಷನಿಗೆ ಟ್ರಂಪ್ ಎಚ್ಚರಿಕೆ
ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, ಕೊಲಂಬಿಯಾದ ಅಧ್ಯಕ್ಷ ಗುಸ್ಟಾವೊ ಪೆಟ್ರೋ, ಕೊಕೇನ್ ಅನ್ನು ತಯಾರಿಸಿ ಅಮೆರಿಕಕ್ಕೆ ಕಳುಹಿಸುತ್ತಿದ್ದಾರೆ ಎಂದು ಆರೋಪಿಸಿ, ಅವರು ಇನ್ನುಮುಂದೆ ಎಚ್ಚರಿಕೆಯಿಂದಿರಬೇಕು ಎಂದು ಬೆದರಿಕೆ ಒಡ್ಡಿದ್ದಾರೆ.
ಈ ಹಿಂದೆ ಕೊಲಂಬಿಯಾದ ನಾಯಕ ಕೆರಿಬಿಯನ್‌ನಲ್ಲಿನ ಮಾದಕವಸ್ತು ಕಳ್ಳಸಾಗಣೆ ಹಡಗುಗಳನ್ನು ತಡೆಯುವ ಗುರಿಯನ್ನು ಹೊಂದಿರುವ ಯುಎಸ್ ಮಿಲಿಟರಿ ಯೋಜನೆಗಳ ಬಗ್ಗೆ ತೀವ್ರವಾಗಿ ಟೀಕಿಸಿದ್ದರು.
ಟ್ರಂಪ್ ತಮ್ಮ ಮಾದಕ ದ್ರವ್ಯ ವಿರೋಧಿ ತಂತ್ರದ ಭಾಗವಾಗಿ, ಕೊಲಂಬಿಯಾದಲ್ಲಿರುವ ಮಾದಕವಸ್ತು ಉತ್ಪಾದನಾ ಪ್ರಯೋಗಾಲಯಗಳನ್ನು ನಾಶ ಪಡಿಸುವುದಾಗಿ ಹೇಳಿದ್ದಾರೆ.
ವೆನೆಜುವೆಲಾ ನನ್ನ ಹಿಡಿತದಲ್ಲಿದೆ: ಟ್ರಂಪ್
ಮಡುರೊ ಮತ್ತು ಅವರ ಪತ್ನಿ ಸಿಲಿಯಾ ಫ್ಲೋರ್ಸ್ ಅವರನ್ನು ಕ್ಯಾರಕಾಸ್‌ನಿಂದ ತೆಗೆದುಹಾಕಲಾದ ಕೆಲವು ಗಂಟೆಗಳ ನಂತರ, ಟ್ರಂಪ್ ತಾತ್ಕಾಲಿಕವಾಗಿ ವೆನೆಜುವೆಲಾದ ಆಡಳಿತದ ಮೇಲೆ ಅಮೆರಿಕ ಹಿಡಿತ ಸಾಧಿಸುತ್ತದೆ ಎಂದು ಹೇಳಿದ್ದಾರೆ. ಸುರಕ್ಷಿತ, ಸರಿಯಾದ ಮತ್ತು ಸಮಂಜಸವಾದ ಅಧಿಕಾರ ವರ್ಗಾವಣೆಯನ್ನು ಖಚಿತಪಡಿಸಿಕೊಳ್ಳುವವರೆಗೆ ನಾವು ದೇಶವನ್ನು ನಡೆಸುತ್ತೇವೆ ಎಂದು ಅವರು ಹೇಳಿದ್ದು, ಅಗತ್ಯ ಬಿದ್ದರೆ ಮತ್ತೊಮ್ಮೆ ದಾಳಿ ಮಾಡಲು ನಾವು ಸಿದ್ಧ ಎಂದು ಹೇಳಿದ್ದಾರೆ.
ವೆನಿಜುವೆಲಾದಲ್ಲಿ ಶತಕೋಟಿ ಹೂಡಿಕೆ
ಯುಎಸ್ ತನ್ನ ತೈಲ ಕಂಪನಿಗಳನ್ನು ವೆನೆಜುವೆಲಾಕ್ಕೆ ಕಳುಹಿಸುತ್ತದೆ ಮತ್ತು ಹಾನಿಗೊಳಗಾದ ತೈಲ ಮೂಲಸೌಕರ್ಯವನ್ನು ದುರಸ್ತಿ ಮಾಡಲು ಶತಕೋಟಿ ಡಾಲರ್‌ಗಳನ್ನು ಖರ್ಚು ಮಾಡುತ್ತದೆ ಎಂದು ಟ್ರಂಪ್ ಹೇಳಿದ್ದಾರೆ. ಇದು ವೆನೆಜುವೆಲಾಗೆ ಪ್ರಯೋಜನ ನೀಡಲಿದ್ದು, ಅಮೆರಿಕದ ಬೇಡಿಕೆಗಳನ್ನು ಪೂರೈಸುವವರೆಗೆ ಎಲ್ಲಾ ಮಿಲಿಟರಿ ಆಯ್ಕೆಗಳೊಂದಿಗೆ ಯುಎಸ್ ನೌಕಾಪಡೆಯು ವೆನೆಜುವೆಲಾದಲ್ಲಿ ಇರಲಿದೆ ಎಂದು ಹೇಳಿದ್ದಾರೆ,(ಏಜನ್ಸೀಸ್).