FallInLove  
ವಿದೇಶ

ಪುಸ್ತಕ ಬಿಡಿ, ಪ್ರೀತಿ ಮಾಡಿ... ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದ ವಿಚಿತ್ರ 'Love' ಆಜ್ಞೆ!

ಬೀಜಿಂಗ್: ಸಾಮಾನ್ಯವಾಗಿ ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳಿಗೆ "ಚೆನ್ನಾಗಿ ಓದಿ, ಹೆಚ್ಚು ಅಂಕ ಗಳಿಸಿ" ಎಂದು ಬುದ್ಧಿವಾದ ಹೇಳುತ್ತವೆ. ಆದರೆ, ಚೀನಾದ ವಿಶ್ವವಿದ್ಯಾಲಯವೊಂದು ತನ್ನ ವಿದ್ಯಾರ್ಥಿಗಳಿಗೆ ಈ ಬಾರಿ ಅಚ್ಚರಿಯ ಆದೇಶವೊಂದನ್ನು ನೀಡಿದೆ. "ವಸಂತ ರಜಾದಿನಗಳಲ್ಲಿ ಹೂವುಗಳನ್ನು ನೋಡಿ ಆನಂದಿಸಿ ಮತ್ತು ಪ್ರೀತಿಯಲ್ಲಿ ಬೀಳಿರಿ" (Love) ಎಂದು ಅಧಿಕೃತವಾಗಿ ಘೋಷಿಸಿದೆ!
ಚೀನಾದ 'ಸಿಚುವಾನ್ ಸೌತ್‌ವೆಸ್ಟ್ ವೋಕೇಶನಲ್ ಕಾಲೇಜ್ ಆಫ್ ಏವಿಯೇಷನ್' ತನ್ನ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಏಪ್ರಿಲ್ 1 ರಿಂದ 6 ರವರೆಗೆ ವಿಶೇಷ ರಜೆ ಘೋಷಿಸಿದೆ. ಈ ರಜೆಯ ಥೀಮ್ "ಹೂವುಗಳನ್ನು ನೋಡಿ, ರೋಮಾನ್ಸ್ ಅನುಭವಿಸಿ" ಎಂಬುದಾಗಿದೆ. ಕೇವಲ ಅಂಕಗಳ ಬೆನ್ನತ್ತದೆ, ಪ್ರಕೃತಿಯನ್ನು ಆಸ್ವಾದಿಸಿ ಮತ್ತು ಜೀವನದ ಸಂಗಾತಿಯನ್ನು ಹುಡುಕಿಕೊಳ್ಳಿ ಎಂದು ಕಾಲೇಜು ತನ್ನ ಅಧಿಕೃತ ವೀಚಾಟ್ (WeChat) ಖಾತೆಯಲ್ಲಿ ತಿಳಿಸಿದೆ.

ಸರ್ಕಾರದ ಈ ಅನಿವಾರ್ಯ ನಿರ್ಧಾರಕ್ಕೆ ಕಾರಣವೇನು?

ಚೀನಾ ಇಂತಹ ವಿಭಿನ್ನ ಪ್ರಯೋಗಕ್ಕೆ ಕೈಹಾಕಲು ಎರಡು ಪ್ರಮುಖ ಕಾರಣಗಳಿವೆ ಎಂದು ಹೇಳಲಾಗುತ್ತಿದೆ.
ಕುಸಿಯುತ್ತಿರುವ ಜನನ ಪ್ರಮಾಣ: ಚೀನಾದಲ್ಲಿ ಜನನ ಪ್ರಮಾಣವು ಸತತ ನಾಲ್ಕನೇ ವರ್ಷವೂ ದಾಖಲೆ ಮಟ್ಟದಲ್ಲಿ ಕುಸಿದಿದೆ. ಯುವಕ-ಯುವತಿಯರು ಮದುವೆ ಮತ್ತು ಮಕ್ಕಳ ಬಗ್ಗೆ ಆಸಕ್ತಿ ಕಳೆದುಕೊಳ್ಳುತ್ತಿರುವುದು ಚೀನಾ ಸರ್ಕಾರಕ್ಕೆ ದೊಡ್ಡ ತಲೆನೋವಾಗಿದೆ. ಹೀಗಾಗಿ, ಯುವಜನತೆ ಪರಸ್ಪರ ಭೇಟಿಯಾಗಲು ಮತ್ತು ಸಂಬಂಧ ಬೆಳೆಸಲು ಪ್ರೋತ್ಸಾಹ ನೀಡಲಾಗುತ್ತಿದೆ.
ಆರ್ಥಿಕ ಚೇತರಿಕೆ: ರಜೆ ನೀಡಿ ಪ್ರವಾಸಕ್ಕೆ ಪ್ರೇರೇಪಿಸುವುದರಿಂದ ದೇಶದ ಒಳಗೆ ಪ್ರವಾಸೋದ್ಯಮ ಮತ್ತು ಬಳಕೆ (Consumption) ಹೆಚ್ಚಾಗುತ್ತದೆ. 140 ಕೋಟಿ ಜನಸಂಖ್ಯೆಯ ಚೀನಾ ತನ್ನ ಆರ್ಥಿಕತೆಯನ್ನು ಚುರುಕುಗೊಳಿಸಲು ಇಂತಹ ಹಾದಿ ಹಿಡಿದಿದೆ.

ಮಕ್ಕಳ ಸ್ನೇಹಿ ನಗರಗಳ ನಿರ್ಮಾಣ

ಚೀನಾದ ರಾಷ್ಟ್ರೀಯ ಅಭಿವೃದ್ಧಿ ಮತ್ತು ಸುಧಾರಣಾ ಆಯೋಗವು (NDRC) 'ಮಕ್ಕಳ ಸ್ನೇಹಿ ನಗರಗಳ' ನಿರ್ಮಾಣಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಶಿಕ್ಷಣ, ಆರೋಗ್ಯ ಮತ್ತು ಕ್ರೀಡಾ ಕ್ಷೇತ್ರಗಳಲ್ಲಿ ಸುಧಾರಣೆ ತರುವ ಮೂಲಕ, ದಂಪತಿಗಳು ಹೆಚ್ಚು ಮಕ್ಕಳನ್ನು ಹೊಂದಲು ಪೂರಕ ವಾತಾವರಣ ನಿರ್ಮಿಸಲು ಬೀಜಿಂಗ್ ಸರ್ಕಾರ ಯೋಜಿಸಿದೆ.
ಒಟ್ಟಿನಲ್ಲಿ, ಅತಿ ಹೆಚ್ಚು ಒತ್ತಡದ ಶಿಕ್ಷಣ ಪದ್ಧತಿಗೆ ಹೆಸರಾಗಿದ್ದ ಚೀನಾ, ಈಗ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ವಿದ್ಯಾರ್ಥಿಗಳನ್ನು ಪುಸ್ತಕದಿಂದ ದೂರವಿಟ್ಟು 'ಪ್ರೀತಿ'ಯ ಹಾದಿಗೆ ತಳ್ಳುತ್ತಿರುವುದು ಜಾಗತಿಕ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ,(ಏಜೆನ್ಸೀಸ್​).