ಸೂಪರ್​ಮಾರ್ಕೆಟ್​ನಲ್ಲಿ ಪಿಂಕ್​ ಬಾಸ್ಕೆಟ್​ ಹಿಡಿದ್ರೆ ಸಾಕು ಒಪ್ಪಿಗೆ ಕೊಟ್ಟಂತೆ... ಸಖತ್​ ಸದ್ದು ಮಾಡುತ್ತಿದೆ ಹೊಸ ಟ್ರೆಂಡ್​! Pink Basket 
ವಿದೇಶ

ಸೂಪರ್​ಮಾರ್ಕೆಟ್​ನಲ್ಲಿ ಪಿಂಕ್​ ಬಾಸ್ಕೆಟ್​ ಹಿಡಿದ್ರೆ ಸಾಕು ಒಪ್ಪಿಗೆ ಕೊಟ್ಟಂತೆ... ಸಖತ್​ ಸದ್ದು ಮಾಡುತ್ತಿದೆ ಹೊಸ ಟ್ರೆಂಡ್​! Pink Basket

ಪ್ರಮುಖ ಮುಖ್ಯಾಂಶಗಳು

  • ಫಿನ್‌ಲ್ಯಾಂಡ್ ಸೂಪರ್‌ಮಾರ್ಕೆಟ್‌ನಲ್ಲಿ ಪಿಂಕ್ ಬಾಸ್ಕೆಟ್ ಹಿಡಿದು ಸಂಗಾತಿಯ ಹುಡುಕಾಟ ನಡೆಸುತ್ತಿರುವ ಸಿಂಗಲ್ಸ್
  • ಡಿಜಿಟಲ್ ಡೇಟಿಂಗ್ ಆ್ಯಪ್‌ಗಳಿಂದ ಬೇಸತ್ತು ವಿನೂತನ ಹಾದಿ ಹಿಡಿದ ಯುವಜನತೆ
  • ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ ಫಿನ್‌ಲ್ಯಾಂಡ್‌ನ ಈ ಸೂಪರ್‌ಮಾರ್ಕೆಟ್ ಟ್ರೆಂಡ್
  • ಬಾರ್ ಅಥವಾ ಪಬ್‌ಗಳಿಗಿಂತ ಸೂಪರ್‌ಮಾರ್ಕೆಟ್‌ನಲ್ಲಿ ಪ್ರೀತಿ ಹುಡುಕುವುದೇ ಸುರಕ್ಷಿತ ಎನ್ನುತ್ತಿದ್ದಾರೆ ಯುವಕ ಯುವತಿಯರು
Pink Basket : ಆಧುನಿಕ ಜಗತ್ತಿನಲ್ಲಿ ಡಿಜಿಟಲ್ ಡೇಟಿಂಗ್ ಆ್ಯಪ್‌ಗಳ ಆರ್ಭಟ ಹೆಚ್ಚುತ್ತಿದ್ದಂತೆ ಪ್ರೀತಿ-ಪ್ರೇಮ ಹುಡುಕಾಟ ಎಂಬುದು ಒಂದು ಒಗಟಾಗಿ ಬದಲಾಗಿದೆ. ಆನ್‌ಲೈನ್ ಡೇಟಿಂಗ್‌ನಿಂದ ಬೇಸತ್ತಿರುವ ಯುವಜನತೆಗೆ ಅದೆಷ್ಟೋ ದೇಶಗಳು ಹೊಸ ಹಾಗೂ ವಿನೂತನ ದಾರಿಗಳನ್ನು ಹುಡುಕುತ್ತಿವೆ. ಇದೀಗ ಯುರೋಪಿಯನ್ ರಾಷ್ಟ್ರವಾದ ಫಿನ್‌ಲ್ಯಾಂಡ್‌ ಪ್ರೀತಿ ಹುಡುಕಲು ಬಾರ್ ಅಥವಾ ಕೆಫೆಗಳಿಗೆ ಅಲೆಯುವ ಬದಲು ಬಾಯ್‌ಫ್ರೆಂಡ್ ಅಥವಾ ಗರ್ಲ್‌ಫ್ರೆಂಡ್​ಗಾಗಿ ಸೂಪರ್‌ಮಾರ್ಕೆಟ್‌ಗೆ ಹೋದರೆ ಸಾಕು ಎನ್ನುವ ಹೊಸ ಟ್ರೆಂಡ್‌ಗೆ ಮುನ್ನುಡಿ ಬರೆದಿದೆ!
ಹೌದು, ಕೇಳಲು ಅಚ್ಚರಿಯೆನಿಸಿದರೂ ಇದು ನಂಬಲೇಬೇಕಾದ ಸತ್ಯ. ಫಿನ್‌ಲ್ಯಾಂಡ್‌ ಸೂಪರ್‌ಮಾರ್ಕೆಟ್‌ಗಳಲ್ಲಿ ಸಿಂಗಲ್ಸ್ ಆಗಿರುವವರು ಒಂಟಿತನ ಕಳಚಿಕೊಳ್ಳಲು ರೋಚಕ ಮಾರ್ಗವೊಂದನ್ನು ಕಂಡುಕೊಂಡಿದ್ದಾರೆ. ಸೂಪರ್‌ಮಾರ್ಕೆಟ್‌ಗೆ ಭೇಟಿ ನೀಡುವ ಗ್ರಾಹಕರು ತಮಗೆ ಸಂಗಾತಿ ಬೇಕು ಎಂಬುದನ್ನು ಬಹಿರಂಗವಾಗಿ ಘೋಷಿಸಲು ಕೇವಲ ಕೈಯೊಂದರಲ್ಲಿ ಗುಲಾಬಿ ಬಣ್ಣದ (ಪಿಂಕ್) ಬುಟ್ಟಿಯನ್ನು ಹಿಡಿದುಕೊಂಡು ಮಾರುಕಟ್ಟೆಯಲ್ಲಿ ಶಾಪಿಂಗ್ ಮಾಡಿದರೆ ಸಾಕು, ಪ್ರೇಮದ ಹುಡುಕಾಟ ಸುಲಭವಾಗುತ್ತದೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ವಿಭಿನ್ನ ಟ್ರೆಂಡ್ ಈಗ ಭಾರಿ ವೈರಲ್ ಆಗಿದ್ದು, ಡಿಜಿಟಲ್ ಕಂಟೆಂಟ್ ಕ್ರಿಯೇಟರ್ ರೋಯಾ ಫಾಕ್ಸ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ಬಗ್ಗೆ ವಿಸ್ತಾರವಾಗಿ ಹಂಚಿಕೊಂಡಿದ್ದಾರೆ. ಬಾರ್ ಅಥವಾ ಪಬ್‌ಗಳಿಗೆ ಹೋಗಿ ಅಪರಿಚಿತರನ್ನು ಭೇಟಿಯಾಗುವುದಕ್ಕಿಂತಲೂ ಈ ಸೂಪರ್‌ಮಾರ್ಕೆಟ್ ವಿಧಾನವು ಸುರಕ್ಷಿತ ಹಾಗೂ ಮಜಾವಾಗಿದೆ ಎಂದು ಅವರು ವಿವರಿಸಿದ್ದಾರೆ. ಸಾಂಪ್ರದಾಯಿಕ ವಿಧಾನಗಳಿಗೆ ತಿಲಾಂಜಲಿ ನೀಡಿರುವ ಇಲ್ಲಿನ ಯುವಜನರು ಈ ಸರಳ ಉಪಾಯಕ್ಕೆ ಮನಸೋತಿದ್ದಾರೆ.
ಫಿನ್‌ಲ್ಯಾಂಡ್‌ ವಾಸಿಯಾದ ಕಾಶಿವಿ ಎಂಬ ಮತ್ತೊಬ್ಬ ಇನ್‌ಸ್ಟಾಗ್ರಾಮ್ ಬಳಕೆದಾರರೂ ಸಹ ಈ 'ಪಿಂಕ್ ಬಾಸ್ಕೆಟ್' ವಿಧಾನದ ಬಗ್ಗೆ ಅನುಭವ ಹಂಚಿಕೊಂಡಿದ್ದಾರೆ. ತಾವು ನಾಲ್ಕು ವರ್ಷಗಳಿಂದ ಅಲ್ಲಿಯೇ ವಾಸವಿದ್ದರೂ ಇತ್ತೀಚೆಗಷ್ಟೇ ಈ ವಿನೂತನ ಪದ್ಧತಿ ಗೊತ್ತಾಯಿತು ಎಂದು ಹೇಳಿದ್ದಾರೆ. ಇಲ್ಲಿನ ಸೂಪರ್‌ಮಾರ್ಕೆಟ್‌ಗಳಲ್ಲಿ ಬೂದು (ಗ್ರೇ) ಹಾಗೂ ಗುಲಾಬಿ (ಪಿಂಕ್) ಬಣ್ಣದ ಎರಡು ರೀತಿಯ ಬುಟ್ಟಿಗಳಿರುತ್ತವೆ. ನೀವು ಪಿಂಕ್ ಬಣ್ಣದ ಬುಟ್ಟಿಯನ್ನು ಆರಿಸಿಕೊಂಡರೆ, ನೀವು ಸಿಂಗಲ್ ಹಾಗೂ ಸಂಗಾತಿಗಾಗಿ ಎದುರು ನೋಡುತ್ತಿದ್ದೀರಿ ಎಂದರ್ಥ.
ಆದರೆ, ಈ ಪದ್ಧತಿಯಲ್ಲಿ ಕಟ್ಟುನಿಟ್ಟಾದ ನಿಯಮವೊಂದಿದೆ. ಪರಸ್ಪರ ಒಪ್ಪಿಗೆ ಹಾಗೂ ಮನ್ನಣೆಯ ಮೇರೆಗೆ ಮಾತ್ರ ಈ ಆಟ ನಡೆಯುತ್ತದೆ. ನಿಮ್ಮ ಕೈಯಲ್ಲೂ ಪಿಂಕ್ ಬಾಸ್ಕೆಟ್ ಇದ್ದರೆ ಮಾತ್ರ ಪಿಂಕ್ ಬಾಸ್ಕೆಟ್ ಹಿಡಿದಿರುವ ಇನ್ನೊಬ್ಬರ ಬಳಿ ಹೋಗಿ ಮಾತನಾಡಬಹುದು. ನಿಮ್ಮ ಕೈಯಲ್ಲಿ ಗ್ರೇ ಬಣ್ಣದ ಬುಟ್ಟಿಯಿದ್ದರೆ, ಪಿಂಕ್ ಬಾಸ್ಕೆಟ್ ಹಿಡಿದಿರುವ ಯಾರೊಬ್ಬರ ಬಳಿಯೂ ತೆರಳುವಂತಿಲ್ಲ. ಈ ಕಟ್ಟುಪಾಡುಗಳು ಎಲ್ಲರಿಗೂ ಗೌರವಯುತ ವಾತಾವರಣ ಕಲ್ಪಿಸಿವೆ.
ಫಿನ್‌ಲ್ಯಾಂಡ್‌ ದೇಶದ ಎಲ್ಲ ಸೂಪರ್‌ಮಾರ್ಕೆಟ್‌ಗಳಲ್ಲಿ ಈ ಸೌಲಭ್ಯ ಲಭ್ಯವಿಲ್ಲ. ಬದಲಿಗೆ ಇಲ್ಲಿನ ಪ್ರಮುಖ ಕೆಯ್ ಸೂಪರ್‌ಮಾರ್ಕೆಟ್ ಮತ್ತು ಎಸ್-ಮಾರ್ಕೆಟ್‌ನ ಆಯ್ದ ಮಳಿಗೆಗಳಲ್ಲಿ ಮಾತ್ರ ಈ ಪ್ರಯೋಗವನ್ನು ಪರಿಚಯಿಸಲಾಗಿದೆ. ಡೇಟಿಂಗ್ ಆ್ಯಪ್‌ಗಳ ಕಿರಿಕಿರಿಯಿಂದ ಬೇಸತ್ತಿರುವ ಇಂದಿನ ಯುವಜನತೆಗೆ ಈ ವಿಶಿಷ್ಟ ಪಿಂಕ್ ಬಾಸ್ಕೆಟ್ ಐಡಿಯಾ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಮೆಚ್ಚುಗೆ ಗಳಿಸಿದ್ದು, ಜಾಗತಿಕ ಮಟ್ಟದಲ್ಲೂ ಸದ್ದು ಮಾಡುತ್ತಿದೆ, (ಏಜೆನ್ಸೀಸ್​).