ಟೆಹ್ರಾನ್/ಜೆರುಸಲೇಂ: ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ನಡುವೆಯೇ, ಇರಾನ್ ಹೊಸ ಷರತ್ತೊಂದನ್ನು ಮುಂದಿಟ್ಟಿದೆ. ಇಸ್ರೇಲ್ ಲೆಬನಾನ್ ಪ್ರದೇಶದಿಂದ(Lebanon Crisis) ಸಂಪೂರ್ಣವಾಗಿ ಹಿಂದೆ ಸರಿದರೆ ಮಾತ್ರ ಅಮೆರಿಕದೊಂದಿಗೆ ನಡೆಯುತ್ತಿರುವ ಸಂಘರ್ಷ (ಶಾಂತಿ ಒಪ್ಪಂದ) ಮತ್ತು ಪ್ರಾದೇಶಿಕ ಉದ್ವಿಗ್ನತೆಯನ್ನು ಕಡಿಮೆ ಮಾಡುವ ಬಗ್ಗೆ ಚರ್ಚೆ ಸಾಧ್ಯ ಎಂದು ಇರಾನ್ ಸ್ಪಷ್ಟಪಡಿಸಿದೆ.
ಇರಾನ್‌ನ ಈ ಹೇಳಿಕೆ ಇಸ್ರೇಲ್ ಪ್ರಧಾನಿ Benjamin Netanyahu ಅವರು ಹಿಂದಿನ ಬೇಡಿಕೆಯನ್ನು ತಿರಸ್ಕರಿಸಿದ ಬೆನ್ನಲ್ಲೇ ಹೊರಬಿದ್ದಿದೆ. ಇದರಿಂದ ಈಗಾಗಲೇ ತೀವ್ರಗೊಂಡಿರುವ ಪರಿಸ್ಥಿತಿ ಮತ್ತಷ್ಟು ಸಂಕೀರ್ಣವಾಗುವ ಸಾಧ್ಯತೆ ಕಂಡುಬಂದಿದೆ.
ಇರಾನ್ ಅಧಿಕಾರಿಗಳ ಪ್ರಕಾರ, ಲೆಬನಾನ್‌ನಲ್ಲಿ ಇಸ್ರೇಲ್ ಸೇನೆಯ ಹಾಜರಾತಿ ಮತ್ತು ಸೈನಿಕ ಕ್ರಮಗಳು ಪ್ರದೇಶದ ಅಸ್ಥಿರತೆಗೆ ಪ್ರಮುಖ ಕಾರಣವಾಗಿವೆ. ಆದ್ದರಿಂದ ಇಸ್ರೇಲ್ ತನ್ನ ಪಡೆಗಳನ್ನು ಹಿಂತೆಗೆದುಕೊಳ್ಳುವುದು ಶಾಂತಿ ಸ್ಥಾಪನೆಗೆ ಮೊದಲ ಹೆಜ್ಜೆಯಾಗಬೇಕು ಎಂದು ಅವರು ಹೇಳಿದ್ದಾರೆ. ಇನ್ನೊಂದೆಡೆ, ಇಸ್ರೇಲ್ ಸರ್ಕಾರ ಈ ಬೇಡಿಕೆಯನ್ನು ಒಪ್ಪಿಕೊಳ್ಳುವ ಲಕ್ಷಣಗಳು ಕಾಣುತ್ತಿಲ್ಲ. ಭದ್ರತಾ ಕಾರಣಗಳನ್ನು ಉಲ್ಲೇಖಿಸಿರುವ ಇಸ್ರೇಲ್, ತನ್ನ ರಾಷ್ಟ್ರೀಯ ಸುರಕ್ಷತೆ ಮತ್ತು ಗಡಿ ರಕ್ಷಣೆಯ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ.
ಕಳೆದ ಕೆಲವು ತಿಂಗಳುಗಳಿಂದ ಇರಾನ್, ಇಸ್ರೇಲ್ ಮತ್ತು ಅಮೆರಿಕ ನಡುವಿನ ಸಂಬಂಧಗಳು ತೀವ್ರ ಉದ್ವಿಗ್ನತೆಯಿಂದ ಕೂಡಿವೆ. ವಿಶೇಷವಾಗಿ ಮಧ್ಯಪ್ರಾಚ್ಯದ ಹಲವು ಪ್ರದೇಶಗಳಲ್ಲಿ ನಡೆದ ಕ್ಷಿಪಣಿ ದಾಳಿ, ಸೈನಿಕ ಕಾರ್ಯಾಚರಣೆಗಳು ಮತ್ತು ಪ್ರತೀಕಾರದ ಕ್ರಮಗಳು ಪರಿಸ್ಥಿತಿಯನ್ನು ಮತ್ತಷ್ಟು ಗಂಭೀರಗೊಳಿಸಿವೆ. ರಾಜತಾಂತ್ರಿಕ ವಲಯಗಳ ಪ್ರಕಾರ, ಇರಾನ್‌ನ ಈ ಹೊಸ ಷರತ್ತು ಶಾಂತಿ ಮಾತುಕತೆಗಳನ್ನು ಇನ್ನಷ್ಟು ಕಠಿಣಗೊಳಿಸುವ ಸಾಧ್ಯತೆ ಇದೆ. ಲೆಬನಾನ್ ವಿಚಾರದಲ್ಲಿ ಯಾವುದೇ ಒಪ್ಪಂದಕ್ಕೆ ಬರದಿದ್ದರೆ, ಸಂಘರ್ಷ ದೀರ್ಘಕಾಲ ಮುಂದುವರಿಯುವ ಆತಂಕವೂ ವ್ಯಕ್ತವಾಗಿದೆ.
ಕಳೆದ 107 ದಿನಗಳಿಂದ ಮುಂದುವರಿದಿದ್ದ ಅಮೆರಿಕ-ಇರಾನ್ ಸಂಘರ್ಷಕ್ಕೆ(US Iran Peace Deal) ಅಂತ್ಯ ಹಾಡುವ ಮಹತ್ವದ ಶಾಂತಿ ಒಪ್ಪಂದಕ್ಕೆ ಜೂನ್ 19ರಂದು ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಸಹಿ ಹಾಕಲಾಗುವುದು ಎಂದು ವರದಿಯಾಗಿದೆ. ಆದ್ರೆ ಇರಾನ್ ಇದೀಗ ಯೂಟರ್ನ್ ಹೊಡೆದಿದೆ.
ವಿಶ್ವದ ಹಲವು ರಾಷ್ಟ್ರಗಳು ಈಗಾಗಲೇ ಎರಡೂ ದೇಶಗಳಿಗೆ ಸಂಯಮ ವಹಿಸುವಂತೆ ಮನವಿ ಮಾಡಿವೆ. ಯುದ್ಧದ ಪರಿಣಾಮ ಮಧ್ಯಪ್ರಾಚ್ಯಕ್ಕೆ ಮಾತ್ರ ಸೀಮಿತವಾಗದೆ ಜಾಗತಿಕ ಆರ್ಥಿಕತೆ, ತೈಲ ಬೆಲೆ ಹಾಗೂ ಅಂತರರಾಷ್ಟ್ರೀಯ ಭದ್ರತೆಯ ಮೇಲೂ ಪರಿಣಾಮ ಬೀರಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ. ಸದ್ಯ ಇರಾನ್ ಮತ್ತು ಇಸ್ರೇಲ್ ನಡುವಿನ ಮಾತಿನ ಸಮರ ತೀವ್ರಗೊಂಡಿದ್ದು, ಮುಂದಿನ ದಿನಗಳಲ್ಲಿ ಎರಡೂ ರಾಷ್ಟ್ರಗಳು ಯಾವ ನಿಲುವು ತಾಳುತ್ತವೆ ಎಂಬುದರ ಮೇಲೆ ಜಾಗತಿಕ ಸಮುದಾಯದ ಗಮನ ನೆಟ್ಟಿದೆ,(ಏಜೆನ್ಸೀಸ್).