ಕರಗಿ ಹೋಯ್ತು ಉಕ್ರೇನ್​ ಸದೆಬಡಿಯಲು ಜಿದ್ದಿಗೆ ಬಿದ್ದಿರುವ ಪುಟಿನ್ ಸರ್ಕಾರದ ಖಜಾನೆ | Russia ​ 
ವಿದೇಶ

ರಷ್ಯಾಗೆ ಬಿಗ್ ಶಾಕ್! ಕರಗಿ ಹೋಯ್ತು ಉಕ್ರೇನ್​ ಸದೆಬಡಿಯಲು ಜಿದ್ದಿಗೆ ಬಿದ್ದಿರುವ ಪುಟಿನ್ ಸರ್ಕಾರದ ಖಜಾನೆ | Russia ​

ಪ್ರಮುಖ ಮುಖ್ಯಾಂಶಗಳು

  • ಯುದ್ಧದ ಹೊಡೆತಕ್ಕೆ ರಷ್ಯಾ ಆರ್ಥಿಕತೆ ತತ್ತರ
  • ಸಮರ ವೆಚ್ಚ ಏರಿಕೆ, ರಷ್ಯಾ ಖಜಾನೆ ಮೇಲೆ ಭಾರಿ ಒತ್ತಡ
  • ಯುದ್ಧ ಮುಂದುವರಿದಂತೆ ರಷ್ಯಾಕ್ಕೆ ಹಣಕಾಸಿನ ಬಿಕ್ಕಟ್ಟು
ಮಾಸ್ಕೊ: ಉಕ್ರೇನ್ ವಿರುದ್ಧ ದೀರ್ಘ ಯುದ್ಧಕ್ಕೆ ಶತಕೋಟಿ ಹಣ ಚೆಲ್ಲುತ್ತಿರುವ ರಷ್ಯಾಗೆ ಇದೀಗ ಇತಿಹಾಸದಲ್ಲೇ ಹಿಂದೆಂದೂ ಕಾಣದಂತಹ ಭೀಕರ ಆರ್ಥಿಕ ಸಂಕಷ್ಟ ಕಾಡಲಾರಂಭಿಸಿದೆ. ಇದಕ್ಕೆ ಇತ್ತೀಚಿನ ಒಂದು ವರದಿಯೇ ಸಾಕ್ಷಿ.
ರಷ್ಯಾ ಸರ್ಕಾರಿ ಖಜಾನೆಯ ಪ್ರಮುಖ ಖಾತೆಯಲ್ಲಿನ ಬಾಕಿ ಹಣ ಭಾರಿ ಪ್ರಮಾಣದಲ್ಲಿ ಕುಸಿದಿದ್ದು, ಮೈನಸ್ 5.5 ಟ್ರಿಲಿಯನ್ ರೂಬೆಲ್ಸ್‌ಗೆ (ಸುಮಾರು 6 ಲಕ್ಷ ಕೋಟಿ ರೂ.) ತಲುಪಿದೆ ಎಂಬ ಆಘಾತಕಾರಿ ಸಂಗತಿಯನ್ನು 'ಬ್ಲೂಮ್‌ಬರ್ಗ್' ತನ್ ವರದಿಯಲ್ಲಿ ಪ್ರಕಟಿಸಿದೆ. ಪೂರ್ವನಿರ್ಧರಿತ ಸರ್ಕಾರಿ ಪಾವತಿಗಳನ್ನು ಹಾಗೂ ಹಣಕಾಸು ವಹಿವಾಟುಗಳನ್ನು ಸಮಯಕ್ಕೆ ಸರಿಯಾಗಿ ಪೂರೈಸಲು ಪುಟಿನ್​ ಸರ್ಕಾರದ ಬೊಕ್ಕಸದಲ್ಲಿ ಹಣವೇ ಇಲ್ಲ ಎಂದು ರಷ್ಯಾದ ಹಣಕಾಸು ಸಚಿವ ಆಂಟನ್ ಸಿಲುವಾನೋವ್ ಅವರು ಎಚ್ಚರಿಸಿದ್ದಾರೆ.
ಕೇವಲ ಸೇನೆಯ ಅಗತ್ಯಗಳಿಗಾಗಿ ಅಪಾರ ಪ್ರಮಾಣದ ಹಣವನ್ನು ನೀರು ಪಾಲು ಮಾಡುತ್ತಿರುವ ರಷ್ಯಾ ಸರ್ಕಾರದ ಬೊಕ್ಕಸ ಖಾಲಿಯಾಗುವ ಹಂತಕ್ಕೆ ಬಂದು ತಲುಪಿದೆ ಎಂದು ಹೇಳಲಾಗಿದೆ. ರಷ್ಯಾದ ಫೆಡರಲ್ ಖಜಾನೆಯ ಮುಖ್ಯ ಖಾತೆಯಲ್ಲಿನ ಬಾಕಿ ಹಣವು ಮೈನಸ್​ 5.5 ಟ್ರಿಲಿಯನ್ ರೂಬೆಲ್ಸ್‌ಗೆ ಇಳಿಕೆ ಕಂಡಿರುವುದಕ್ಕೆ ಸದ್ಯ ದೇಶದ ಆರ್ಥಿಕತೆಯೇ ತಲ್ಲಣಗೊಂಡಿದೆ. ಈ ಕುರಿತಂತೆ ಹಣಕಾಸು ಸಚಿವರು ನೀಡಿದ ಎಚ್ಚರಿಕೆಯ ಬೆನ್ನಲ್ಲೇ ಇದೀಗ ರಷ್ಯಾದಲ್ಲಿ ಕಠಿಣ ಆರ್ಥಿಕ ನಿರ್ಬಂಧಗಳನ್ನು ಜಾರಿಗೆ ತರಲಾಗಿದೆ.

ಸೇನಾ ವೆಚ್ಚಕ್ಕೆ ಯಾವುದೇ ಕಡಿವಾಣವಿಲ್ಲ!

ಆರ್ಥಿಕ ಸಂಕಷ್ಟದಿಂದ ಪಾರಾಗಲು ರಷ್ಯಾ ಸರ್ಕಾರ ಭಾರಿ ಕಡಿತದ ಮಾರ್ಗಗಳನ್ನು ಕಂಡುಕೊಂಡಿದೆ. ಆದರೆ, ಆಶ್ಚರ್ಯ ಎಂದರೆ, ಸೇನಾ ವೆಚ್ಚಕ್ಕೆ ಮಾತ್ರ ಯಾವುದೇ ರೀತಿಯಲ್ಲೂ ಹಣದ ಅಭಾವ ಅಥವಾ ಕೊರತೆ ಕಾಣದಂತೆ ನೋಡಿಕೊಳ್ಳಲು ತಿಳಿಸಲಾಗಿದೆ. ಅಲ್ಲಿಗೆ, ಮಿಲಿಟರಿಯೇತರ ವೆಚ್ಚ ಶೇ.35ರಷ್ಟು ಕಡಿತಗೊಳಿಸಲಾಗಿದೆ. ದೇಶದ ಅಭಿವೃದ್ಧಿ ಹಾಗೂ ಕಲ್ಯಾಣ ಯೋಜನೆಗಳಿಗೆ ಮೀಸಲಿಟ್ಟಿದ್ದ ಹಣಕ್ಕೆ ಬ್ರೇಕ್​ ಹಾಕಲಾಗಿದೆ. ಜತೆಗೆ ಶೇ.15ರಷ್ಟು ಫೆಡರಲ್ ಸರ್ಕಾರಿ ಉದ್ಯೋಗಿಗಳನ್ನು ವಜಾಗೊಳಿಸಲು ತೀರ್ಮಾನಿಸಲಾಗಿದೆ.

ಡಬಲ್ ಆದ ಬಜೆಟ್ ಕೊರತೆ

ದೇಶದ ಬಜೆಟ್ ಕೊರತೆಯು 5.9 ಟ್ರಿಲಿಯನ್ ರೂಬೆಲ್ಸ್‌ಗೆ (ಸುಮಾರು 6.5 ಲಕ್ಷ ಕೋಟಿ ರೂ.) ತಲುಪಿದ್ದು, ಇದು ಕಳೆದ ವರ್ಷಕ್ಕಿಂತ ದುಪ್ಪಟ್ಟಾಗಿದೆ. ರಷ್ಯಾ ಸಾಲದ ಬಡ್ಡಿ ಪಾವತಿಗೇ ಬಜೆಟ್‌ನ ಶೇ.9ರಷ್ಟು (4 ಟ್ರಿಲಿಯನ್ ರೂಬೆಲ್ಸ್) ವಿನಿಯೋಗ ಮಾಡುತ್ತಿದೆ. ಆದಾಗ್ಯೂ, ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸೇನಾ ವೆಚ್ಚವನ್ನು ಕಡಿತಗೊಳಿಸಲು ಸ್ಪಷ್ಟವಾಗಿ ನಿರಾಕರಿಸಿದ್ದು, ಸಾರ್ವಜನಿಕ ಕಲ್ಯಾಣ ಯೋಜನೆಗಳ ಅನುದಾನಕ್ಕೆ ಕತ್ತರಿ ಹಾಕುವುದಕ್ಕಷ್ಟೇ ಆದೇಶಿಸಿರುವುದು ಸದ್ಯ ಜನತೆಯ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಸುದ್ದಿ ಮುಚ್ಚಿಡಲು ರಷ್ಯಾ ಯತ್ನ, ಅಮೆರಿಕ ಗೌಪ್ಯ ಸಭೆ

ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ಈ ಕೊರತೆಯು ಕೇವಲ ತಾತ್ಕಾಲಿಕ ಬಿಕ್ಕಟ್ಟು ಎಂದು ಹೇಳಿಕೊಳ್ಳುತ್ತಿದ್ದರೆ, ರಷ್ಯಾದ ಮಾಧ್ಯಮಗಳು ಈ ಬಿಕ್ಕಟ್ಟಿನ ಬಗ್ಗೆ ತುಟಿ ಬಿಚ್ಚದೆ, ಮೌನಕ್ಕೆ ಶರಣಾಗಿವೆ. ಈ ನಡುವೆ ರಷ್ಯಾದ ಸೇನಾ ಮೂಲಸೌಕರ್ಯಗಳ ಮೇಲೆ ಉಕ್ರೇನ್ ತೀವ್ರ ದಾಳಿ ನಡೆಸುತ್ತಿದ್ದು, ರಷ್ಯಾದ ವಾಸ್ತವ ಆರ್ಥಿಕ ಮತ್ತು ಸೇನಾ ಹಿನ್ನಡೆಯ ಸ್ಥಿತಿಗತಿಯನ್ನು ಪರಿಶೀಲಿಸಲು ಅಮೆರಿಕದ ಸಿಐಎ (CIA) ನಿರ್ದೇಶಕ ಜಾನ್ ರೇಟ್‌ಕ್ಲಿಫ್ ಗೌಪ್ಯವಾಗಿ ಮಾಸ್ಕೋಗೆ ಭೇಟಿ ನೀಡಿದ್ದಾರೆ ಎಂದು ವರದಿಯಾಗಿದೆ,(ಏಜೆನ್ಸೀಸ್).