Iran Israel War: ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ನಿಧನದ ಬಳಿಕ ಯುವತಿಯೊಬ್ಬಳು ಹಂಚಿಕೊಂಡ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಕಿಚ್ಚು ಹತ್ತಿಸಿದೆ.
ಭಾನುವಾರ ಮೊರ್ಟಿಸಿಯಾ ಆಡಮ್ಸ್ ಎಂಬ ಯುವತಿಯು ತನ್ನ ಎಕ್ಸ್ ಖಾತೆಯಲ್ಲಿ, ಕೆನಡಾದಲ್ಲಿ ನಡೆದ ಬೃಹತ್ ಪ್ರತಿಭಟನಾ ರ್ಯಾಲಿಯಲ್ಲಿ ಭಾಗವಹಿಸಿದ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಅದರಲ್ಲಿ ಇಂದು ಇರಾನ್‌ನ ಪಾಲಿಗೆ ಕತ್ತಲೆ ಸರಿದು ಬೆಳಕು ಮೂಡಿದ ದಿನ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.
ತನ್ನನ್ನು ತಾನು ಇರಾನಿನ ನಿರಾಶ್ರಿತ ಎಂದು ಕರೆದುಕೊಳ್ಳುವ ಈ ಮಹಿಳೆ ಖಮೇನಿ ಹತ್ಯೆಯ ಸುದ್ದಿಗೆ ಅತ್ಯಂತ ಕಟುವಾಗಿ ಪ್ರಯಿಕ್ರಿಯಿಸಿದ್ದು, ನಿಮ್ಮ ಸಮಾಧಿಯ ಮೇಲೆ ನಾವು ನೃತ್ಯ ಮಾಡುತ್ತೇವೆ ಎಂದು ನಾನು ಹೇಳಿದೆ, ಅಲ್ಲವೇ? ಎಂದು ಆಕ್ರೋಶ ಹೊರಹಾಕಿದ್ದಾರೆ.
ಯುವತಿಯು ಖಮೇನಿಯ ಚಿತ್ರಕ್ಕೆ ಬೆಂಕಿ ಹಚ್ಚಿ, ಅದರಿಂದಲೇ ತಮ್ಮ ಸಿಗರೇಟನ್ನು ಹೊತ್ತಿಸಿಕೊಂಡಿರುವ ವಿಡಿಯೋ ವೈರಲ್ ಆಗಿತ್ತು. ಇದು ಇರಾನ್‌ನ ಕಟ್ಟುನಿಟ್ಟಿನ ಧಾರ್ಮಿಕ ಆಡಳಿತ ಮತ್ತು ಸರ್ವೋಚ್ಚ ನಾಯಕನ ವಿರುದ್ಧದ ದೊಡ್ಡ ಮಟ್ಟದ ಪ್ರತಿಭಟನೆಯ ಸಂಕೇತವಾಗಿ ಬಿಂಬಿತವಾಗಿತ್ತು.
ಖಮೇನಿ ಹತ್ಯೆ, ಇಸ್ರೇಲಿ ದಾಳಿ
ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ದಾಳಿ ನಡೆಸಿದ ಹಿನ್ನಲೆ ಅಲಿ ಖಮೇನಿ ಸಾವನ್ನಪ್ಪಿದರು. ಆದಾಗ್ಯೂ, ಟೆಹ್ರಾನ್‌ನಲ್ಲಿರುವ ಖಮೇನಿಯವರ ಸಂಯುಕ್ತವನ್ನು ನಾಶಪಡಿಸಲಾಗಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ.
ಈ ದಾಳಿಯಲ್ಲಿ ಖಮೇನಿಯವರ ಮಗಳು, ಮೊಮ್ಮಗಳು, ಅಳಿಯ ಮತ್ತು ಸೊಸೆ ಕೂಡ ಸಾವನ್ನಪ್ಪಿದ್ದಾರೆ ಎಂದು ಇರಾನಿನ ಮಾಧ್ಯಮಗಳು ಮಾಹಿತಿ ನೀಡಿವೆ.
ಇಸ್ರೇಲ್ ತನ್ನ ಇತಿಹಾಸದಲ್ಲಿಯೇ ಅತಿ ದೊಡ್ಡ ಹಾರುವ ಕಾರ್ಯಾಚರಣೆಯನ್ನು ಕೈಗೊಂಡಿದ್ದು, ಸುಮಾರು 200 ಅತ್ಯಾಧುನಿಕ ಯುದ್ಧ ವಿಮಾನಗಳನ್ನು ಏಕಕಾಲದಲ್ಲಿ ಬಳಸಿಕೊಂಡು ನಡೆಸಿರುವ ಈ ಕಾರ್ಯಾಚರಣೆಯು ಇರಾನ್‌ನ ಬೆನ್ನೆಲುಬನ್ನೇ ಮುರಿದಿದೆ ಎನ್ನಲಾಗುತ್ತಿದೆ.
ಇರಾನ್ ಈ ದಾಳಿಯನ್ನು ಅಪ್ರಚೋದಿತ ಮತ್ತು ಕಾನೂನುಬಾಹಿರ ಎಂದು ಕರೆದಿದ್ದು , ಇಸ್ರೇಲ್ ಮತ್ತು ಅಮೆರಿಕದ ನೆಲೆಗಳನ್ನು ಹೊಂದಿರುವ ಗಲ್ಫ್ ರಾಷ್ಟ್ರಗಳು ಸೇರಿದಂತೆ ಕನಿಷ್ಠ ಏಳು ಇತರ ದೇಶಗಳ ಮೇಲೆ ಕ್ಷಿಪಣಿಗಳನ್ನು ಹಾರಿಸಿದೆ (ಏಜೆನ್ಸೀಸ್).