ವಾಷಿಂಗ್ಟನ್: ಇರಾನ್ ಜೊತೆಗಿನ ಯುದ್ಧದಿಂದ ಅಮೆರಿಕನ್ ಸೈನಿಕರನ್ನು ವಾಪಸ್ ಕರೆಸಿಕೊಳ್ಳುವಂತೆ ಆದೇಶಿಸುವ ಪ್ರಮುಖ ನಿರ್ಣಯವೊಂದನ್ನು ಯುಎಸ್ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ (US House Resolution) ಬುಧವಾರ ಅಂಗೀಕರಿಸಿದೆ. ಈ ನಿರ್ಣಯವು ಹೆಚ್ಚಾಗಿ ಸಾಂಕೇತಿಕವಾಗಿದ್ದರೂ, ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ರಾಜಕೀಯವಾಗಿ ದೊಡ್ಡ ಹೊಡೆತ ನೀಡಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಸದನದಲ್ಲಿ ಟ್ರಂಪ್ ಅವರ ರಿಪಬ್ಲಿಕನ್ ಪಕ್ಷವೇ ಬಹುಮತ ಹೊಂದಿದ್ದರೂ, ಆ ಪಕ್ಷದ ನಾಲ್ವರು ಸದಸ್ಯರು ಡೆಮೋಕ್ರಾಟ್‌ಗಳೊಂದಿಗೆ ಕೈಜೋಡಿಸಿ ನಿರ್ಣಯದ ಪರವಾಗಿ ಮತ ಚಲಾಯಿಸಿದ್ದಾರೆ. ಒಟ್ಟು 215-208 ಮತಗಳ ಅಂತರದಿಂದ ಈ ಮಸೂದೆ ಅಂಗೀಕಾರಗೊಂಡಿದ್ದು, ಈಗ ಸೆನೆಟ್‌ಗೆ ರವಾನೆಯಾಗಿದೆ. ಆದರೆ ಅಂತಿಮವಾಗಿ ಇದು ಅಧ್ಯಕ್ಷರ ವೀಟೋ (Veto) ಅಧಿಕಾರದ ಸವಾಲನ್ನು ಎದುರಿಸಬೇಕಾಗುತ್ತದೆ.
ಈ ಕುರಿತು ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಹೌಸ್ ಫಾರಿನ್ ಅಫೇರ್ಸ್ ಕಮಿಟಿ ಡೆಮೋಕ್ರಾಟ್ಸ್, ಅಮೆರಿಕದ ಜನರ ಪರವಾಗಿ ಡೊನಾಲ್ಡ್ ಟ್ರಂಪ್ ಅವರಿಗೆ ಸ್ಪಷ್ಟ ಸಂದೇಶ ರವಾನಿಸಲಾಗಿದ್ದು, ಇರಾನ್‌ನಲ್ಲಿ ಅವರು ನಡೆಸುತ್ತಿರುವ ಕಾನೂನುಬಾಹಿರ ಯುದ್ಧವನ್ನು ಕೊನೆಗೊಳಿಸುವ ಸಮಯ ಬಂದಿದೆ ಎಂದು ಕಿಡಿಕಾರಿದ್ದಾರೆ. ಮೂರು ತಿಂಗಳ ಹಿಂದೆ ಇರಾನ್ ವಿರುದ್ಧ ಯುದ್ಧ ಆರಂಭವಾದಾಗಿನಿಂದ, ರಿಪಬ್ಲಿಕನ್ ನಿಯಂತ್ರಿತ ಹೌಸ್, ಸೇನಾ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವಂತೆ ಟ್ರಂಪ್ ಮೇಲೆ ಒತ್ತಡ ಹೇರುವ ಮಸೂದೆಯನ್ನು ಅನುಮೋದಿಸಿರುವುದು ಇದೇ ಮೊದಲ ಬಾರಿಯಾಗಿದೆ.
ಯುದ್ಧ ಮತ್ತು ಶಾಂತಿಯ ನಿರ್ಧಾರಗಳಲ್ಲಿ ಕಾಂಗ್ರೆಸ್‌ನ ಸಾಂವಿಧಾನಿಕ ಪಾತ್ರವನ್ನು ಮರುಸ್ಥಾಪಿಸುವ ತಮ್ಮ ಪ್ರಯತ್ನದಲ್ಲಿ ಈ ಮತದಾನವು ಒಂದು ಮಹತ್ವದ ತಿರುವು ಎಂದು ಡೆಮೋಕ್ರಾಟ್‌ಗಳು ಭಾವಿಸಿದ್ದಾರೆ. ಇದೇ ರೀತಿಯ ನಿರ್ಣಯವೊಂದು ಮೇ ತಿಂಗಳ ಕೊನೆಯಲ್ಲಿ ಸೆನೆಟ್‌ನಲ್ಲಿ ಪ್ರಮುಖ ಕಾರ್ಯವಿಧಾನದ ಹಂತವನ್ನು ದಾಟಿದ್ದು, ಈ ವಾರದ ಆರಂಭದಲ್ಲೇ ಮೇಲ್ಮನೆಯಲ್ಲೂ ಇದು ಅಂಗೀಕಾರಗೊಳ್ಳಬಹುದು. ಇತ್ತ ರಿಪಬ್ಲಿಕನ್ ನಾಯಕರು ಇದರ ಅಂಗೀಕಾರವನ್ನು ತಡೆಯಲು ಪ್ರಯತ್ನಿಸುವ ಸಾಧ್ಯತೆಯೂ ಇದೆ.
ಇತ್ತ ಉಭಯ ದೇಶಗಳ ಸಶಸ್ತ್ರ ಪಡೆಗಳ ನಡುವೆ ನಿರಂತರ ಗುಂಡಿನ ಚಕಮಕಿ ನಡೆಯುತ್ತಿದ್ದರೂ ಮತ್ತು ಶಾಂತಿ ಮಾತುಕತೆಯಲ್ಲಿ ಯಾವುದೇ ಪ್ರಗತಿ ಕಾಣದಿದ್ದರೂ, ಇರಾನ್ ವಿರುದ್ಧದ ಯುದ್ಧ ಈಗಾಗಲೇ ಮುಗಿದಿದೆ ಎಂದು ಟ್ರಂಪ್ ನೇತೃತ್ವದ ಸರ್ಕಾರ ವಾದಿಸುತ್ತಿದೆ.
ಫೆಬ್ರವರಿ ಕೊನೆಯಲ್ಲಿ ಕಾಂಗ್ರೆಸ್ ಅನುಮತಿಯಿಲ್ಲದೆ ಇಸ್ರೇಲ್ ಜೊತೆಗೂಡಿ ಇರಾನ್ ಮೇಲೆ ವೈಮಾನಿಕ ದಾಳಿ ನಡೆಸುವ ಮೂಲಕ ಟ್ರಂಪ್ ಸಂವಿಧಾನವನ್ನು ಉಲ್ಲಂಘಿಸಿದ್ದಾರೆ ಎಂದು ಡೆಮೋಕ್ರಾಟ್‌ಗಳು ಆರೋಪಿಸಿದ್ದಾರೆ. ವಾರ್ ಪವರ್ಸ್ ಆಕ್ಟ್ ಪ್ರಕಾರ, ಅಧ್ಯಕ್ಷರು ಯುದ್ಧದ ಪರಿಸ್ಥಿತಿಗೆ ಸೇನೆಯನ್ನು ನಿಯೋಜಿಸಿದ 60 ದಿನಗಳ ಒಳಗೆ ಕಾಂಗ್ರೆಸ್‌ನ ಅನುಮೋದನೆಯನ್ನು ಪಡೆಯಬೇಕು. ಆ ಗಡುವು ಈಗಾಗಲೇ ವಾರಗಳ ಹಿಂದೆಯೇ ಮುಗಿದಿರುವುದರಿಂದ ಟ್ರಂಪ್ ಕಾನೂನು ಉಲ್ಲಂಘಿಸುತ್ತಿದ್ದಾರೆ ಎಂದು ಡೆಮೋಕ್ರಾಟ್‌ಗಳು ವಾದಿಸುತ್ತಿದ್ದಾರೆ.
ವೈಟ್‌ಹೌಸ್ ಈ ವಾದವನ್ನು ತಳ್ಳಿಹಾಕಿದ್ದು, ಏಪ್ರಿಲ್‌ನಲ್ಲಿ ನಡೆದ ಕದನ ವಿರಾಮದಿಂದಾಗಿ ಆ 60 ದಿನಗಳ ಸಮಯದ ಮಿತಿ ತಾತ್ಕಾಲಿಕವಾಗಿ ಸ್ಥಗಿತಗೊಂಡಿತ್ತು ಎಂದು ವಾದಿಸಿದೆ. ಆದರೆ ಟ್ರಂಪ್ ಪದೇ ಪದೇ ದಾಳಿ ಪುನರಾರಂಭಿಸುವ ಎಚ್ಚರಿಕೆ ನೀಡುತ್ತಿರುವುದರಿಂದ ಈ ವಾರ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದೆ. ಇತ್ತೀಚೆಗಷ್ಟೇ ಅಮೆರಿಕವು ಇರಾನ್‌ನ ಡ್ರೋನ್‌ಗಳನ್ನು ಹೊಡೆದುರುಳಿಸಿ, ನಿಯಂತ್ರಣ ಕೇಂದ್ರದ ಮೇಲೆ ದಾಳಿ ನಡೆಸಿದೆ ಎಂದು ಹೇಳಿಕೊಂಡರೆ, ಟೆಹ್ರಾನ್ ಪಡೆಗಳು ಹಲವಾರು ಕೊಲ್ಲಿ ನೆರೆಹೊರೆಯ ದೇಶಗಳ ಮೇಲೆ ಡ್ರೋನ್‌ಗಳು ಮತ್ತು ಕ್ಷಿಪಣಿಗಳನ್ನು ಉಡಾಯಿಸಿವೆ.
ಈ ನಡುವೆ, ನವೆಂಬರ್‌ನಲ್ಲಿ ನಡೆಯಲಿರುವ ಮಧ್ಯಾವಧಿ ಚುನಾವಣೆಗಳ ರಾಜಕೀಯ ಒತ್ತಡ ಹೆಚ್ಚಾಗುತ್ತಿರುವುದರಿಂದ ಟ್ರಂಪ್ ಬೆಂಬಲಿತ ರಿಪಬ್ಲಿಕನ್ ನಾಯಕರಲ್ಲಿ ಆತಂಕ ಮತ್ತು ಹತಾಶೆ ಎದ್ದು ಕಾಣುತ್ತಿದೆ ಎಂದು ತಿಳಿದುಬಂದಿದೆ(ಏಜೆನ್ಸೀಸ್).