Chinese jasmine coffee 
ವಿದೇಶ

ಚೀನೀ ಜಾಸ್ಮಿನ್ ಕಾಫಿ ನಿರಂತರ ಸೇವನೆಯಿಂದ ಲಿವರ್​ ಡ್ಯಾಮೆಜ್​! ಆಸ್ಪತ್ರೆಗೆ ದಾಖಲಾದ ಭಾರತೀಯ ಯುವಕ..

ಚೀನಾ: ಒಂದು ತಿಂಗಳು ಕಾಲ 'ಜಾಸ್ಮಿನ್ ಬ್ಲ್ಯಾಕ್ ಕಾಫಿ'(Chinese jasmine coffee) ಸೇವನೆ ಮಾಡಿದ ಹಿನ್ನೆಲೆ ಭಾರತೀಯ ಯುವಕನಿಗೆ ತೀವ್ರವಾದ ಲಿವರ್ ಡ್ಯಾಮೇಜ್ (ಹೆಪಟೈಟಿಸ್ ಮತ್ತು ಜಾಂಡೀಸ್) ಉಂಟಾಗಿ ಆಸ್ಪತ್ರೆಗೆ ದಾಖಲಾಗಿದ್ದಾನೆ ಎಂದು ವರದಿಯಾಗಿದೆ.
ಕೇರಳದ ಪ್ರಸಿದ್ಧ ಲಿವರ್ ತಜ್ಞ ಡಾ. ಸೈರಿಯಾಕ್ ಅಬ್ಬಿ ಫಿಲಿಪ್ಸ್ (ದಿ ಲಿವರ್ ಡಾಕ್) ಅವರು ಸಾಮಾಜಿಕ ಮಾಧ್ಯಮದಲ್ಲಿ ಈ ಘಟನೆಯನ್ನು ಹಂಚಿಕೊಂಡಿದ್ದು, ಈಗ ವೈರಲ್ ಆಗಿದೆ.
ಡಾ. ಫಿಲಿಪ್ಸ್ ಅವರು ತಮ್ಮ ಎಕ್ಸ್ (ಟ್ವಿಟರ್) ಪೋಸ್ಟ್‌ನಲ್ಲಿ ವಿವರಿಸಿದಂತೆ, ಚೀನೀ ಮೂಲದ 'ಜಾಸ್ಮಿನ್ ಬ್ಲ್ಯಾಕ್ ಕಾಫಿ' ಎಂಬ ಇನ್‌ಸ್ಟಂಟ್ ಹರ್ಬಲ್ ಪೌಡರ್ ಪಾನೀಯವನ್ನು ದಿನಕ್ಕೆ 2-3 ಕಪ್‌ಗಳಂತೆ ಸೇವಿಸಿದ್ದು! ರೋಗಿಗೆ ಕಣ್ಣುಗಳು ಹಳದಿಯಾಗುವುದು, ಮೂತ್ರದ ಬಣ್ಣ ಕಂದು, ಕೈ-ಕಾಲುಗಳಲ್ಲಿ ತೀವ್ರ ತುರಿಕೆ ಮತ್ತು ಇತರ ಲಕ್ಷಣಗಳು ಕಂಡುಬಂದವು. ತನಿಖೆಯ ನಂತರ ತಿಳಿದದ್ದು – ರೋಗಿ ತನ್ನ ರೂಮ್‌ಮೇಟ್ ನೀಡಿದ ಚೀನೀ 'ಜಾಸ್ಮಿನ್ ಕಾಫಿ' ಬ್ರ್ಯಾಂಡ್ 'ಡಯಾನ್ ಎರ್ ವಾ'ಯನ್ನು ಸುಮಾರು ಒಂದು ತಿಂಗಳು ಸೇವಿಸುತ್ತಿದ್ದ ಎಂದು ಹೇಳಿದ್ದಾರೆ.
ಈ ಪಾನೀಯದಲ್ಲಿ ನಿಜವಾದ ಜಾಸ್ಮಿನ್ (ಜಾಸ್ಮಿನಮ್ ಆಫಿಸಿನೇಲ್ ಅಥವಾ ಸಂಬಕ್) ಇಲ್ಲ. ಬದಲಿಗೆ ವಿಷಕಾರಿ ಸಸ್ಯಗಳಾದ ನೈಟ್-ಬ್ಲೂಮಿಂಗ್ ಜಾಸ್ಮಿನ್ (ಸೆಸ್ಟ್ರಮ್ ಡೈಯರ್ನಮ್) ಅಥವಾ ಇತರ ಟಾಕ್ಸಿಕ್ ಜಾಸ್ಮಿನ್ ವಿಧಗಳು ಬಳಕೆಯಾಗಿವೆ. ಇವುಗಳಲ್ಲಿ ಸ್ಟೀರಾಯ್ಡಲ್ ಗ್ಲೈಕೋಸೈಡ್‌ಗಳು ಇದ್ದು, ಇದು ವಿಟಮಿನ್ ಡಿ3 ರೂಪಕ್ಕೆ ಪರಿವರ್ತನೆಯಾಗಿ ಅತಿಯಾದ ಕ್ಯಾಲ್ಸಿಯಂ ಹೀರಿಕೊಳ್ಳುವಿಕೆಗೆ ಕಾರಣವಾಗುತ್ತದೆ. ಇದರಿಂದ ಲಿವರ್, ಕಿಡ್ನಿ ಮತ್ತು ಹೃದಯಕ್ಕೆ ಗಂಭೀರ ಹಾನಿ ಉಂಟಾಗಬಹುದು ಎಂದು ವೈದ್ಯರು ಎಚ್ಚರಿಸಿದ್ದಾರೆ,(ಏಜೆನ್ಸೀಸ್​).