ಕಿಮ್ನ ಆ ಒಂದು ಘೋಷಣೆ, ತಂಗಿ ಯೋ ಜೊಂಗ್‌ಗೆ ಸಿಕ್ಕಿತು ಪವರ್ ಫುಲ್ ಪಟ್ಟ! ಅತ್ತೆ-ಸೊಸೆ ಕಾಳಗಕ್ಕೆ ಬಿಗ್ ಟ್ವಿಸ್ಟ್..?
ಪ್ಯೋಂಗ್ಯಾಂಗ್: ರಹಸ್ಯಗಳ ನಾಡು ಉತ್ತರ ಕೊರಿಯಾದಲ್ಲಿ ಭಾರಿ ರಾಜಕೀಯ ಬದಲಾವಣೆಗಳು ನಡೆಯುತ್ತಿವೆ. ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅವರ ಕಿರಿಯ ತಂಗಿ ಕಿಮ್ ಯೋ ಜೊಂಗ್(Kim Yo Jong) ಈಗ ದೇಶದ ಅಧಿಕೃತ ಮೌತ್ ಪೀಸ್ ಮಾತ್ರವಲ್ಲದೆ, ಆಡಳಿತಾರೂಢ ವರ್ಕರ್ಸ್ ಪಾರ್ಟಿಯ ಅತ್ಯಂತ ಪ್ರಭಾವಶಾಲಿ ವಿಭಾಗೀಯ ನಿರ್ದೇಶಕಿ ಆಗಿ ಪದೋನ್ನತಿ ಪಡೆದಿದ್ದಾರೆ. ಈ ಬೆಳವಣಿಗೆಯು ವಿಶ್ವದ ಗಮನ ಸೆಳೆದಿದ್ದು, ಕಿಮ್ ಕುಟುಂಬದೊಳಗಿನ ಅಧಿಕಾರ ಸಂಘರ್ಷದ ಸುಳಿವು ನೀಡುತ್ತಿದೆ.
ಸರ್ವಾಧಿಕಾರಿಯ ನೆರಳಿನಿಂದ ಅಧಿಕಾರದ ಕೇಂದ್ರಕ್ಕೆ..!
2026ರ ಫೆಬ್ರವರಿ 24 ರಂದು ನಡೆದ ಪಕ್ಷದ ಮಹತ್ವದ ಸಭೆಯಲ್ಲಿ ಯೋ ಜೊಂಗ್ರಿಗೆ ಈ ಹೊಸ ಜವಾಬ್ದಾರಿ ನೀಡಲಾಗಿದೆ ಎಂದು ಅಲ್ಲಿನ ಸರ್ಕಾರಿ ಮಾಧ್ಯಮಗಳು ಖಚಿತಪಡಿಸಿವೆ. ಸುಮಾರು 30ರ ಹರೆಯದ ಯೋ ಜೊಂಗ್, ಕೇವಲ ತನ್ನ ಅಣ್ಣನ ಆಪ್ತ ಮಿತ್ರಳಾಗಿ ಉಳಿದಿಲ್ಲ. ದಕ್ಷಿಣ ಕೊರಿಯಾ ಮತ್ತು ಅಮೆರಿಕದ ವಿರುದ್ಧ ಕಟುವಾದ ಹೇಳಿಕೆಗಳನ್ನು ನೀಡುವ ಮೂಲಕ ಅವರು ಈಗಾಗಲೇ ಉತ್ತರ ಕೊರಿಯಾದ ವಿದೇಶಾಂಗ ನೀತಿಯ ರೂವಾರಿಯಾಗಿದ್ದಾರೆ.
ಯೋ ಜೊಂಗ್ ಪ್ರಭಾವಕ್ಕೆ ಕಾರಣಗಳು
ಶಿಕ್ಷಣ: ಸ್ವಿಟ್ಜರ್ಲೆಂಡ್‌ನಲ್ಲಿ ಕಿಮ್ ಜಾಂಗ್ ಉನ್ ಜೊತೆಯಲ್ಲೇ ಶಿಕ್ಷಣ ಪಡೆದಿರುವ ಇವರು, ಅಣ್ಣನ ಅತೀ ಹೆಚ್ಚಿನ ನಂಬಿಕೆಗೆ ಪಾತ್ರರಾಗಿದ್ದಾರೆ.
ಅನುಭವ: ಟ್ರಂಪ್ ಮತ್ತು ಪುಟಿನ್ ಅವರೊಂದಿಗಿನ ಐತಿಹಾಸಿಕ ಶೃಂಗಸಭೆಗಳಲ್ಲಿ ಇವರು ಪ್ರಮುಖ ಪಾತ್ರ ವಹಿಸಿದ್ದರು.
ಸಂದೇಶವಾಹಕಿ: ಶತ್ರು ರಾಷ್ಟ್ರಗಳನ್ನು ಟೀಕಿಸಲು ಕಿಮ್ ಜಾಂಗ್ ಉನ್ ಹೆಚ್ಚಾಗಿ ತಂಗಿಯ ಹೆಸರನ್ನೇ ಬಳಸುತ್ತಾರೆ.
ಮಗಳು ವರ್ಸಸ್ ತಂಗಿ: ಅರಮನೆ ಸಂಘರ್ಷದ ವಾಸನೆ..?
ಇತ್ತೀಚಿನ ದಿನಗಳಲ್ಲಿ ಕಿಮ್ ಜಾಂಗ್ ಉನ್ ತನ್ನ ಹದಿಹರೆಯದ ಮಗಳು ಕಿಮ್ ಜು ಏ ಅವರನ್ನು ಸಾರ್ವಜನಿಕವಾಗಿ ಪದೇಪದೆ ಪ್ರದರ್ಶಿಸುತ್ತಿದ್ದಾರೆ. ದಕ್ಷಿಣ ಕೊರಿಯಾದ ಗುಪ್ತಚರ ಇಲಾಖೆ NIS ಪ್ರಕಾರ, 13 ವರ್ಷದ ಜು ಏ ಈಗ ಕೇವಲ ತರಬೇತಿಯಲ್ಲಿಲ್ಲ, ಅವಳೇ ಮುಂದಿನ ಉತ್ತರಾಧಿಕಾರಿ ಎಂದು ಬಹುತೇಕ ಖಚಿತವಾಗಿದೆ.
ಆದರೆ, ಈಗ ತಂಗಿ ಯೋ ಜೊಂಗ್‌ಗೆ ಸಿಕ್ಕಿರುವ ಹೊಸ ಹುದ್ದೆಯು ಹೊಸ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಅನುಭವಿ ಯೋ ಜೊಂಗ್ ಮತ್ತು ಕಿರಿಯ ಜು ಏ ನಡುವೆ ಮುಂದಿನ 5 ವರ್ಷಗಳಲ್ಲಿ ಅಧಿಕಾರಕ್ಕಾಗಿ ರಕ್ತಸಿಕ್ತ ಸಂಘರ್ಷ ನಡೆಯುವ ಸಾಧ್ಯತೆ ಇದೆ ಎಂದು ವಿಶ್ಲೇಷಕರು ಎಚ್ಚರಿಸಿದ್ದಾರೆ. ಉತ್ತರ ಕೊರಿಯಾದ ಇತಿಹಾಸದಲ್ಲಿ ತನ್ನ ಅಧಿಕಾರಕ್ಕಾಗಿ ಸ್ವಂತ ಚಿಕ್ಕಪ್ಪನನ್ನೇ ಕೊಂದ ಕಿಮ್ ಜಾಂಗ್ ಉನ್, ಈಗ ಮಗಳು ಮತ್ತು ತಂಗಿಯ ನಡುವಿನ ಸಮತೋಲನವನ್ನು ಹೇಗೆ ಕಾಯ್ದುಕೊಳ್ಳುತ್ತಾರೆ ಎಂಬುದು ಕುತೂಹಲಕಾರಿಯಾಗಿದೆ,(ಏಜೆನ್ಸೀಸ್).