ಗ್ಲ್ಯಾಸ್ಗೋ ಹೋಟೆಲ್​ನಲ್ಲಿ ಭಾರತದ ಕಂಪ್ಲೀಟ್​ ಭೂಪಟ ಇಲ್ಲ 
ವಿದೇಶ

ಕಾಶ್ಮೀರ, ಈಶಾನ್ಯ ರಾಜ್ಯಗಳು ಮಿಸ್ಸಿಂಗ್ ಏಕೆ?​ ಗ್ಲ್ಯಾಸ್ಗೋ ಹೋಟೆಲ್​ ವಿರುದ್ಧ ಸಿಡಿದೆದ್ದ ಭಾರತೀಯ ಬಾಕ್ಸರ್ ಲೊವ್ಲಿನಾ

ಪ್ರಮುಖ ಮುಖ್ಯಾಂಶಗಳು

  • ಗ್ಲ್ಯಾಸ್ಗೋದ ಭಾರತೀಯ ರೆಸ್ಟೋರೆಂಟ್‌ ಸದ್ಯ ಹೊಸ ವಿವಾದಕ್ಕೆ ಗುರಿ
  • ರೆಸ್ಟೋರೆಂಟ್‌ನ ಕರವಸ್ತ್ರದ ಮೇಲಿನ ಭಾರತದ ನಕ್ಷೆಯಲ್ಲಿ ಈಶಾನ್ಯ ರಾಜ್ಯಗಳೇ ಇಲ್ಲ
  • ಹೋಟೆಲ್​ ಮಾಲೀಕರ ವಿರುದ್ಧ ಭಾರತೀಯ ಬಾಕ್ಸರ್​ ಗರಂ
ಸ್ಕಾಟ್​ಲ್ಯಾಂಡ್​: ಪ್ರಸಕ್ತ ನಡೆಯುತ್ತಿರುವ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಗ್ಲ್ಯಾಸ್ಗೋದ ಭಾರತೀಯ ರೆಸ್ಟೋರೆಂಟ್‌ವೊಂದು ಸದ್ಯ ಹೊಸ ವಿವಾದಕ್ಕೆ ಗುರಿಯಾಗಿದೆ.
ರೆಸ್ಟೋರೆಂಟ್‌ನ ಕರವಸ್ತ್ರದ (ಹ್ಯಾಂಡ್​ ಕರ್ಚೀಫ್​) ಮೇಲೆ ಮುದ್ರಿಸಲಾಗಿದ್ದ ಭಾರತದ ನಕ್ಷೆಯಲ್ಲಿ ಈಶಾನ್ಯ ರಾಜ್ಯಗಳನ್ನು ಹೊರತುಪಡಿಸಿ, ಉಳಿದೆಲ್ಲ ರಾಜ್ಯಗಳ ಭೂಪಟ ಇರುವುದು ಒಲಿಂಪಿಕ್ ಪದಕ ವಿಜೇತೆ ಹಾಗೂ ಭಾರತೀಯ ಬಾಕ್ಸರ್ ಲೊವ್ಲಿನಾ ಬೊರ್ಗೊಹೈನ್​ ಅವರ ಗಮನಕ್ಕೆ ಬಂದಿದೆ. ಈ ವಿಷಯಕ್ಕೆ ಅವರು ಮಾಲೀಕರ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಕಾಮನ್‌ವೆಲ್ತ್ ಕ್ರೀಡಾಕೂಟದ ಬಳಿಕ ಭಾರತೀಯ ಕ್ರೀಡಾಪಟುಗಳು ಮಿಸ್ಟರ್ ಸಿಂಗ್ಸ್ ಇಂಡಿಯಾ-ದಿ ಹೋಮ್ ಆಫ್ ಕರಿ ಎಂಬ ರೆಸ್ಟೋರೆಂಟ್‌ಗೆ ತೆರಳಿದ್ದರು. ಈ ವೇಳೆ, ಸಿಬ್ಬಂದಿಗಳು ನೀಡಿದ್ದ ನ್ಯಾಪ್‌ಕಿನ್‌ನಲ್ಲಿ ಭಾರತದ ನಕ್ಷೆಯನ್ನು ನೋಡಿದ ಲೊವ್ಲಿನಾ, ಅದರಲ್ಲಿ ಈಶಾನ್ಯ ಭಾಗವೇ ಇಲ್ಲದಿರುವುದನ್ನು ಕಂಡು ಆಶ್ಚರ್ಯಕ್ಕೊಳಗಾದರು. ತಕ್ಷಣವೇ ಮಾಲೀಕರನ್ನು ಕರೆದು ಈಶಾನ್ಯ ಪ್ರದೇಶಗಳನ್ನು ಬಿಟ್ಟಿರುವುದು ಏಕೆ ಎಂದು ಪ್ರಶ್ನಿಸಿದ್ದಾರೆ.
ನಮ್ಮ ದೇಶದ ಪ್ರತಿಯೊಂದು ಭಾಗವೂ ನಮಗೆ ಮುಖ್ಯ. ಈಶಾನ್ಯವನ್ನು ನಕ್ಷೆಯಿಂದ ಕೈಬಿಡುವುದು ಸರಿಯಲ್ಲ. ಎಲ್ಲ ರಾಜ್ಯಕ್ಕೂ ಸಮಾನ ಸ್ಥಾನಮಾನ, ಗೌರವ ಸಿಗಬೇಕು ಎಂದರು. ಲೊವ್ಲಿನಾ ಅವರ ಮಾತಿಗೆ ಬಾಕ್ಸಿಂಗ್ ಫೆಡರೇಶನ್ ಆಫ್ ಇಂಡಿಯಾ (ಬಿಎಫ್​ಐ) ಅಧ್ಯಕ್ಷ ಅಜಯ್ ಸಿಂಗ್ ಕೂಡ ದನಿಗೂಡಿಸಿದರು. ಈಶಾನ್ಯ ಮಾತ್ರವಲ್ಲ, ಜಮ್ಮು-ಕಾಶ್ಮೀರದ ಚಿತ್ರಣವೂ ನಕ್ಷೆಯಲ್ಲಿ ಸರಿಯಾಗಿಲ್ಲ. ವಿದೇಶಿ ನೆಲಗಳಲ್ಲಿ ಭಾರತೀಯ ಸಂಸ್ಕೃತಿಯನ್ನು ಪ್ರತಿನಿಧಿಸುವ ಸಂಸ್ಥೆಗಳು ಇಂತಹ ತಪ್ಪುಗಳನ್ನು ಮಾಡಬಾರದು ಎಂದು ಕಿಡಿಕಾರಿದರು.

ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ

ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ಭಾರಿ ಚರ್ಚೆಗೆ ಕಾರಣವಾಗಿದೆ. ಅನೇಕರು ಲೊವ್ಲಿನಾ ಅವರು ಪ್ರಶ್ನಿಸಿದ್ದಕ್ಕೆ ಸಾಥ್​ ನೀಡಿದ್ದಾರೆ. ಈ ವಿವಾದದ ಬಗ್ಗೆ ಇಲ್ಲಿಯವರೆಗೆ ಮಿಸ್ಟರ್ ಸಿಂಗ್ಸ್ ಇಂಡಿಯಾ – ದಿ ಹೋಮ್ ಆಫ್ ಕರಿ' ರೆಸ್ಟೋರೆಂಟ್‌ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ,(ಏಜೆನ್ಸೀಸ್).