ಸಾಂದರ್ಭಿಕ ಚಿತ್ರ 
ವಿದೇಶ

ರಷ್ಯಾ ಮಣಿಸಲು ಪ್ರೀತಿಯೇ ಅಸ್ತ್ರ

ಯೂಕ್ರೇನ್​ನಲ್ಲಿ ಯುದ್ಧದ ಕಾರಣದಿಂದಾಗಿ ಆನ್​ಲೈನ್ ಮದುವೆಗಳ ಸಂಖ್ಯೆ ಹೆಚ್ಚಾಗಿದೆ. 2026ರ ಜನವರಿಯಿಂದ ಜೂನ್​ವರೆಗೆ 38% ವಿವಾಹಗಳು ಆನ್​ಲೈನ್​ನಲ್ಲಿ ದಾಖಲಾಗಿವೆ. ‘ರಷ್ಯಾ ಎಲ್ಲವನ್ನೂ ಅಳಿಸಿಹಾಕಲು ಬಯಸಿದೆ, ಅದಕ್ಕಾಗಿಯೇ ಪ್ರೀತಿ ಮುಖ್ಯ’ ಎನ್ನುತ್ತಿರುವ ನವಜೋಡಿಗಳು, ದಾಳಿಗಳ ನಡುವೆ ಸಂಬಂಧಗಳನ್ನು ಬೆಸೆಯುತ್ತಿದ್ದಾರೆ. ಮದುವೆ ನಿರ್ಧಾರಗಳನ್ನು ಮುಂದೂಡಿದ್ದ ಜೋಡಿಗಳು ಸಹ, ಸಕಾರಾತ್ಮಕ ಭವಿಷ್ಯಕ್ಕಾಗಿ ಮದುವೆಯಾಗಲು ನಿಶ್ಚಯಿಸಿದ್ದಾರೆ. ಯುದ್ಧಭೂಮಿಯಲ್ಲಿ ಹೀಗೆ ಹೊಸ ಬದುಕು ಕಟ್ಟಿಕೊಳ್ಳುವ ಪರಿಯೇ ಇತರರಿಗೂ ಸ್ಪೂರ್ತಿ ತುಂಬುತ್ತಿದ್ದು, ಈ ಕುರಿತಾದ ವಿವರ ಇಲ್ಲಿದೆ.
ಯುದ್ಧದ ತೀವ್ರ ಆತಂಕ ಮತ್ತು ಅನಿಶ್ಚಿತತೆಯ ನಡುವೆಯೂ ಯೂಕ್ರೇನ್​ನಲ್ಲಿ ಪ್ರೇಮ, ವಿವಾಹ ಮತ್ತು ಬಾಂಧವ್ಯಗಳು ಹಿಂದೆಂದಿಗಿಂತಲೂ ವೇಗವಾಗಿ ಗಟ್ಟಿಗೊಳ್ಳುತ್ತಿವೆ. ಬದುಕಿಗೆ ನಾಳೆಯ ಭರವಸೆ ಇಲ್ಲದಿರುವಾಗ, ಪ್ರೀತಿ ಮತ್ತು ಪರಸ್ಪರ ಸಾಂಗತ್ಯವೇ ಜನರಿಗೆ ಬದುಕುವ ಅತಿ ದೊಡ್ಡ ಆಸರೆಯಾಗಿದೆ. ‘ಬರುತ್ತೋ ಇಲ್ಲವೋ ಗೊತ್ತಿಲ್ಲ, ಜೀವ ಯಾವಾಗ ಬೇಕಾದರೂ ಹೋಗಬಹುದು’ ಎಂಬ ಪರಿಸ್ಥಿತಿಯಲ್ಲಿ ಜನರು ಪ್ರೀತಿ ವ್ಯಕ್ತಪಡಿಸಲು ಅಥವಾ ಮದುವೆಯಾಗಲು ಮುಂದಾಗುತ್ತಿದ್ದಾರೆ. ವರ್ಷಗಟ್ಟಲೇ ಕಾಯುವ ಪರಿಪಾಠ ಕೊನೆಗೊಳ್ಳುತ್ತಿದೆ. ಪ್ರತಿಯೊಂದು ಕ್ಷಣವನ್ನೂ ಅರ್ಥಪೂರ್ಣವಾಗಿ ಕಳೆಯಬೇಕೆಂಬ ತುಡಿತ ಸಂಬಂಧಗಳನ್ನು ತ್ವರಿತವಾಗಿ ಗಟ್ಟಿಗೊಳಿಸುತ್ತಿದೆ.
ಬಾಂಬ್ ದಾಳಿ ಮತ್ತು ವಿನಾಶದ ನಡುವೆ ಮದುವೆಯಾಗುವುದು ಅಥವಾ ಪ್ರೀತಿಸುವುದು ಒಂದು ರೀತಿಯ ಮಾನಸಿಕ ಸ್ಥೈರ್ಯ. ಇದು ಹಿಂಸೆ ಮತ್ತು ಸಾವಿನ ನಡುವೆಯೂ ಜೀವನ ಮುಂದುವರಿಯುತ್ತದೆ ಎಂಬ ಆಶಾಭಾವನೆಯನ್ನು ಸಮಾಜದಲ್ಲಿ ಬಿತ್ತುತ್ತದೆ. ಕಷ್ಟದ ಸಮಯದಲ್ಲಿ ಜೊತೆಯಾಗಿ ನಿಲ್ಲುವ ಸಂಗಾತಿಗಳು ಮತ್ತು ಸಮುದಾಯವು ಜನರಲ್ಲಿ ಮನುಷ್ಯತ್ವದ ಮೇಲಿನ ವಿಶ್ವಾಸವನ್ನು ಮರಳಿ ತರುತ್ತಿದೆ. ಪ್ರೀತಿ ಕೇವಲ ವೈಯಕ್ತಿಕ ಭಾವನೆಯಾಗಿ ಉಳಿಯದೆ, ವಿನಾಶದ ವಿರುದ್ಧ ಮಾನವೀಯತೆಯು ಗೆಲ್ಲಲು ಇರುವ ದೊಡ್ಡ ಅಸ್ತ್ರವಾಗಿ ಯೂಕ್ರೇನ್​ನಲ್ಲಿ ಕೆಲಸ ಮಾಡುತ್ತಿದೆ.
ಯುದ್ಧಭೂಮಿಯಲ್ಲಿ ಹೋರಾಡುತ್ತಿರುವ ಯೋಧರಿಗೆ ತಮ್ಮ ಸಂಗಾತಿಯ ಪ್ರೀತಿ ಮತ್ತು ಕಾಯುವಿಕೆ ಬದುಕಿ ಬರಲು ದೊಡ್ಡ ಪ್ರೇರಣೆಯಾಗಿದೆ. ವಿಡಿಯೋ ಕರೆಗಳು ಮತ್ತು ಪತ್ರಗಳ ಮೂಲಕ ನಡೆಯುವ ಸಂವಹನ ಅವರ ನಡುವಿನ ವಿಶ್ವಾಸವನ್ನು ಹೆಚ್ಚಿಸಿದ್ದು, ಸೈನಿಕರ ಮಾನಸಿಕ ಸ್ಥೈರ್ಯ ಕುಸಿಯದಂತೆ ಕಾಪಾಡಿದೆ. ಯೂಕ್ರೇನ್ ಸರ್ಕಾರವು ಸೈನಿಕರು ಮತ್ತು ನಾಗರಿಕರಿಗೆ ಆನ್​ಲೈನ್ ಅಥವಾ ಕೆಲವೇ ಗಂಟೆಗಳಲ್ಲಿ ಆಫ್​ಲೈನ್ ಮೂಲಕ ಮದುವೆಯಾಗಲು ಕಾನೂನುಗಳನ್ನು ಸರಳಗೊಳಿಸಿದೆ. ಆಡಂಬರವಿಲ್ಲದ, ಕೇವಲ ಭಾವನಾತ್ಮಕ ಬಂಧಕ್ಕೆ ಪ್ರಾಮುಖ್ಯ ನೀಡುವ ವಿವಾಹಗಳು ಹೆಚ್ಚುತ್ತಿವೆ.

ಭರವಸೆ ಕಳೆದುಕೊಳ್ಳದ ಬದುಕು

ಯೂಕ್ರೇನ್​ನಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮವಾಗಿ ಜನರ ಜೀವನಶೈಲಿ ಮತ್ತು ಸಾಮಾಜಿಕ ಪದ್ಧತಿಗಳಲ್ಲಿ ಭಾರೀ ಬದಲಾವಣೆಗಳಾಗಿದ್ದು, ಆನ್​ಲೈನ್ ವಿವಾಹಗಳು ಹೆಚ್ಚಿವೆ. ಯೂಕ್ರೇನಿಯನ್ನರು 2026ರ ಮೊದಲ ಆರು ತಿಂಗಳಲ್ಲಿ, ಒಟ್ಟು 79,516 ವಿವಾಹಗಳನ್ನು ನೋಂದಾಯಿಸಿದ್ದು, ಅದರಲ್ಲಿ 30,488 ವಾಹಗಳು ಆನ್​ಲೈನ್ ಮೂಲಕ ನಡೆದಿವೆ. ಇದು 2025ಕ್ಕೆ ಹೋಲಿಸಿದರೆ ಗಮನಾರ್ಹ ಏರಿಕೆಯಾಗಿದೆ. 2025ರ ವಾರ್ಷಿಕ ಒಟ್ಟು ವಿವಾಹಗಳಲ್ಲಿ ಆನ್​ಲೈನ್ ನೋಂದಣಿಗಳು 18.4% ಮಾತ್ರ ಆಗಿದ್ದವು. ಯೂಕ್ರೇನ್ ಸರ್ಕಾರವು ಪ್ರಾಯೋಗಿಕ ಆನ್​ಲೈನ್ ವಿವಾಹ ಯೋಜನೆಯನ್ನು ಇನ್ನೆರಡು ವರ್ಷಗಳ ಕಾಲ ವಿಸ್ತರಿಸಿದೆ. ವಿದೇಶದ 48 ದೇಶಗಳಲ್ಲಿ ವಾಸಿಸುತ್ತಿರುವ ತನ್ನ ನಾಗರಿಕರಿಗೆ ಭೌತಿಕ ವಿವಾಹ ಪ್ರಮಾಣಪತ್ರಗಳನ್ನು ತಲುಪಿಸುವ ಸೌಲಭ್ಯವನ್ನು ಸರ್ಕಾರ ವಿಸ್ತರಿಸಿದೆ. ಮುಂಬರುವ ದಿನಗಳಲ್ಲಿ ವಿಧವೆಯರು ಮತ್ತು ವಿದುರರು ಆನ್​ಲೈನ್ ಮೂಲಕ ಮರುಮದುವೆಯಾಗುವ ಸೌಲಭ್ಯವನ್ನು ಹಾಗೂ ಅಂಗವಿಕಲರ ಸುಲಭ ಬಳಕೆಗೆ ನೆರವಾಗುವಂತೆ ಸಂಕೇತ ಭಾಷಾ (ಸೈನ್ ಲ್ಯಾಂಗ್ವೇಜ್) ತರ್ಜುಮೆ ದಾರರೊಂದಿಗೆ ವಿಡಿಯೋ ವಿವಾಹ ಸಮಾರಂಭಗಳನ್ನು ನಡೆಸಲಾಗುತ್ತದೆ.

ಫಟಾಫಟ್ ಮದುವೆಗಳು

ಮುಂಚೂಣಿಯಲ್ಲಿರುವ ಸೈನಿಕರು: ಯುದ್ಧಭೂಮಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸೈನಿಕರು ರಜೆ ಪಡೆದು ಮನೆಗೆ ಮರಳುವುದು ಅತ್ಯಂತ ಕಷ್ಟಕರವಾಗಿದೆ. ಯಾವುದೇ ತುರ್ತು ಸಂದರ್ಭ ಅಥವಾ ಅನಿಶ್ಚಿತತೆಯ ನಡುವೆಯೂ ಪ್ರೀತಿಪಾತ್ರರೊಂದಿಗೆ ಕಾನೂನುಬದ್ಧವಾಗಿ ಒಂದಾಗಲು ಸೈನಿಕರು ಆನ್​ಲೈನ್ ವಿವಾಹ ವೇದಿಕೆಯನ್ನು ಆಶ್ರಯಿಸುತ್ತಿದ್ದಾರೆ.
ಸುರಕ್ಷತೆ: ಯುದ್ಧದ ಕಾರಣದಿಂದಾಗಿ ಲಕ್ಷಾಂತರ ಜನರು ದೇಶದ ಬೇರೆ ಬೇರೆ ಭಾಗಗಳಿಗೆ ಸ್ಥಳಾಂತರಗೊಂಡಿದ್ದಾರೆ ಅಥವಾ ವಿದೇಶಗಳಿಗೆ ನಿರಾಶ್ರಿತರಾಗಿ ತೆರಳಿದ್ದಾರೆ. ಜೋಡಿಗಳು ಭೌಗೋಳಿಕವಾಗಿ ಬೇರೆ ಬೇರೆ ದೇಶ ಅಥವಾ ನಗರಗಳಲ್ಲಿದ್ದರೂ ಭೌತಿಕವಾಗಿ ಭೇಟಿಯಾಗದೆ ಸರಳವಾಗಿ ವಿವಾಹವಾಗಲು ಆನ್​ಲೈನ್ ವಿವಾಹ ಸಹಕಾರಿಯಾಗಿದೆ.
ಆರ್ಥಿಕ ಭದ್ರತೆ: ಯುದ್ಧದ ಸನ್ನಿವೇಶದಲ್ಲಿ ಗಾಯಗೊಂಡಾಗ ಅಥವಾ ತುರ್ತು ಪರಿಸ್ಥಿತಿಯಲ್ಲಿ ಸಂಗಾತಿಯ ಪರವಾಗಿ ನಿರ್ಧಾರ ತೆಗೆದುಕೊಳ್ಳಲು, ವೈದ್ಯಕೀಯ ಮಾಹಿತಿ ಪಡೆಯಲು ಮತ್ತು ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಕಾನೂನುಬದ್ಧ ವಿವಾಹದ ಅಗತ್ಯವಿರುತ್ತದೆ. ಆನ್​ಲೈನ್ ವಿವಾಹ ಪ್ರಕ್ರಿಯೆ ಇದನ್ನು ಸಾಧ್ಯವಾಗಿಸುತ್ತಿದೆ.
ಡಿಯಾ ಆಪ್: ಯೂಕ್ರೇನ್ ಸರ್ಕಾರದ ‘ಡಿಯಾ’ ಆಪ್ ವಿಶ್ವದಲ್ಲೇ ಮೊದಲ ಬಾರಿಗೆ ಸಂಪೂರ್ಣ ಡಿಜಿಟಲ್ ಹಾಗೂ ವಿಡಿಯೋ ಕಾಲ್ ಮೂಲಕ ಕಾನೂನುಬದ್ಧ ವಿವಾಹ ನೋಂದಣಿಗೆ ಅವಕಾಶ ಮಾಡಿಕೊಟ್ಟ ಕ್ರಾಂತಿಕಾರಿ ವೇದಿಕೆಯಾಗಿದೆ. ‘ಡಿಯಾ’ ಎಂದರೆ ಯೂಕ್ರೇನಿಯನ್ ಭಾಷೆಯಲ್ಲಿ ‘ಕ್ರಿಯೆ’ ಎಂದರ್ಥ. ಇದು ಯೂಕ್ರೇನ್​ನ ಡಿಜಿಟಲ್ ರೂಪಾಂತರ ಸಚಿವಾಲಯ (Ministry of Digital Transformation) ಅಭಿವೃದ್ಧಿಪಡಿಸಿದ ಇ-ಆಡಳಿತ ಆಪ್ ಆಗಿದೆ. ಪಾಸ್​ಪೋರ್ಟ್, ಚಾಲನಾ ಪರವಾನಗಿ, ತೆರಿಗೆ ಪಾವತಿ ಸೇರಿದಂತೆ ನೂರಾರು ಸರ್ಕಾರಿ ಸೇವೆಗಳನ್ನು ನಾಗರಿಕರಿಗೆ ಒಂದೇ ಸೂರಿನಡಿ ಒದಗಿಸಲು ಇದನ್ನು ರಚಿಸಲಾಗಿತ್ತು.

ಆನ್​ಲೈನ್ ಮದುವೆ ಪ್ರಕ್ರಿಯೆ ಹೇಗೆ ನಡೆಯುತ್ತದೆ?

ವಧು ಅಥವಾ ವರ ಡಿಯಾ ಆಪ್ ಮೂಲಕ ಮದುವೆಯ ಪ್ರಸ್ತಾಪವನ್ನು ಕಳುಹಿಸುತ್ತಾರೆ. ಇನ್ನೊಬ್ಬರು ಅದನ್ನು 14 ಗಂಟೆಗಳ ಒಳಗೆ ಆಪ್​ನಲ್ಲೇ ಸಮ್ಮತಿ ವ್ಯಕ್ತಪಡಿಸಬೇಕು. ವಧು ಮತ್ತು ವರ ಇಬ್ಬರೂ ಒಪ್ಪಿಗೆ ನೀಡಿದ ನಂತರ, ನೋಂದಣಿ ಅಧಿಕಾರಿಯೊಂದಿಗೆ ರ್ಚಚಿಸಿ ವಿಡಿಯೋ ಕಾಲ್​ಗಾಗಿ ಅನುಕೂಲಕರವಾದ ದಿನಾಂಕ ಮತ್ತು ಸಮಯವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ನಿಗದಿತ ಸಮಯದಲ್ಲಿ ಅಧಿಕೃತ ಮದುವೆ ರಿಜಿಸ್ಟ್ರಾರ್ ವಧು-ವರರೊಂದಿಗೆ ವಿಡಿಯೋ ಕಾನ್ಪರೆನ್ಸ್ ಮೂಲಕ ಸಂಪರ್ಕ ಸಾಧಿಸುತ್ತಾರೆ. ಇಬ್ಬರ ಸಮ್ಮತಿಯನ್ನು ಪಡೆದು ಅಧಿಕೃತ ವಿವಾಹ ವಿಧಿವಿಧಾನಗಳನ್ನು ಪೂರ್ಣಗೊಳಿಸುತ್ತಾರೆ.
ವಿವಾಹ ಮುಗಿದ ತಕ್ಷಣ, ಇಬ್ಬರೂ ತಮ್ಮ ಡಿಜಿಟಲ್ ಸಹಿ ಹಾಕುತ್ತಾರೆ. ಕೆಲವೇ ನಿಮಿಷಗಳಲ್ಲಿ ಡಿಜಿಟಲ್ ವಿವಾಹ ಪ್ರಮಾಣಪತ್ರವು ಅವರ ‘ಡಿಯಾ’ ಆಪ್​ನಲ್ಲಿ ಕಾನೂನುಬದ್ಧ ದಾಖಲೆಯಾಗಿ ಸೇರ್ಪಡೆಗೊಳ್ಳುತ್ತದೆ. ಭೌತಿಕ ಪ್ರಮಾಣಪತ್ರವನ್ನು ಅಂಚೆ ಮೂಲಕವೂ ಪಡೆಯಬಹುದು.

ವಿಶಿಷ್ಟ ವಿವಾಹ

ಇತ್ತೀಚೆಗಷ್ಟೇ ಯುದ್ಧ ವಲಯವೆಂದು ಘೊಷಿಸಲ್ಪಟ್ಟ ಯೂಕ್ರೇನ್​ನ ಕ್ರಾಮಾತೋರ್ಸ್ಕ್ ನಗರದ ಮುಖ್ಯ ವೃತ್ತದಲ್ಲಿ ಒಂದು ವಿಶಿಷ್ಟ ಮದುವೆ ನಡೆಯಿತು. ಆಂಟಿ-ಡ್ರೋನ್ ನೆಟ್​ಗಳ ಭದ್ರತೆಯ ನಡುವೆ ಕಾಂಬ್ಯಾಟ್ ಮೆಡಿಕ್ (ಸೇನಾ ನರ್ಸ್) ತೇತಿಯಾನಾ ಮತ್ತು ಸೇನಾ ಕ್ಯಾಪ್ಟನ್ ಅಲೆಕ್ಸಾಂಡರ್ ಅವರ ವಿವಾಹ ನೆರವೇರಿತು. ಇದರಲ್ಲಿ ವಧು-ವರರನ್ನು ಹೊರತುಪಡಿಸಿ ಬೇರೆ ಯಾರೂ ಅತಿಥಿಗಳಿರಲಿಲ್ಲ. ಇದೇ ವರ್ಷದ ಫೆಬ್ರವರಿಯಲ್ಲಿ ತೇತಿಯಾನಾ ವೈದ್ಯಕೀಯ ಸಲಹೆಗಾಗಿ ಅಲೆಕ್ಸಾಂಡರ್ ಅವರನ್ನು ಸಂರ್ಪಸಿದಾಗ ಇವರ ನಡುವೆ ಮೊದಲ ಭೇಟಿಯಾಗಿ, ಪ್ರೇಮಾಂಕುರವಾಯಿತು. 
ಮುಂದಿನ ಕೆಲ ಭೇಟಿಗಳಲ್ಲಿ ಪ್ರೀತಿಯ ಮಾತುಕತೆ ಮುಂದುವರಿದು, ಮದುವೆಯಾಗಲು ನಿಶ್ಚಯಿಸಿದರು. ಮದುವೆಯ ವಿಧಿವಿಧಾನಗಳು ಮುಗಿದ ನಂತರ ಈ ನವದಂಪತಿ ಸಮೀಪದ ಬೇಕರಿಗೆ ತೆರಳಿ ಕೇಕ್ ಕತ್ತರಿಸಿದರು. ಆದಾಗ್ಯೂ, ಈ ಸಮಯದಲ್ಲಿಯೂ ಡ್ರೋನ್ ಒಂದು ಕಾಣಿಸಿಕೊಂಡಿತು, ಅದನ್ನು ಯೂಕ್ರೇನ್ ಸೇನೆ ಹೊಡೆದುರುಳಿಸಿತು. ಈ ಬೇಕರಿ ಈಗ ಒಂದು ರೀತಿಯ ಆಶ್ರಯ ತಾಣವಾಗಿ ಕಾರ್ಯನಿರ್ವಹಿಸುತ್ತಿದೆ. ಯುದ್ಧದ ಭೀತಿಯಲ್ಲೂ ಇಬ್ಬರೂ ಭವಿಷ್ಯದ ಬಗ್ಗೆ ಅಪಾರ ಭರವಸೆ ಹೊಂದಿದ್ದಾರೆ. ‘ಪ್ರತಿಕೂಲ ಪರಿಸ್ಥಿತಿಗಳಲ್ಲಿ ಹೊಸ ಜೀವನವನ್ನು ಪ್ರಾರಂಭಿಸುವುದು ಭವಿಷ್ಯದ ಮೇಲಿನ ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ’ ಎಂದು ತೇತಿಯಾನಾ ಹೇಳಿದ್ದಾರೆ.
ತೇತಿಯಾನಾ ಬಾಲ್ಯ ಅಜ್ಜಿಯ ಮನೆಯಲ್ಲಿ ಕಳೆಯಿತು. ಆ ಪ್ರದೇಶವೀಗ ರಷ್ಯಾದ ನಿಯಂತ್ರಣದಲ್ಲಿದೆ. ಬಾಲ್ಯದ ನೆನಪುಗಳನ್ನು ಜೀವಂತವಾಗಿರಿಸಲು ತೇತಿಯಾನಾ ಕೈಮೇಲೆ ಆ ಮನೆಯ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ‘ರಷ್ಯಾ ನಮ್ಮಿಂದ ಎಲ್ಲವನ್ನೂ ಕಸಿದುಕೊಳ್ಳಲು ಬಯಸುತ್ತಿರುವಾಗ, ಪ್ರೀತಿ, ಸೌಂದರ್ಯ, ಒಳ್ಳೆಯತನ ಮತ್ತು ಪರಸ್ಪರ ಸಹಾಯದ ಮೂಲಕ ಭರವಸೆಯನ್ನು ಜೀವಂತವಾಗಿಡುವುದು ಅತ್ಯಗತ್ಯ’ ಎಂದು ಅವರು ಹೇಳುತ್ತಾರೆ. 
ಮದುವೆ ನಿಶ್ಚಯವಾದಾಗ, ನೆನಪುಗಳನ್ನು ಉಳಿಸಿಕೊಳ್ಳಲು ಅಲೆಕ್ಸಾಂಡರ್ ಕ್ರಾಮಾತೋರ್ಸ್ಕ್ ನಗರವನ್ನು ಆಯ್ಕೆ ಮಾಡಿಕೊಂಡರು. ‘ಮುಂಬರುವ ತಿಂಗಳುಗಳಲ್ಲಿ ಇಲ್ಲಿ ಏನೂ ಉಳಿಯದಿರಬಹುದು’ ಎಂದು ಹೇಳುವಾಗ, ‘ಹೋರಾಟ ಇನ್ನೂ ಮುಗಿದಿಲ್ಲ’ ಎಂಬ ಸ್ಪಷ್ಟ ಭಾವ ಅಲೆಕ್ಸಾಂಡರ್ ಕಣ್ಣುಗಳಲ್ಲಿ ವ್ಯಕ್ತವಾಗಿತ್ತು. ಎರಡು-ಮೂರು ವರ್ಷಗಳ ಹಿಂದಷ್ಟೇ ಅಲೆಕ್ಸಾಂಡರ್ ಸುತ್ತಾಡಿದ ನಗರಗಳು, ಪಟ್ಟಣಗಳು ಮತ್ತು ಸಣ್ಣ ಹಳ್ಳಿಗಳಲ್ಲಿ ಇಂದು ಅನೇಕ ಸ್ಥಳಗಳು ಅವಶೇಷಗಳಾಗಿವೆ ಅಥವಾ ಸಂಪೂರ್ಣವಾಗಿ ನಾಶವಾಗಿವೆ. ಒಂದು ವರ್ಷದ ಹಿಂದಿನವರೆಗೂ ಕ್ರಾಮಾತೋರ್ಸ್ಕ್
ಮಾರುಕಟ್ಟೆ ಜನದಟ್ಟಣೆಯಿಂದ ಕೂಡಿರುತ್ತಿತ್ತು. ಆದರೆ, ಈಗ ವಾತಾವರಣ ಸಂಪೂರ್ಣ ಬದಲಾಗಿದೆ. ಕಟ್ಟಡಗಳ ಕಿಟಕಿಗಳಿಗೆ ಗಾಜಿನ ಬದಲು ಪ್ಲೈವುಡ್ ಅಳವಡಿಸಲಾಗಿದ್ದು, ಡ್ರೋನ್ ದಾಳಿಯಿಂದ ತಪ್ಪಿಸಿಕೊಳ್ಳಲು ರಸ್ತೆಗಳಲ್ಲಿ ಕಬ್ಬಿಣದ ಜಾಲರಿಗಳನ್ನು (ನೆಟ್​ಗಳನ್ನು) ಕಟ್ಟಲಾಗಿದೆ. ನಗರದ ಮುಖ್ಯ ಮೈದಾನವಾದ ‘ಪೀಸ್ ಸ್ಕೆ ್ವರ್’ ಅನ್ನು ದಾಳಿಗಳಿಂದ ರಕ್ಷಿಸಲು ಕಾಂಕ್ರೀಟ್ ತಡೆಗೋಡೆಗಳಿಂದ ಸುತ್ತುವರಿಯಲಾಗಿದೆ. ಕಳೆದ ಐದು ದಿನಗಳಲ್ಲಿ ನಗರದ ಮೇಲೆ 51 ಬಾರಿ ದಾಳಿಗಳು ನಡೆದಿವೆ. ಬಹುತೇಕ ಜನರು ವಲಸೆ ಹೋಗಿದ್ದಾರೆ.

ಪ್ರಮುಖ ಪ್ರಯೋಜನಗಳು